ಹಾಸನ: ರಸ್ತೆ ಗುಂಡಿ ಮುಚ್ಚೋಕೂ ದುಡ್ಡಿಲ್ಲ- ಸರ್ಕಾರದ ವಿರುದ್ಧ ಶಾಸಕ ಸಿ.ಎನ್. ಬಾಲಕೃಷ್ಣ ಕಿಡಿ

ಹಾಸನ: ಶಾಸಕ ಸಿ.ಎನ್.ಬಾಲಕೃಷ್ಣ ಅವರು ರಾಜ್ಯ ಸರ್ಕಾರದ ಅನುದಾನ ಹಂಚಿಕೆಯಲ್ಲಿ ತಾರತಮ್ಯ ನೀತಿಯ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಮ್ಮ ಕ್ಷೇತ್ರಕ್ಕೆ ಸೂಕ್ತ ಅನುದಾನ ಬಂದಿಲ್ಲ ಎಂದು ಆರೋಪಿಸಿದರು. ಸರ್ಕಾರದ ಮೂರನೇ ವರ್ಷದ ಆಡಳಿತದಲ್ಲೂ ಅಭಿವೃದ್ಧಿಗೆ ಒತ್ತು ನೀಡದಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು.

“50 ಕೋಟಿಯೂ ಇಲ್ಲ, 25 ಕೋಟಿಯೂ ಇಲ್ಲ, ಇನ್ನೂ ಯಾವುದೇ ಅನುದಾನ ಬಂದಿಲ್ಲ. ರಸ್ತೆಗಳೆಲ್ಲಾ ಕೆಸರು ಗದ್ದೆಯಾಗಿವೆ, ಗುಂಡಿಗಳನ್ನು ಮುಚ್ಚಲು ಸಾಧ್ಯವಾಗಿಲ್ಲ. ಜನರ ಬೇಡಿಕೆಗೆ ಸ್ಪಂದಿಸಲು ಆಗುತ್ತಿಲ್ಲ,” ಎಂದು ಬಾಲಕೃಷ್ಣ ಗುಡುಗಿದರು.

ಮುಂಗಾರು ಮಳೆಯಿಂದಾಗಿ ರಸ್ತೆಗಳು ಹಾಳಾಗಿದ್ದು, ವಿದ್ಯಾರ್ಥಿಗಳು ಮತ್ತು ರೈತರು ಕಷ್ಟದಲ್ಲಿ ಸಂಚರಿಸುವಂತಾಗಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.

“ಗ್ಯಾರಂಟಿ ಯೋಜನೆಗಳು ಅಭಿವೃದ್ಧಿಪೂರ್ವಕವಾಗಿರಬೇಕಿತ್ತು, ಆದರೆ ಆಗಿಲ್ಲ. ಸಿದ್ದರಾಮಯ್ಯನವರು ಹಿಂದಿನ ಮುಖ್ಯಮಂತ್ರಿಯಾಗಿದ್ದಾಗ ಸಾಮಾಜಿಕ ನ್ಯಾಯದಡಿ ಅನುದಾನ ನೀಡಿದ್ದರು. ಆದರೆ ಈಗಿನ ಸರ್ಕಾರದ ಅವಧಿಯಲ್ಲಿ ಏಕೆ ತಾರತಮ್ಯ?” ಎಂದು ಪ್ರಶ್ನಿಸಿದರು. “ಶಾಸಕರು ಅನುದಾನಕ್ಕಾಗಿ ಭಿಕ್ಷೆ ಬೇಡುವ ಪರಿಸ್ಥಿತಿಗೆ ತರಬಾರದು. ಎಲ್ಲಾ ಪಕ್ಷದ ಮತದಾರರಿರುವ ನಮ್ಮ ಕ್ಷೇತ್ರದ ಗೌರವವನ್ನು ಉಳಿಸಿಕೊಳ್ಳಲು ಸರ್ಕಾರ ಸಹಕರಿಸಬೇಕು,” ಎಂದು ಒತ್ತಾಯಿಸಿದರು.

ಇದೇ ವೇಳೆ, ಗೊಬ್ಬರ ಕೊರತೆಯ ಸಮಸ್ಯೆಯೂ ತಲೆದೋರುತ್ತಿದೆ ಎಂದು ಶಾಸಕರು ಎಚ್ಚರಿಕೆ ನೀಡಿದ್ದಾರೆ. “ಇನ್ನೂ 15 ದಿನಗಳಲ್ಲಿ ಗೊಬ್ಬರ ಕೊರತೆ ತೀವ್ರವಾಗಬಹುದು, “ತಾರತಮ್ಯ ಮಾಡುವುದು ಒಳ್ಳೆಯ ಆಲೋಚನೆಯಲ್ಲ. ಎಲ್ಲಾ ಕ್ಷೇತ್ರಗಳಿಗೂ ಸರಿ ಸಮಾನವಾಗಿ ಅನುದಾನ ನೀಡಬೇಕೆಂದು ಸರ್ಕಾರವನ್ನು ಒತ್ತಾಯಿಸುತ್ತೇನೆ,” ಎಂದು ಆಗ್ರಹಿಸಿದರು.