ಹಾಸನ: ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸ್ಥಾನವನ್ನು ಮುಸ್ಲಿಂ ಸಮುದಾಯದ ಸೈಯದ್ ತಾಜಿಂ ಬಿನ್ ಸೈಯದ್ ಅಸ್ಲಂಗೆ ನೀಡಬೇಕು ಎಂದು ಆಗ್ರಹಿಸಿ ಸಾವಿರಾರು ಮುಸ್ಲಿಮರು ನಗರದ ಹೇಮಾವತಿ ಪ್ರತಿಮೆಯಿಂದ ಜಿಲ್ಲಾಧಿಕಾರಿಗಳ ಕಚೇರಿಗೆ ಮೆರವಣಿಗೆ ನಡೆಸಿದರು.
ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿರುವ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕಾಂಗ್ರೆಸ್ ಕಾರ್ಯಕರ್ತ ಕಬೀರ್ ಅಹಮದ್, ಮುಸ್ಲಿಂ ಸಮುದಾಯವು ರಾಜಕೀಯ ಮತ್ತು ಆಡಳಿತಾತ್ಮಕ ಕ್ಷೇತ್ರಗಳಲ್ಲಿ ಗಣನೀಯವಾಗಿ ಹಿಂದುಳಿದಿದೆ. ಈ ಸಮುದಾಯವು ಸಮಾಜದ ಮುಖ್ಯವಾಹಿನಿಯಲ್ಲಿ ಸಮಾನ ಭಾಗವಹಿಸಲು ಮತ್ತು ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಏಳಿಗೆಯನ್ನು ಸಾಧಿಸಲು ರಾಜಕೀಯ ಅಧಿಕಾರವು ಅತ್ಯಗತ್ಯವಾಗಿದೆ ಎಂದರು.
ಅಧಿಕಾರವಿಲ್ಲದ ಸಮುದಾಯವು ತನ್ನ ಧ್ವನಿಯನ್ನು ಪರಿಣಾಮಕಾರಿಯಾಗಿ ಎತ್ತಲು ಸಾಧ್ಯವಾಗದಿರುವುದರಿಂದ, ನಾಯಕತ್ವದ ಕೊರತೆಯಿಂದಾಗಿ ಹಲವು ತೊಡಕುಗಳನ್ನು ಎದುರಿಸುತ್ತಿದೆ. ಈ ಕಾರಣಕ್ಕಾಗಿಯೇ ಅಧಿಕಾರ ವಿಕೇಂದ್ರೀಕರಣ ಮತ್ತು ಮೀಸಲಾತಿ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ, ಇದು ಸಮುದಾಯವನ್ನು ಸಬಲಗೊಳಿಸಿ, ಸರ್ವತೋಮುಖ ಅಭಿವೃದ್ಧಿಗೆ ಕಾರಣವಾಗುತ್ತದೆ ಎಂದರು
ವೀರ ಕನ್ನಡಿಗ ಟಿಪ್ಪು ಸೇನೆಯ ರಾಜ್ಯಾಧ್ಯಕ್ಷ ಅಕ್ಮಲ್ ಜಾವಿದ್ ಮಾತನಾಡಿ, ಹಾಸನ ಜಿಲ್ಲೆಯಲ್ಲಿ ಮುಸ್ಲಿಂ ಸಮುದಾಯವು ರಾಜಕೀಯವಾಗಿ ನಿರಾಸಕ್ತಿಯ ಸ್ಥಿತಿಯಲ್ಲಿದೆ. ಕಾಂಗ್ರೆಸ್ ಪಕ್ಷಕ್ಕೆ ವಿಧಾನಸಭಾ ಮತ್ತು ಲೋಕಸಭಾ ಚುನಾವಣೆಗಳಲ್ಲಿ ಸ್ಥಿರವಾದ ಬೆಂಬಲವನ್ನು ನೀಡಿದ್ದರೂ, ದುರದೃಷ್ಟವಶಾತ್, ಈ ಸಮುದಾಯಕ್ಕೆ ಜಿಲ್ಲೆಯಲ್ಲಿ ಯಾವುದೇ ಉನ್ನತ ರಾಜಕೀಯ ಅಥವಾ ಆಡಳಿತಾತ್ಮಕ ಹುದ್ದೆಗಳನ್ನು ನೀಡಲಾಗಿಲ್ಲ ಎಂದರು.
