ಹೆತ್ತ ಕರುಳ ಕುಡಿ ಬೇಡವೆಂದ ತಾಯಿ: ಮಂಡ್ಯ ಶಿಶು ಸಂರಕ್ಷಣಾಧಿಕಾರಿಗಳ ಸುಪರ್ದಿಗೆ ಹಸುಗೂಸು

ಮಂಡ್ಯ: ಮಳವಳ್ಳಿ ಪಟ್ಟಣದ ತಾಲೂಕು ಆಸ್ಪತ್ರೆಯಲ್ಲಿ ಜನ್ಮವಿತ್ತ ತಾಯಿಯೊಬ್ಬಳು ಒಂದು ದಿನದ ಗಂಡು ಮಗುವನ್ನು ಸಾಕಲಾಗದೆಂದು ತಿರಸ್ಕರಿಸಿದ ಪರಿಣಾಮ ಗುರುವಾರ ಶಿಶು ಸಂರಕ್ಷಣೆ ಇಲಾಖೆ ಅಧಿಕಾರಿಗಳಿಗೆ ಹಸ್ತಾಂತರಿಸಿದ ಮನಕಲಕುವ ಘಟನೆ ನಡೆದಿದೆ.

ತಾಲೂಕಿನ ಗ್ರಾಮವೊಂದರ ಮಹಾ ತಾಯಿಯೊಬ್ಬಳು ಇಂತಹ ಕಠಿಣ ನಿರ್ದಾರ ತೆಗೆದುಕೊಂಡವರು. ಆ.4 ರಂದು ಹೆರಿಗೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಪಟ್ಟದ ತಾಲೂಕು ಆಸ್ಪತ್ರೆಗೆ ತುಂಬು ಗರ್ಭಿಣಿ ಒಬ್ಬಳೆ ಹೆರಿಗಾಗಿ ದಾಖಲಾಗಿದ್ದಳು. ಜತೆಯಲ್ಲಿ ಪಾಲಕಾರಾರು ಬಾರದೇ ಹೆರಿಗೆ ಮಾಡಲಾಗದು ಎಂದು ಗರ್ಭಿಣಿ ಗೆ ವೈದ್ಯರು ಮನವರಿಕೆ ಮಾಡಿದ್ದು, ಕುಟುಂಬದವರ ಸಹಕಾರ ಇಲ್ಲ. ಆಗಾಗಿ ಹೆರಿಗೆ ಮಾಡಿಸುವಂತೆ ವೈದ್ಯರಲ್ಲಿ ಮನವಿ ಮಾಡಿದ್ದರು. ಮಾನವೀಯ ದೃಷ್ಟಿಯಿಂದ ದಾಖಲಿಸಿಕೊಂಡು ಪ್ರಸೂತಿಗೆ ಚಿಕಿತ್ಸೆ ಪ್ರಾರಂಭಿಸಿದ್ದರು.

ಹೊಟ್ಟೆಯಲ್ಲೇ ಮಗು ಅಡ್ಡ ತಿರುವಿದ್ದರಿಂದ ಸುಲಲಿತ ಹೆರಿಗೆಯಾಗದೇ ತುಂಬು ಗರ್ಭಿಣಿ ಪ್ರಯಾಸ ಪಡಲಾರಂಬಿಸಿದರು. ಈ ಹಿನ್ನೆಲೆಯಲ್ಲಿ ಆ. 6 ರಂದು ಪ್ರಸೂತಿ ತಜ್ಞ ಡಾ.ನವೀನ್ ಚಂದ್ರ ರವರು ಮಗುವನ್ನು ಒಂದು ಗಂಟೆಗೂ ಹೆಚ್ಚು ಕಾಲ ಶಸ್ತ್ರಚಿಕಿತ್ಸೆ ನಡೆಸಿ ತಾಯಿಯ ಹೊಟ್ಟೆಯಿಂದ ಗಂಡು ಮಗುವನ್ನು ಹೊರತೆಗೆದರು.

ಆದರೇ ನಂತರದ ಸಮಯದಲ್ಲಿ ಮಗುವಿಗೆ ಜನ್ಮ ನೀಡಿದ ಮಹಾ ತಾಯಿ ನನ್ನ ಕುಟುಂಬದವರು ಮಗು ಬೇಡವೆಂದು ಹೇಳುತ್ತಿದ್ದಾರೆ. ಆಗಾಗಿ ಯಾರಿಗಾದರೂ ಸಾಕಲು ಕೊಡುವಂತೆ ಆಸ್ಪತ್ರೆ ಸಿಬ್ಬಂದಿ ಬಳಿ ಹೇಳಿಕೊಂಡಿದ್ದಾರೆ. ಎಷ್ಟೇ ಮನವೊಲಿಸಿದರೂ ಮಗುವನ್ನು ತಿರಸ್ಕರಿಸಿದರು. ದಾಯಾದಿಯೊಬ್ಬರು ಬೇರೊಬ್ಬರಿಗೆ ಮಗು ಕೊಡುವ ಬಗ್ಗೆ ಮಾತುಕತೆ ನಡೆಸುತ್ತಿರುವ ವಿಷಯ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ.ಸಂಜಯ್ ರವರ ಗಮನಕ್ಕೆ ಬಂದಿದೆ.

ಕೂಡಲೇ ಕಾರ್ಯಪ್ರವೃತ್ತರಾದ ಡಾ.ಸಂಜಯ್ ರವರು ಮಗುವಿನ ತಾಯಿ ಬಳಿಗೆ ತೆರಳಿ ಮನವೊಲಿಸಲು ಮುಂದಾದರು. ಒಪ್ಪದಿದ್ದಾಗ ಕಾನೂನು ಪ್ರಕಾರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಆ. 7 ರಂದು ಆಸ್ಪತ್ರೆ ಗೆ ಆಗಮಿಸಿದ ಮಕ್ಕಳ ಸಂರಕ್ಷಣ ಅಧಿಕಾರಿಗಳಿಗೆ ಮಗುವನ್ನು ಒಪ್ಪಿಸಲಾಯಿತು. ಶಸ್ತ್ರಚಿಕಿತ್ಸೆ ಗೆ ಒಳಗಾಗಿರುವ ತಾಯಿಗೆ ಆಸ್ಪತ್ರೆಯ ಲ್ಲಿ ಚಿಕಿತ್ಸೆ ಮುಂದುವರಿಸಲಾಗಿದೆ.