ಹಾಸನ: ‘ದೇವರೇ ನಾನು ನಿನ್ನನ್ನು ಪ್ರೀತಿಸುತ್ತೇನೆ, ನೀವು ನನ್ನನ್ನು ಪ್ರೀತಿಸ್ತೀರಾ? ಇಲ್ವ?’ ದೇವರಿಗೇ ಆಪ್ಷನ್ ಕೊಟ್ಟು ಪತ್ರ ಬರೆದ‌ ನಾಲ್ಕನೇ ತರಗತಿ ಬಾಲಕ!: ಮುಗ್ಧ ಭಕ್ತಿ ಕಂಡು ಭಾವುಕರಾದ ಪೋಷಕರು

Hassan: It is common for teachers to ask students multiple choice questions in schools, but here a boy surprised his parents by setting an optional question for God himself, displaying his innocent devotion.

ಹಾಸನ: ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಶಿಕ್ಷಕರು ಬಹು ಆಯ್ಕೆಯ ಪ್ರಶ್ನೆ ಕೇಳುವುದು ಸಾಮಾನ್ಯ ಸಂಗತಿ, ಆದರೆ ಇಲ್ಲಿ ಬಾಲಕನೊಬ್ಬ ದೇವರಿಗೇ ಆಪ್ಷನಲ್ ಕ್ವಶ್ಚನ್ ಸೆಟ್ ಮಾಡಿ ತನ್ನ ಮುಗ್ಧ ಭಕ್ತಿ ಮೆರೆದು ಪೋಷಕರನ್ನು ಅಚ್ಚರಿಗೆ ದೂಡಿದ್ದಾನೆ.

ನಗರದ ಖಾಸಗಿ ಶಾಲೆಯೊಂದರಲ್ಲಿ ಶನಿವಾರ FA-3 ಅಂಕಪಟ್ಟಿ ವಿತರಣೆ ಹಾಗೂ ಪೋಷಕರು-ಶಿಕ್ಷಕರ ಸಭೆ ಆಯೋಜನೆಯಾಗಿತ್ತು. ಆ ಶಾಲೆಯ ನಾಲ್ಕನೇ ತರಗತಿ ವಿದ್ಯಾರ್ಥಿಯೊಬ್ಬ ಬೆಳಗ್ಗೆ ದೇವರ ಮನೆಯಲ್ಲಿ ದೇವರ ಫೋಟೋ ಎದುರು ಇರಿಸಿದ್ದ ಪತ್ರವನ್ನು ತಮ್ಮ ವಾಟ್ಸಪ್ ಸ್ಟೇಟಸ್ ನಲ್ಲಿ ಹಂಚಿಕೊಂಡಿದ್ದಾರೆ.

ತನಗೆ ಫೈಬರ್ ಬ್ಯಾಟ್ ಬೇಕು ಎಂದು ಬೇಡಿಕೆಯಿಟ್ಟಿದ್ದ ಮಗನಿಗೆ ತಂದೆ, ಓದಿ‌ನ ಕಡೆ ಹೆಚ್ಚು ಗಮನ ನೀಡಲಿ ಎಂದು ಈ ಬಾರಿಯ ಟೆಸ್ಟ್ ನಲ್ಲಿ 98% ಅಂಕ ಪಡೆದರೆ ಕೊಡಿಸುವುದಾಗಿ ಭರವಸೆ ನೀಡಿದ್ದರು.

ಅದನ್ನು ತಮ್ಮ ಪುತ್ರ ಅಷ್ಟೊಂದು ಗಂಭೀರವಾಗಿ ತೆಗೆದುಕೊಂಡಿದ್ದಾನೆ ಎಂದೇನೂ ತಂದೆಗೆ ಅನ್ನಿಸಿರದ ಕಾರಣ ಅವರು ಅದನ್ನು ಮರೆತಿದ್ದರು. ಶನಿವಾರ ಪೋಷಕರು-ಶಿಕ್ಷಕರ ಸಭೆಯಲ್ಲಿ ಪಾಲ್ಗೊಂಡ ಅವರು ಮಗ ಶೇ. 96.65 ಅಂಕ ಪಡೆದಿದ್ದರಿಂದ ಖುಷಿಯಾಗಿಯೇ ಮನೆಗೆ ಹಿಂದಿರುಗಿದ್ದರು.

ಸಂಜೆ ಅವರು ಮನೆಯಲ್ಲಿ ದೇವರ ಮನೆಗೆ ಹೋದಾಗ ಫೋಟೋ ಎದುರು ಇದ್ದ ಪತ್ರ ಗಮನಕ್ಕೆ ಬಂದಿದೆ. ಅದನ್ನು ತೆರೆದು ನೋಡಿದಾಗ ತಮ್ಮ ಮಗನ ಮುಗ್ಧ ದೈವ ಭಕ್ತಿ ಕಂಡು ಭಾವುಕರಾಗಿದ್ದಾರೆ.

