ಹಾಸನ: ಪೊಲೀಸರು–ಪತ್ರಕರ್ತರ ನಡುವೆ ಸೌಹಾರ್ದಯುತ ಕ್ರಿಕೆಟ್ ಪಂದ್ಯಾವಳಿ- ಪೊಲೀಸ್ ತಂಡಕ್ಕೆ ಜಯ-

A friendly cricket tournament was held at the DAR Ground in Hassan City between two teams each from the District Police and the Hassan District Journalists Association.

ಹಾಸನ: ನಗರದ ಡಿಎಆರ್ ಮೈದಾನದಲ್ಲಿಂದು ಜಿಲ್ಲಾ ಪೊಲೀಸರು ಮತ್ತು ಹಾಸನ ಜಿಲ್ಲಾ ಪತ್ರಕರ್ತರ ಸಂಘದ ತಲಾ ಎರಡು ತಂಡಗಳ ನಡುವೆ ಸೌಹಾರ್ದಯುತ ಕ್ರಿಕೆಟ್ ಪಂದ್ಯಾವಳಿ ನಡೆಯಿತು.

ಬೆಳಗ್ಗೆ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಡಾ.ಶ್ರೀನಿಧಿ, ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಜೆ.ಆರ್.ಕೆಂಚೇಗೌಡ ಹಾಗೂ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ಎಚ್.ಬಿ.ಮದನಗೌಡ ಬ್ಯಾಟಿಂಗ್ ಮತ್ತು ಬೌಲಿಂಗ್ ಮಾಡುವ ಮೂಲಕ ಚಾಲನೆ ನೀಡಿದರು.

ನಂತರ ಮಾತನಾಡಿದ ಶ್ರೀನಿಧಿ ಅವರು, ಜಿಲ್ಲೆಯಲ್ಲಿ ಮೊದಲಿಂದಲೂ ಪೊಲೀಸರು ಮತ್ತು ಪತ್ರಕರ್ತರ ನಡುವೆ ಕ್ರಿಕೆಟ್ ಪಂದ್ಯಾವಳಿ ನಡೆಯುತ್ತಾ ಬಂದಿದೆ. ಇಬ್ಬರೂ ಒಂದೊಂದು ರೀತಿಯಲ್ಲಿ ಸಾಮಾಜಿಕ ಸೇವೆಯಲ್ಲಿ ತೊಡಗಿ, ಸಾರ್ವಜನಿಕ ಸೇವೆ ಮಾಡುತ್ತಿರುತ್ತೇವೆ. ಪೊಲೀಸರು-ಪತ್ರಕರ್ತರ ನಡುವೆ ಅವಿನಾಭಾವ ಸಂಬAಧ ಇರುವುದು ಒಳ್ಳೆಯ ಬೆಳವಣಿಗೆ, ಇದು ಹೀಗೆಯೇ ಮುಂದುವರಿಯುವುದು ಸ್ವಾಗತಾರ್ಹ ಹಾಗೂ ಉತ್ತಮ ಬೆಳವಣಿಗೆ ಎಂದರು.

ಎಚ್.ಬಿ.ಮದನಗೌಡ ಮಾತನಾಡಿ, ಪೊಲೀಸರು ಮತ್ತು ಪತ್ರಕರ್ತರು ಸದಾ ಒತ್ತಡದಲ್ಲಿ ಕೆಲಸ ಮಾಡುವವರು. ಸಿಕ್ಕ ಬಿಡುವಿನಲ್ಲಿ ಈ ರೀತಿಯ ಪಂದ್ಯಾವಳಿ ಆಡುವುದು ಇಬ್ಬರ ನಡುವೆ ಬಾಂಧವ್ಯವೃದ್ಧಿಗೆ ಸಹಕಾರಿ ಆಗಲಿದೆ. ಸಂಬಂಧ ಮತ್ತಷ್ಟು ಗಟ್ಟಿಯಾಗಲಿದೆ ಎಂದು ಹೇಳಿದರು.

ಜಿಲ್ಲೆಯಲ್ಲಿ ಹಿಂದಿನಿಂದಲೂ ಪೊಲೀಸರು ಮತ್ತು ಪತ್ರಕರ್ತರ ನಡುವೆ ಉತ್ತಮ ಸ್ನೇಹ ಸಂಬಂಧ, ಬಾಂಧವ್ಯ ಇದೆ. ಅದು ಹೀಗೆಯೇ ಮುಂದುವರಿಯಲಿ ಎಂದು ಆಶಿಸಿದರು.