ವಕೀಲ ಹಾಗೂ ಜನಪರ ಸಂಘಟನೆಯ ಮುಖಂಡ ಅನ್ಷದ್ ಪಾಳ್ಯ, ಮುಸ್ಲಿಮರಿಗೆ ನೇರವಾಗಿ ಚುನಾವಣೆಯಲ್ಲಿ ಸ್ಪರ್ಧಿಸಿ ಸಂಸದ (MP), ಶಾಸಕ (MLA) ಅಥವಾ ವಿಧಾನ ಪರಿಷತ್ ಸದಸ್ಯ (MLC) ಆಗುವ ಅವಕಾಶವನ್ನು ಒದಗಿಸಲಾಗಿಲ್ಲ. ಇದರಿಂದ ಸಮುದಾಯದ ರಾಜಕೀಯ ಧ್ವನಿಯು ದುರ್ಬಲವಾಗಿದ್ದು, ಆತ್ಮವಿಶ್ವಾಸ ಮತ್ತು ಭಾಗವಹಿಸುವಿಕೆಯ ಮೇಲೆ ಗಂಭೀರ ಪರಿಣಾಮ ಬೀರಿದೆ ಮುಸ್ಲಿಂ ವ್ಯಕ್ತಿಗೆ ಅಧಿಕಾರ ನೀಡಬೇಕು ಎಂದರು.
ಸಾಮಾಜಿಕ ಕಾರ್ಯಕರ್ತ ಚಾಂದ್ ಪಾಷಾ ಮಾತನಾಡಿ,
ಸೈಯದ್ ತಾಜಿಂ ಅವರಿಗೆ ಹಾಸನ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸ್ಥಾನವನ್ನು ನೀಡುವ ಮೂಲಕ ಮುಸ್ಲಿಂ ಸಮುದಾಯಕ್ಕೆ ರಾಜಕೀಯ ಶಕ್ತಿಯನ್ನು ಒದಗಿಸಬೇಕೆಂದು ಗೌರವಾನ್ವಿತ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಲ್ಲಿ ವಿನೀತವಾಗಿ ಮನವಿ ಮಾಡಿಕೊಳ್ಳುತ್ತೇವೆ ಎಂದರು.
ಸೈಯದ್ ಇಲ್ಯಾಸ್ ಮಾತನಾಡಿ, ಸೈಯದ್ ತಾಜಿಂ ಇವರು ಸಮಾಜದ ಎಲ್ಲ ವರ್ಗಗಳೊಂದಿಗೆ ಸಾಮರಸ್ಯದಿಂದ ಬೆರೆತು, ಸಮಾಜಕ್ಕೆ ಮಾದರಿಯಾಗಿ ನಿಂತಿದ್ದಾರೆ. ಶೋಷಿತ ಮತ್ತು ನಿರ್ಲಕ್ಷಿತರ ಪರವಾಗಿ ಧ್ವನಿಯಾಗಿ, ಸಾಮಾಜಿಕ ನ್ಯಾಯಕ್ಕಾಗಿ ನಿರಂತರವಾಗಿ ಶ್ರಮಿಸುತ್ತಿದ್ದಾರೆ. ಕಾಂಗ್ರೆಸ್ ಪಕ್ಷದ ಸಂಘಟನೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಇವರು, ತಮ್ಮ ತನು-ಮನ-ಧನದಿಂದ ಸಮಾಜಕ್ಕೆ ಗಣನೀಯ ಕೊಡುಗೆ ನೀಡಿದ್ದಾರೆ. ಯಶಸ್ವೀ ಉದ್ಯಮಿಯಾಗಿರುವ ಇವರು, ಉತ್ತಮ ನಡತೆ, ಸಮರ್ಪಣೆ ಮತ್ತು ನಾಯಕತ್ವದ ಗುಣಗಳನ್ನು ಹೊಂದಿದ್ದಾರೆ. ಸಮಾಜ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುವ ಇವರು, ಸಮುದಾಯದ ಒಳಿತಿಗಾಗಿ ತಮ್ಮ ಆರ್ಥಿಕ ಸಂಪನ್ಮೂಲಗಳನ್ನು ಸದುಪಯೋಗಪಡಿಸಿಕೊಂಡಿದ್ದಾರೆ ಎಂದರು.
ಕಾಂಗ್ರೆಸ್ ಕಾರ್ಯಕರ್ತರ ರಘು, ವಿವಿಧ ಸಂಘಟನೆಯ ಮುಖಂಡರು, ಮಹಿಳಾ ಕಾರ್ಯಕರ್ತರು ಸಾವಿರಾರು ಜನರು ಭಾಗವಹಿಸಿದ್ದರು.