ಬಾಲಕ ದೇವರಿಗೆ ಬರೆದಿರುವ ಪತ್ರದ ಪ್ರತಿ

Please ದೇವರೆ ಈ ಸಲ ನನಗೆ 98% ಪರ್ಸೆಂಟೇಜ್ ಬರಲಿ ದೇವರೆ. ನನಗೆ ಒಂದು ಬ್ಯಾಟ್ ಬೇಕು ದೇವರೇ.
ಈ ದಿನ ನೀನು ರಿಯಲಿ ಮಾಡಬೇಕು ದೇವರೇ ಪ್ಲೀಸ್. ನನಗೆ ಫೈಬರ್ ಬ್ಯಾಟ್ ಬೇಕು ದೇವರೇ.. ಮಾಡುತ್ತೀಯಾ ದೇವರೇ? ನಾನು ನಿನಗೆ ಎಷ್ಟೊಂದು ಪೂಜೆ ಮಾಡಿದ್ದೇನೆ ದೇವರೇ..‌ಇದನ್ನು ನೀನು ಮಾಡು ದೇವರೇ‘ ಎಂದು ಬರೆದಿರುವ ಬಾಲಕ ಶಿವಲಿಂಗದ ಚಿತ್ರ ಬಿಡಿಸಿದ್ದಾನೆ.
ನಂತರ ಪತ್ರ ಮುಂದುವರಿಸಿರುವ ಆತ, ‘ನನಗೋಸ್ಕರ ಮಾಡುತ್ತೀರಾ ದೇವರೇ? ನಾನು ನಿನ್ನನ್ನು ಪ್ರೀತಿ ಮಾಡುತ್ತೇನೆ ದೇವರೇ, ನೀನು ನನ್ನನ್ನು ಪ್ರೀತಿ ಮಾಡುತ್ತೀರಾ ದೇವರೇ? ಎಂದು ಪ್ರಶ್ನೆ‌ ಬರೆದು ಮಾಡುತ್ತೀರ?, ಮಾಡುವುದಿಲ್ಲ? ಎಂದು ಆಯ್ಕೆ ಬರೆದು ನಾನು ನಿಮಗೆ ಆಪ್ಷನ್ ಕೊಡುತ್ತೇನೆ ಕೊಡುತ್ತೇನೆ ದೇವರೇ ಎಂದು ಅದರ ಎದುರು ಟಿಕ್ ಹಾಕಲು ಎರಡು ಬಾಕ್ಸ್ ರಚಿಸಿದ್ದಾನೆ.

ಮಗುವಿನ ಭಾವುಕ ಭಕ್ತಿಗೆ ದೇವರು ಉತ್ತರಿಸದಿದ್ದರೂ ಪತ್ರ ನೋಡಿ ಭಾವುಕರಾದ ತಂದೆ.. ಅವನನ್ನು ಮುದ್ದಾಡಿ ಫೈಬರ್ ಬ್ಯಾಟ್ ಕೊಡಿಸಿದ್ದಾರೆ. ಮಗನ ಮುಗ್ಧ ಭಕ್ತಿ, ಭಾವುಕತೆ ಪೋಷಕರನ್ನು ಅಚ್ಚರಿಗೆ ದೂಡಿದೆ.

ನಾನು ಕೇವಲ ಅವನು ಚೆನ್ನಾಗಿ ಓದಲಿ ಎಂದು‌ 98% ಅಂಕ ಪಡೆದರೆ ಬ್ಯಾಟ್ ಕೊಡಿಸುವುದಾಗಿ ಹೇಳಿದ್ದೆ. ಅವನು ಅದಕ್ಕಿಂತಾ ಒಂದು ಪರ್ಸೆಂಟ್ ಕಡಿಮೆ ಅಂಕ ಪಡೆದಿದ್ದ. ಇದರಿಂದ ಅವನು ಬ್ಯಾಟ್ ಸಿಗುವುದಿಲ್ಲ ಎಂದುಕೊಂಡಿದ್ದನೇನೋ. ಆದರೆ ಅವನು ಬೆಳಗ್ಗೆ ಬರೆದಿಟ್ಟ ಪತ್ರ ನಾನು ಸಂಜೆ ಗಮನಿಸಿ ದಂಗಾಗಿ ಹೋದೆ. ಅವನ ಭಾವುಕ ಭಕ್ತಿ ಕಂಡು ನಾನೂ ಭಾವುಕನಾದೆ. ಆದ್ದರಿಂದ ಅವನು ಬರೆದಿರುವ ವ್ಯಾಕರಣ ದೋಷವಿದ್ದರೂ ಭಾವನೆಯನ್ನು ಅರ್ಥ ಮಾಡಿಕೊಳ್ಳುವಂತಿರುವ ಪತ್ರವನ್ನು ವಾಟ್ಸಪ್ ಸ್ಟೇಟಸ್ ನಲ್ಲಿ ಹಂಚಿಕೊಡೆ‘ ಎಂದು ‘ಕನ್ನಡಪೋಸ್ಟ್’ಗೆ ತಿಳಿಸಿದರು.

(ಬಾಲಕನ ಪೋಷಕರು ತಮ್ಮ ಗುರುತು ಬಹಿರಂಗವಾಗುವುದನ್ನು ಬಯಸದಿದ್ದ ಕಾರಣ. ಬಾಲಕ, ಪೋಷಕರ ಹೆಸರನ್ನು ವರದಿಯಲ್ಲಿ ಬಳಸಲಾಗಿಲ್ಲ)

Hassan: It is common for teachers to ask students multiple choice questions in schools, but here a boy surprised his parents by setting an optional question for God himself, displaying his innocent devotion.