ಜೆ.ಆರ್.ಕೆಂಚೇಗೌಡ ಮಾತನಾಡಿ, ಯಾವುದೇ ಕ್ರೀಡೆಯಲ್ಲಿ ಸೋಲು- ಗೆಲುವು ಸಾಮಾನ್ಯ. ಸೋತಾಗ ಕುಗ್ಗದೆ, ಗೆದ್ದಾಗ ಹಿಗ್ಗದೆ ಪ್ರೀತಿ, ಸ್ನೇಹ ಬಾಂಧವ್ಯ ಮುಂದುವರಿಸಿಕೊಂಡು ಹೋಗಬೇಕು. ಅದಕ್ಕೆಂದೇ ಪಂದ್ಯಾವಳಿ ಆಯೋಜನೆ ಮಾಡಿದ್ದೇವೆ. ಎಲ್ಲರೂ ಕ್ರೀಡಾ ಮನೋಭಾವದಿಂದ ಆಡಿ ಗೆಲುವು ಸಾಧಿಸಿ ಎಂದು ನುಡಿದರು.

ಈ ಸಂದರ್ಭದಲ್ಲಿ ಸಕಲೇಶಪುರ ಡಿವೈಎಸ್ಪಿ ಮಾಲತೇಶ್, ಜಿಲ್ಲಾ ಪತ್ರಕರ್ತರ ಸಂಘದ ಉಪಾಧ್ಯಕ್ಷರಾದ ಎನ್.ನಂಜುಂಡೇಗೌಡ, ಜಿ.ಪ್ರಕಾಶ್, ಮಾಜಿ ಅಧ್ಯಕ್ಷರಾದ ಬಾಳ್ಳುಗೋಪಾಲ್, ಬಿ.ಆರ್.ಉದಯಕುಮಾರ್, ರವಿ ನಾಕಲಗೂಡು, ಹಿರಿಯ ಪತ್ರಕರ್ತರ ಉದಯರವಿ, ಸಂಘದ ಪದಾಧಿಕಾರಿಗಳಾದ ಕೆ.ಜಿ.ಸುರೇಶ್, ಬಿ.ಆರ್. ಬೊಮ್ಮೇಗೌಡ, ಕೆ.ಎಂ.ಹರೀಶ್, ಕುಶ್ವಂತ್, ತ್ಯಾಗರಾಜ್(ಪ್ರಕಾಶ್ ಟಿವಿ5) ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರು ಹಾಗೂ ವಿವಿಧ ಸುದ್ದಿ-ಮಾಧ್ಯಮಗಳ ಪತ್ರಕರ್ತರು ಇದ್ದರು.

ಬೆಸ್ಟ್ ಆಫ್ ತ್ರಿ ಪಂದ್ಯಗಳಲ್ಲಿ ಉತ್ತಮವಾಗಿ ಆಟ ಆಡಿದ ಪೊಲೀಸ್ ತಂಡ ಜಯಭೇರಿ ಬಾರಿಸಿತು. ವಿಜೇತ ತಂಡಗಳ ನಾಯಕರಾದ ಡಿವೈಎಸ್ಪಿ ಮಾಲತೇಶ್, ಇನ್ಸ್ಪೆಕ್ಟರ್ ವಿನಯ್ ಅವರಿಗೆ ಜಿಲ್ಲಾ ಪತ್ರಕರ್ತರ ಸಂಘದ ಪರವಾಗಿ ಜೆ.ಆರ್.ಕೆಂಚೇಗೌಡ ಮತ್ತು ಎಚ್.ಬಿ.ಮದನಗೌಡ ಅವರು 5ಸಾವಿರ ನಗದು ಬಹುಮಾನ ನೀಡಿ ಅಭಿನಂದಿಸಿದರು. ಈ ವೇಳೆ ಆಗಮಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮೊಹಮ್ಮದ್ ಸುಜೀತಾ ಅವರನ್ನು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷರು-ಪದಾಧಿಕಾರಿಗಳು ಹಾಗೂ ಪತ್ರಕರ್ತರು ಹಾರ್ದಿಕವಾಗಿ ಅಭಿನಂದಿಸಿದರು.

A friendly cricket tournament was held at the DAR Ground in Hassan City between two teams each from the District Police and the Hassan District Journalists Association.