ಹಾಸನ: ದೀಪಾವಳಿ ಸಂದರ್ಭದಲ್ಲಿ ಪಟಾಕಿ ಸಿಡಿದು ಕಣ್ಣಿನ ತೊಂದರೆಗೆ ಸಿಲುಕುವ 15 ವರ್ಷದೊಳಗಿನ ಮಕ್ಕಳಿಗೆ ನಗರದ ವಾಸನ್ ಐ ಕೇರ್ ಆಸ್ಪತ್ರೆಯಲ್ಲಿ ಅ.14ರಿಂದ 31 ರ ವರೆಗೆ ಉಚಿತ ತಪಾಸಣೆ ಮತ್ತು ಚಿಕಿತ್ಸೆ ನೀಡುವ ಶಿಬಿರ ಹಮ್ಮಿಕೊಳ್ಳಲಾಗಿದೆ.
ಸುದ್ದಿಗೋಷ್ಟಿಯಲ್ಲಿ ಈ ವಿಷಯ ತಿಳಿಸಿದ ರೆಟಿನಾ ಸ್ಪೆಷಲಿಸ್ಟ್ ಡಾ.ಪ್ರಿಯಾ, ಪಟಾಕಿ ಸಿಡಿದು ಮಕ್ಕಳ ಕಣ್ಣಿಗೆ ಹಾನಿಯಾದರೆ ಕೂಡಲೇ ನಮ್ಮ ಆಸ್ಪತ್ರೆಗೆ ಕರೆದುಕೊಂಡು ಬನ್ನಿ. ತುರ್ತು ಚಿಕಿತ್ಸೆ ನೀಡುವುದರಿಂದ ದೃಷ್ಟಿ ದೋಷ ಆಗುವುದನ್ನು ತಪ್ಪಿಸಬಹುದು ಎಂದರು.
ಮಕ್ಕಳು ಸುರಕ್ಷಿತೆ ವಹಿಸದೇ ಇದ್ದರೆ ಗುಡ್ಡೆ, ಕಾರ್ನಿಯಾ ಕಣ್ಣಿನ ವಿವಿಧ ಭಾಗಗಳಿಗೆ ಸಮಸ್ಯೆ ಆಗುವ ಅಪಾಯ ಇದೆ. ಇದರಿಂದ ಕಣ್ಣಿನ ದೃಷ್ಟಿಯೂ ಹೋಗುವ ಸಾಧ್ಯತೆ ಇದೆ. ಪಟಾಕಿ ಸಿಡಿದು ಗಾಯ ಆದ ತಕ್ಷಣ ಕಣ್ಣಿನ ಆಸ್ಪತ್ರೆಗೆ ಕರೆದುಕೊಂಡು ಹೋಗಬೇಕು, ಪ್ರಾಥಮಿಕ ಚಿಕಿತ್ಸೆ ಕೊಡಿಸಬೇಕು ಎಂದು ಮನವಿ ಮಾಡಿದರು.
ದೇಶಾದ್ಯಂತ ನಮ್ಮ ಆಸ್ಪತ್ರೆಯ 176ಶಾಖೆಗಳಿವೆ. ಬೆಂಗಳೂರಿನಲ್ಲಿ9, ಇತರೆ ಭಾಗಗಳಲ್ಲಿ 9ಕೇರ್ ಸೆಂಟರ್‌ಗಳಿವೆ ಎಂದರು. ಡಾ.ಸ್ನೇಹಾ ಮಾತನಾಡಿ, ಕಣ್ಣಿಗೆ ಕನ್ನಡಕ ಹಾಕಿ ಪಟಾಕಿ ಹೊಡೆಯುವುದು ಉತ್ತಮ.
ಆದರೂ ಎಚ್ಚರಿಕೆ ತಪ್ಪಿ ಕಣ್ಣು ಕೆಂಪಾದರೆ, ನೀರು ತುಂಬಿಕೊಂಡರೆ ಕೂಡಲೇ ಆಸ್ಪತ್ರೆಗೆ ಕರೆದುಕೊಂಡು ಬನ್ನಿ, ಶೀಘ್ರ ಚಿಕಿತ್ಸೆ ಕೊಡಿಸಿ, ಸ್ವಯಂ ಚಿಕಿತ್ಸೆ ಬೇಡ, ಮಕ್ಕಳ ಮೇಲೆ ಹಿರಿಯರು ನಿಗಾ ವಹಿಸುವುದು ಒಳಿತು ಎಂದರು. ಸುದ್ದಿಗೋಷ್ಟಿಯಲ್ಲಿ ಮೋಹನ್ ಇದ್ದರು.










