ಬೇಲೂರು: ಎಡೆಬಿಡದ ಮಳೆ ಮತ್ತು ರೋಗ ಬಾಧೆಯ ನಡುವೆ ಕಷ್ಟಪಟ್ಟು ಬೆಳೆದ ಮುಸುಕಿನ ಜೋಳವು ಫಸಲಿಗೆ ಬಂದ ಸಂದರ್ಭದಲ್ಲಿ ಕಾಡು ಹಂದಿಗಳ ಹಿಂಡು ದಾಳಿ ನಡೆಸಿ ನಾಶಗೊಳಿಸಿರುವ ಘಟನೆ ತಾಲ್ಲೂಕಿನ ಹೆಬ್ಬಾಳು ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಜಯದೇವಪ್ಪ ಹಾಗೂ ಪರ್ವತೇಗೌಡರಿಗೆ ಸೇರಿದ ಆರು ಎಕರೆ ಜಮೀನಿನಲ್ಲಿ ಮುಸುಕಿನ ಜೋಳ ಫಸಲು ಕಟ್ಟುತ್ತಿದ್ದ ಸಂದರ್ಭದಲ್ಲಿ 25ಕ್ಕೂ ಹೆಚ್ಚು ಕಾಡು ಹಂದಿಗಳು ನುಗ್ಗಿ ಜೋಳವನ್ನು ಅರೆ-ಬರೆ ತಿನ್ನುವ ಮೂಲಕ ಇಡೀ ಬೆಳೆ ನಾಶಪಡಿಸಿವೆ.
ಇದರಿಂದ ರೈತನಿಗೆ ದಿಕ್ಕು ತೋಚದಂತಾಗಿದೆ. ಹಂದಿಗಳು ತಿಂದು ಬಿಟ್ಟ ಜೋಳದ ತೆನೆ ಮತ್ತು ಕಡ್ಡಿಯನ್ನು ಜಾನುವಾರುಗಳು ಕೂಡ ತಿನ್ನುವುದಿಲ್ಲ. ಕಳೆದ ಎರಡು ತಿಂಗಳಲ್ಲಿ ಹೊಲ ಉಳುಮೆ ಮಾಡಿಸಿ ದುಬಾರಿ ಬಿತ್ತನೆ ಬೀಜ ಮತ್ತು ರಸಗೊಬ್ಬರ, ಕೂಲಿ ಕಾರ್ಮಿಕರು, ರೋಗಬಾಧೆ ನಡುವೆ ಪೈರು ಅಲ್ಪ-ಸ್ವಲ್ಪ ಚೆನ್ನಾಗಿ ಬಂದಿತ್ತು. ಅದರಿಂದ ಬ್ಯಾಂಕ್ ಸಾಲ ಮತ್ತು ಕೈಸಾಲ ತೀರಿಸಬಹುದು ಎಂಬ ರೈತನ ಲೆಕ್ಕಚಾರ ತಲೆ ಕೆಳಗಾಗಿದೆ.
ಇಡೀ ಹೋಲವನ್ನು ಹಂದಿಗಳು ಧ್ವಂಸ ಮಾಡಿದ ಕಾರಣ ರೈತ ಕುಟುಂಬಗಳು ಕಂಗಾಲಾಗಿವೆ. ಸಂಬಂಧಪಟ್ಟ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿ ಸೂಕ್ತ ಪರಿಹಾರ ಕೊಡಿಸುವ ನಿಟ್ಟಿನಲ್ಲಿ ಕ್ರಮವಹಿಸಬೇಕು ಎಂದು ಹೇಳಿದರು.
ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಜಗದೀಶ್ ಮಾತನಾಡಿ, ಇತ್ತೀಚಿನ ದಿನದಲ್ಲಿ ಕಾಡು ಹಂದಿಗಳ ಕಾಟ ಹೆಚ್ಚಾಗಿದೆ. ಜೋಳದ ಬಿತ್ತನೆಯಾದ ದಿನದಿಂದ ಮೊಳಕೆ ಬರುವ ತನಕ ರಾತ್ರಿ ವೇಳೆ ಕಾವಲು ಇರಬೇಕು. ಈಗಾಗಲೇ ಅರಣ್ಯ ಇಲಾಖೆ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಾಡು ಹಂದಿಗಳ ಕಾಟ ತಪ್ಪಿಸುವುದಲ್ಲದೆ, ಬೆಳೆ ನಷ್ಟವಾದ ರೈತರಿಗೆ ಸೂಕ್ತ ಪರಿಹಾರ ಶೀಘ್ರವೇ ನೀಡಬೇಕು. ಇಲ್ಲದಿದ್ದರೆ ಬೃಹತ್ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಎಚ್ಚರಿಸಿದರು.
ವಲಯ ಅರಣ್ಯಾಧಿಕಾರಿ ಯತೀಶ ಮಾತನಾಡಿ, ಮುಸುಕಿನ ಜೋಳಕ್ಕೆ ಕಾಡು ಹಂದಿಗಳು ನುಗ್ಗಿ ದಾಳಿ ನಡೆಸಿದ ಬಗ್ಗೆ ಈಗಾಗಲೇ ವರದಿಗಳು ಬಂದಿವೆ. ನಷ್ಟದ ಬಗ್ಗೆ ಸೂಕ್ತ ದಾಖಲೆಯನ್ನು ನೀಡಿದರೆ ಪರಿಹಾರ ನೀಡುವ ಅವಕಾಶವಿದೆ. ಕಳೆದ ಭಾರಿ ಸಲ್ಲಿಸಿದ ಅರ್ಜಿಗಳಿಗೆ ಸದ್ಯ ಪರಿಹಾರ ರೈತರ ಖಾತೆಗೆ ಜಮೆಯಾಗಿದೆ ಎಂದರು.










