ಹಾಸನ: ಯುವಕರ ಗುಂಪುಗಳ ನಡುವೆ ಹೊಡೆದಾಟ, ಗಾಳಿಯಲ್ಲಿ ಗುಂಡು ಹಾರಿಸಿದ ಪುಂಡ: ಎಂಟು ಜನ ಪೊಲೀಸರ ವಶಕ್ಕೆ

A fight broke out between a group of youths in two cars over a trivial reason near the Byadarahalli toll plaza on Goruru Road in Hassan Taluk last night, and one of the youths fired shots in the air. Fortunately, no one was injured.

ಹಾಸನ, ಜುಲೈ 05, 2025:  ಹಾಸನ ತಾಲ್ಲೂಕಿನ ಗೊರೂರು ರಸ್ತೆಯ  ಬ್ಯಾಡರಹಳ್ಳಿ ಟೋಲ್ ಬಳಿ ನಿನ್ನೆ ರಾತ್ರಿ ಕ್ಷುಲ್ಲಕ ಕಾರಣಕ್ಕೆ ಎರಡು ಕಾರುಗಳಲ್ಲಿದ್ದ  ಯುವಕರ ಗುಂಪಿನ ನಡುವೆ ಹೊಡೆದಾಟ ನಡೆದಿದ್ದು, ಓರ್ವ ಯುವಕ ಗಾಳಿಯಲ್ಲಿ ಗುಂಡು ಹಾರಿಸಿದ್ದಾನೆ. ಅದೃಷ್ಟವಶಾತ್ ಯಾರಿಗೂ ಅಪಾಯವಾಗಿಲ್ಲ.

ಕೇರಳದ ಕಟಿಯಾರ್ ದೇವಾಲಯದಿಂದ KA-51-MK-AF-2618 ನಂಬರ್‌ನ ಇಟಿಯೋಸ್ ಕಾರಿನಲ್ಲಿ ದಾವಣಗೆರೆಗೆ ತೆರಳುತ್ತಿದ್ದ ಗಣೇಶ್, ನಿಂಗರಾಜು, ಸಂಜಯ್, ಗಿರೀಶ್, ಮತ್ತು ಕಿರಣ್ ಒಂದು ಗುಂಪನ್ನು ರಚಿಸಿದ್ದರು. ಇನ್ನೊಂದೆಡೆ, KA-04-MK-0024 ವೆರ್ನಾ ಕಾರಿನಲ್ಲಿ ಕೊಡಗಿಗೆ ತೆರಳುತ್ತಿದ್ದ ಬೋಪಣ್ಣ, ಚೇತನ, ಮತ್ತು ಯೋಗೇಶ್.ಸಿ.ಎನ್. ಇನ್ನೊಂದು ಗುಂಪಿನವರಾಗಿದ್ದರು.

ಟೋಲ್ ಬಳಿ ಕಾರು ಮುಂದೆ ತೆಗೆಯುವ ವಿಚಾರಕ್ಕೆ ಎರಡೂ ಗುಂಪುಗಳ ನಡುವೆ ಜಗಳ ಶುರುವಾಗಿದೆ. ಈ ಜಗಳ ವಿಕೋಪಕ್ಕೆ ತಿರುಗಿ, ಎರಡೂ ಕಡೆಯ ಯುವಕರು ಬಡಿದಾಡಿಕೊಂಡಿದ್ದಾರೆ. ನಂತರ ಕಟ್ಟಾಯ ಬಳಿ ಕಾರುಗಳನ್ನು ನಿಲ್ಲಿಸಿ ಮತ್ತೊಮ್ಮೆ ಹೊಡೆದಾಡಿಕೊಂಡಿದ್ದಾರೆ. ಈ ವೇಳೆ ಯೋಗೇಶ್ ಎಂಬಾತ ಗಾಳಿಯಲ್ಲಿ ಗುಂಡು ಹಾರಿಸಿದ್ದಾನೆ ಎಂದು ಆರೋಪಿಸಲಾಗಿದೆ.

ಸ್ಥಳಕ್ಕೆ ಭೇಟಿ ನೀಡಿದ ಗೊರೂರು ಪೊಲೀಸರು ಘಟನೆಯನ್ನು ಪರಿಶೀಲಿಸಿದ್ದಾರೆ. ಎರಡೂ ಕಡೆಯವರು ಪರಸ್ಪರ ದೂರು ದಾಖಲಿಸಿದ್ದು, ಪೊಲೀಸರು ಎಂಟು ಮಂದಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಗೊರೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.