ಹಾಸನ: ಕೇಂದ್ರ ಸರ್ಕಾರವು ಲಾರಿಗಳ ಎಫ್‌ಸಿ ಶುಲ್ಕ ಹೆಚ್ಚಳ ಮಾಡಿರುವುದನ್ನು ಖಂಡಿಸಿ ಹಾಸನ ಗೂಡ್ಸ್ ಶೆಡ್ ಲಾರಿ ಮಾಲೀಕರ ಸಂಘದ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಶನಿವಾರ ಬೃಹತ್ ಪ್ರತಿಭಟನೆ ನಡೆಸಲಾಯಿತು.
ಕೇಂದ್ರ ಸರ್ಕಾರ ನ.17 ರಿಂದ ಲಾರಿಗಳ ಫಿಟ್ನೆಸ್ ಸರ್ಟಿಫಿಕೇಟ್ (ಎಫ್.ಸಿ) ಶುಲ್ಕವನ್ನು ಹೆಚ್ಚಳಗೊಳಿಸಿದೆ. ಹೆಚ್ಚುವರಿ ಶುಲ್ಕವನ್ನು ಪಾವತಿಸಲು ಲಾರಿ ಮಾಲೀಕರಿಗೆ ಅಸಾಧ್ಯವಾಗಿದ್ದು, ಶುಲ್ಕ ಹೆಚ್ಚಳದಿಂದ ಲಾರಿ ಮಾಲೀಕರಿಗೆ ತೀವ್ರ ತೊಂದರೆಯಾಗಿದೆ ಎಂದು ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಸದ್ಯದ ಪರಿಸ್ಥಿತಿಯಲ್ಲಿ ದೈನಂದಿನ ಜೀವನ ಸಾಗಿಸಲು ಬೇಕಾಗಿರುವ ಅಗತ್ಯ ವಸ್ತುಗಳ ಬೆಲೆ ಹೆಚ್ಚಳವಾಗಿರುವುದರಿಂದ ಈಗ ಕೇಂದ್ರ ಸರ್ಕಾರವು ಹೆಚ್ಚಳಗೊಳಿಸಿರುವ ಶುಲ್ಕ ಭರಿಸಲು ಲಾರಿ ಮಾಲೀಕರಿಗೆ ಸಾಧ್ಯವಾಗದೇ ಇರುವ ಕಾರಣ, ಈ ಹಿಂದೆ ಇದ್ದ ಶುಲ್ಕವನ್ನೇ ಮುಂದುವರೆಸಬೇಕು ಎಂದು ಒತ್ತಾಯಿಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ಕರ್ನಾಟಕ ಗೂಡ್ಸ್ ಶೆಡ್ ಲಾರಿ ಮಾಲೀಕರ ಸಂಘದ ಅಧ್ಯಕ ಸುರೇಶ್ ಕೆ.ಕೆ., ಉಪಾಧ್ಯಕ್ಷ ಶೇಕ್ ಅಹಮ್ಮದ್, ನಿರ್ದೇಶಕ ಮಂಜುನಾಥ್ ಸೇರಿದಂತೆ ಲಾರಿ ಮಾಲೀಕರು ಹಾಗೂ ಚಾಲಕರು ಇದ್ದರು.










