ಚಿಕ್ಕಮಗಳೂರು: ಧರ್ಮಸ್ಥಳದ ಉತ್ಖನನ ಕಾರ್ಯಕ್ಕೆ ಸಿ.ಟಿ.ರವಿ ಆಕ್ಷೇಪ, ಷಡ್ಯಂತ್ರದ ಆರೋಪ

ಚಿಕ್ಕಮಗಳೂರು: ಧರ್ಮಸ್ಥಳದಲ್ಲಿ ನಡೆಯುತ್ತಿರುವ ಮೃತದೇಹಗಳ ಉತ್ಖನನ ಕಾರ್ಯಕ್ಕೆ ಸಂಬಂಧಿಸಿದಂತೆ ಬಿಜೆಪಿ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಧರ್ಮಸ್ಥಳ ಮತ್ತು ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರನ್ನು ತನಿಖೆಗೂ ಮೊದಲೇ ಅಪರಾಧಿಗಳ ಸ್ಥಾನದಲ್ಲಿ ನಿಲ್ಲಿಸುವುದು ದೊಡ್ಡ ಷಡ್ಯಂತ್ರವೆಂದು ಆರೋಪಿಸಿದ್ದಾರೆ.

“ಧರ್ಮಸ್ಥಳಕ್ಕೆ ಕೆಟ್ಟ ಹೆಸರು ತರಲು ದೊಡ್ಡ ಷಡ್ಯಂತ್ರ ನಡೆದಿದೆ. ಎಸ್.ಡಿ.ಪಿ.ಐ.ನಂತಹ ಸಂಘಟನೆಯ ಸಾಮುದಾಯಿಕ ಟ್ರ್ಯಾಕ್ ರೆಕಾರ್ಡ್ ಧರ್ಮಸ್ಥಳದ ವಿರುದ್ಧ ಹೋರಾಡುತ್ತಿದೆ. ತನಿಖೆಯನ್ನು ಪ್ರಾಮಾಣಿಕವಾಗಿ ಮತ್ತು ಪಾರದರ್ಶಕವಾಗಿ ನಡೆಸಬೇಕು. ಆಧಾರವಿಲ್ಲದೆ ಯಾರನ್ನೂ ಅಪರಾಧಿಯಂತೆ ಚಿತ್ರಿಸುವ ಅಧಿಕಾರ ಯಾರಿಗೂ ಇಲ್ಲ,” ಎಂದು ರವಿ ಒತ್ತಾಯಿಸಿದ್ದಾರೆ.

ವೀರೇಂದ್ರ ಹೆಗ್ಗಡೆಯವರನ್ನು ದೇವತಾಮನುಷ್ಯ ಎಂದು ಬಣ್ಣಿಸಿರುವ ರವಿ, “ಅವರ ಜೀವನವು ಪರೋಪಕಾರಕ್ಕೆ ಮೀಸಲಾಗಿದೆ. ಚಿಪ್ಪಲ್ಲಿ ಕಾಫಿ ಕೊಡುತ್ತಿದ್ದ ಕಾಲದಲ್ಲಿ ಅವರು ಸಹಪಂಕ್ತಿ ಭೋಜನವನ್ನು ಎತ್ತಿಹಿಡಿದರು. ಎಷ್ಟೋ ಕುಟುಂಬಗಳು ಅವರಿಂದ ಬದುಕು ಕಟ್ಟಿಕೊಂಡಿವೆ,” ಎಂದು ಶ್ಲಾಘಿಸಿದ್ದಾರೆ.

ಕೊಲೆ, ಆತ್ಮಹತ್ಯೆ ಮತ್ತು ಅಪರಿಚಿತ ಶವಗಳ ಬಗ್ಗೆ ತನಿಖೆ ನಡೆಯಬೇಕು ಎಂದು ಒಪ್ಪಿಕೊಂಡಿರುವ ರವಿ, “ತಪ್ಪು ಯಾರೇ ಮಾಡಿದರೂ ತಪ್ಪೇ. ಆದರೆ ತನಿಖೆಗೂ ಮೊದಲೇ ಧರ್ಮಸ್ಥಳ ಮತ್ತು ಧರ್ಮಾಧಿಕಾರಿಯನ್ನು ಗುರಿಯಾಗಿಸುವುದು ಸರಿಯಲ್ಲ,” ಎಂದು ಹೇಳಿದ್ದಾರೆ.

ಧರ್ಮಸ್ಥಳದಲ್ಲಿ ನಡೆಯುತ್ತಿರುವ ಉತ್ಖನನ ಕಾರ್ಯವು ಜನರ ಭಾವನೆಗಳಿಗೆ ಧಕ್ಕೆ ತರುತ್ತಿದೆ ಎಂದು ಆತಂಕ ವ್ಯಕ್ತಪಡಿಸಿರುವ ರವಿ, ತನಿಖೆಯು ಯಾವುದೇ ಒತ್ತಡಕ್ಕೆ ಒಳಗಾಗದೆ ನಡೆಯಬೇಕೆಂದು ಒತ್ತಾಯಿಸಿದ್ದಾರೆ