ಸಕಲೇಶಪುರ: ಮಲೆನಾಡು ಭಾಗದಲ್ಲಿ ಗಜ ಗಲಾಟೆ ನಿರಂತರವಾಗಿದೆ.
ಕಾಡಾನೆ ಹಿಂಡಿನ ದಾಳಿಗೆ ಅಪಾರ ಪ್ರಮಾಣದ ಬೆಳೆ ನಾಶವಾಗಿದ್ದರೆ, ಮತ್ತೊಂದೆಡೆ ಕೃಷಿ ಪಂಪ್ ಸೆಟ್ ಹಾನಿಯಾಗಿದೆ.
ತಾಲ್ಲೂಕಿನ, ಮಲ್ಲೇನಹಳ್ಳಿ ಗ್ರಾಮದ ಅಶೋಕ್, ಮಹೇಶ್ ಎಂಬುವವರ ತೋಟದಲ್ಲಿ ಬೀಡುಬಿಟ್ಟಿರುವ ಗಜಪಡೆ, ಪಂಪ್ ಸೆಟ್ ಕಿತ್ತು ಬಿಸಾಡಿ, ಪೈಪ್ಗಳನ್ನು ತುಳಿದು ನಾಶ ಮಾಡಿವೆ. ಕಾಫಿ, ಭತ್ತ, ಜೋಳ ಸೇರಿದಂತೆ ಅಪಾರ ಪ್ರಮಾಣದ ಬೆಳೆ ಹಾಳು ಮಾಡಿವೆ.
ಇತ್ತೀಚೆಗೆ ಗಾಯಗೊಂಡು ನರಕಯಾತನೆ ಅನುಭವಿಸಿ, ಚಿಕಿತ್ಸೆ ನೀಡಲು ಕಾರ್ಯಾಚರಣೆ ನಡೆಸುವ ವೇಳೆ ದಿಢೀರ್ ದಾಳಿ ನಡೆಸಿ ಶಾರ್ಪ್ ಶೂಟರ್ ವೆಂಕಟೇಶ್ ಅವರನ್ನು ಬಲಿ ಪಡೆದಿದ್ದ ಭೀಮ ಆನೆ ಸಹ ಹಿಂಡಿನೊoದಿಗೆ ಸೇರಿಕೊಂಡಿದೆ. ಗಾಯದಿಂದ ಬಹುತೇಕ ಚೇತರಿಸಿಕೊಂಡಿರುವ ಭೀಮ, ಸಲಗಗಳೇ ಹೆಚ್ಚಿರುವ ಗುಂಪಿನೊಳಗೆ ಸೇರಿ ತಾನೂ ದಾಂಧಲೆಯಲ್ಲಿ ತೊಡಗಿದೆ.
ಕಾಡಾನೆಗಳ ಹಿಂಡಿನ ಜೊತೆಯೇ ಸಂಚಾರ ಮಾಡುತ್ತಿದೆ. ಭೀಮನ ಓಡಾಟದಿಂದ ಸ್ಥಳೀಯರು ಆತಂಕಗೊoಡಿದ್ದಾರೆ. ಏಕೆಂದರೆ ಹಿಂದೆಲ್ಲಾ ಊರೊಳಗೇ ಬಂದು ಹೋದರೂ ಭೀಮ ಯಾರಿಗೂ ತೊಂದರೆ ಕೊಡುತ್ತಿರಲಿಲ್ಲ. ಸಿಕ್ಕ ಆಹಾರ ತಿಂದು ತನ್ನ ಪಾಡಿಗೆ ತಾನು ಹೋಗುತ್ತಿತ್ತು. ಆದರೆ ವೆಂಕಟೇಶ್ ಅವರನ್ನು ಬಲಿ ಪಡೆದ ನಂತರ ಸುತ್ತಮುತ್ತಲಿನ ಜನರಲ್ಲಿ ಭಯ ಆವರಿಸಿದೆ.
ಹೀಗಾಗಿ ಅರಣ್ಯ ಸಿಬ್ಬಂದಿ ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದು ಭೀಮ ಹಾಗೂ ಇತರೆ ಆನೆಗಳ ಚಲವಲನ ವೀಕ್ಷಣೆ ಮಾಡುತ್ತಿದ್ದಾರೆ. ಅಲ್ಲದೆ ಗ್ರಾಮಸ್ಥರಿಗೆ ಕಾಡಾನೆಗಳ ಚಲನವಲನದ ಬಗ್ಗೆ ಮಾಹಿತಿ ನೀಡುತ್ತಿದ್ದಾರೆ.
ಬೆಳೆ ನಷ್ಟ: ಪಂಪ್ಸೆಟ್ಗೆ ಹಾನಿ: ಸಲಗಗಳ ಗುಂಪು ಸೇರಿದ ಭೀಮ
ಊರೊಳಗೇ ಬಂದು ಹೋದರೂ ಯಾರಿಗೂ ತೊಂದರೆ ಕೊಡುತ್ತಿರಲಿಲ್ಲ ಭೀಮ; ವೆಂಕಟೇಶ್ ಬಲಿ ಪಡೆದ ನಂತರ ಜನರಲ್ಲಿ ಭೀಮನ ಭಯ










