ಹಾಸನ: ಜನ್ಮದಿನದ ಸಿಹಿ ಹಂಚಿ ಬರುತ್ತಿದ್ದ ಯುವಕ ಹೆದ್ದಾರಿ ಕಾಮಗಾರಿ ಗುಂಡಿಗೆ ಬಲಿ!

A pothole caused by unscientific construction work on the National Highway near Kanakabhavan in Holenarasipur town has claimed the life of a young man on his birthday.

ಹಾಸನ, ಜುಲೈ 26: ಹೊಳೆನರಸೀಪುರ ಪಟ್ಟಣದ ಕನಕಭವನ ಬಳಿ ನಡೆಯುತ್ತಿರುವ ರಾಷ್ಟ್ರೀಯ ಹೆದ್ದಾರಿ ಅವೈಜ್ಞಾನಿಕ ಕಾಮಗಾರಿಯಿಂದ ಉಂಟಾಗಿರುವ ಗುಂಡಿ ಯುವಕನೊಬ್ಬನನ್ನು ಆತನ ಹುಟ್ಟುಹಬ್ಬದ ದಿನವೇ ಬಲಿ ಪಡೆದಿದೆ.

ತನ್ನ 25ನೇ ಹುಟ್ಟುಹಬ್ಬದ ದಿನವೇ ಕೆ.ಜೆ. ಧನುಜ್ (25) ದುರ್ಮರಣಕ್ಕೀಡಾದ ದುರ್ದೈವಿ.

ನಿನ್ನೆ ರಾತ್ರಿ ಧನುಜ್ ತನ್ನ ಸ್ನೇಹಿತ ಸುಮಂತ್ ಜೊತೆ ಬೈಕ್‌ನಲ್ಲಿ ಲಕ್ಕೂರು ಗ್ರಾಮಕ್ಕೆ ಸಂಬಂಧಿಕರಿಗೆ ಸ್ವೀಟ್ ವಿತರಿಸಲು ತೆರಳಿದ್ದ. ತಡರಾತ್ರಿ 1:30ರ ಸಮಯದಲ್ಲಿ ವಾಪಸ್ ಬರುವಾಗ, ಸುಮಂತ್ ಚಲಾಯಿಸುತ್ತಿದ್ದ ಬೈಕ್ನ ಚಕ್ರ, ಕಾಮಗಾರಿ ನಡೆಯುತ್ತಿದ್ದ ರಾಷ್ಟ್ರೀಯ ಹೆದ್ದಾರಿಯ ಗುಂಡಿಗೆ ಇಳಿದಿದೆ.

ಗುಂಡಿಗೆ ಬಿದ್ದ ಬೈಕ್‌ನಿಂದ ಇಬ್ಬರು ಯುವಕರು ಮೇಲಕ್ಕೆ ಚಿಮ್ಮಿದ್ದು, ಕಾಮಗಾರಿಯ ಕಬ್ಬಿಣದ ಸರಳುಗಳ ಮೇಲೆ ಬಿದ್ದಿದ್ದಾರೆ. ಆ ಸರಳು ಚುಚ್ಚಿಕೊಂಡು ಧನುಜ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಸುಮಂತ್‌ಗೆ ಗಂಭೀರ ಗಾಯಗಳಾಗಿದ್ದು, ಆತನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಸೂಚನಾ ಫಲಕ ಅಥವಾ ಬ್ಯಾರಿಕೇಡ್‌ಗಳನ್ನು ಅಳವಡಿಸದ ರಾಷ್ಟ್ರೀಯ ಹೆದ್ದಾರಿ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಈ ದುರ್ಘಟನೆ ಸಂಭವಿಸಿದೆ ಎಂದು ಆರೋಪಿಸಲಾಗಿದೆ.

ಅಧಿಕಾರಿಗಳ ನಿರ್ಲಕ್ಷ್ಯದ ವಿರುದ್ಧ ಮೃತನ ಪೋಷಕರು ಮತ್ತು ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹೊಳೆನರಸೀಪುರ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಈ ಘಟನೆಯ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.