12.7 C
Munich
Home News ಅರಸೀಕೆರೆಯಲ್ಲೂ ಸಾರಿಗೆ ನೌಕರರ ಮುಷ್ಕರಕ್ಕೆ ಉತ್ತಮ ಪ್ರತಿಕ್ರಿಯೆ

ಅರಸೀಕೆರೆಯಲ್ಲೂ ಸಾರಿಗೆ ನೌಕರರ ಮುಷ್ಕರಕ್ಕೆ ಉತ್ತಮ ಪ್ರತಿಕ್ರಿಯೆ

ಅರಸೀಕೆರೆ: ತಮ್ಮ ನಾನಾ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಸಾರಿಗೆ ಇಲಾಖೆ ನೌಕರರು ಪ್ರತಿಭಟನೆ ನಡೆಸುತ್ತಿರುವುದರಿಂದ ವಿದ್ಯಾರ್ಥಿಗಳು ಸೇರಿದಂತೆ ಕೆಎಸ್‌ಆರ್‌ಟಿಸಿ ಬಸ್ ಅವಲಂಬಿತ ಪ್ರಯಾಣಿಕರಿಗೆ ತೊಂದರೆಯಾಯಿತು. ಮುಂಜಾನೆ  ಕೆಂಪು ಬಸ್‌ಗಳು ರಸ್ತೆಗೆ ಇಳಿಯದೆ ಡಿಪೋ ಆವರಣದಲ್ಲಿ ಸಾಲಾಗಿ ನಿಂತರೆ ಇತ್ತ ರಾಜ್ಯ ಸಾರಿಗೆ ಸಂಸ್ಥೆ ಬಸ್ ನಿಲ್ದಾಣದ ಆವರಣದಲಿ ಖಾಸಗಿ ವಾಹನಗಳ ದರ್ಬಾರ್ ಜೋರಾಗಿತ್ತು.

ಪ್ರಯಾಣಿಕರಿಗೆ ತೊಂದರೆಯಾಗದ ರೀತಿ ಪೊಲೀಸರೇ ಮುಂದೆ ನಿಂತು ಖಾಸಗಿ ವಾಹನಗಳನ್ನು ಬಳಸಿಕೊಂಡು ಪ್ರಯಾಣಿಕರ ಸಂಚಾರಕ್ಕೆ ಅನುವು ಮಾಡಿಕೊಡುತ್ತಿದ್ದ ದೃಶ್ಯ ಗಮನ ಸೆಳೆಯಿತು. ಅರಸೀಕೆರೆ ಡಿಪೋನಲ್ಲಿ ೧೧೦ ಬಸ್‌ಗಳಿದ್ದು ಈ ಪೈಕಿ ೮೦ಕ್ಕೂ ಹೆಚ್ಚು ಬಸ್‌ಗಳು ಡಿಪೋ ಆವರಣದಲ್ಲೇ ಉಳಿದರೆ ಮತ್ತೆ ಹೊರ ಊರುಗಳಿಗೆ ಹೋಗಿದ್ದ ಬಸ್‌ಗಳು ಇದ್ದಲ್ಲಿಯೇ ಆಯಾ ಡಿಪೋಗಳಲ್ಲಿ ಸುರಕ್ಷಿತವಾಗಿವೆ ಎಂದು ಸಾರಿಗೆ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದರು.

ಸಾರಿಗೆ ಇಲಾಖೆ ನೌಕರರೆಲ್ಲರೂ ಸೇವಾ ಮನೋಭಾವನೆಯಿಂದಲೇ ಕೆಲಸ ಮಾಡುತ್ತಿದ್ದೇವೆ, ಆದರೆ ನಮ್ಮ ಸೇವೆಗೆ ತಕ್ಕ ಪುರಸ್ಕಾರವನ್ನ ಸರ್ಕಾರ ನೀಡುತ್ತಿಲ್ಲ. ಪ್ರತಿಯೊಂದು ದಿನ ಬಳಕೆಯ ವಸ್ತುಗಳ ಬೆಲೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತದೆ, ಶಿಕ್ಷಣ, ಆರೋಗ್ಯ ವೆಚ್ಚ ದುಬಾರಿಯಾಗುತ್ತಿವೆ, ಹೀಗಾಗಿ ಸಾರಿಗೆ ಇಲಾಖೆ ನೌಕರರು ತಮ್ಮ ಕುಟುಂಬ ನಿರ್ವಹಣೆ ಮಾಡುವುದು ಕಷ್ಟವಾಗುತ್ತಿದೆ. ಈ ನಿಟ್ಟಿನಲ್ಲಿ ಸರ್ಕಾರ ನಮ್ಮ ಸಮಸ್ಯೆಗಳ ಗಂಭೀರವಾಗಿ ಗಮನ ಹರಿಸಬೇಕಿದೆ, ನಮ್ಮ ನ್ಯಾಯ ಸಮ್ಮತ ಬೇಡಿಕೆಗಳನ್ನು ಈಡೇರಿಸುವ ಮೂಲಕ ಸಾರಿಗೆ ಇಲಾಖೆ ನೌಕರರ ಹಿತ ಕಾಯಬೇಕಿದೆ ಎಂದು ಸಾರಿಗೆ ಇಲಾಖೆ ನೌಕರ ಮೂತಿಕೆರೆ ಮಂಜುನಾಥ್ ಒತ್ತಾಯಿದರು.
ಸಾರಿಗೆ ಮುಷ್ಕರ ಸಂಬAಧ ಪತ್ರಿಕೆಯೊಂದಿಗೆ ರಾಜ್ಯ ಗೃಹ ನಿರ್ಮಾಣ ಮಂಡಳಿ ಅಧ್ಯಕ್ಷರೂ ಆದ ಸ್ಥಳೀಯ ಶಾಸಕ ಕೆ.ಎಂ ಶಿವಲಿಂಗೇಗೌಡ ಮಾತನಾಡಿ, ಸಾರಿಗೆ ಇಲಾಖೆ ನೌಕರರೂ ಸೇರಿದಂತೆ ಎಲ್ಲ ಸರ್ಕಾರಿ ನೌಕರರ ಹಿತ ಕಾಯಲು ರಾಜ್ಯ ಸರ್ಕಾರ ಬದ್ಧವಾಗಿದೆ, ಆದ್ಯತೆ ಮೇರೆಗೆ ಸಾರಿಗೆ ಇಲಾಖೆ ನೌಕರರ ಬೇಡಿಕೆಗಳು ಈಡೇರುತ್ತವೆ. ಸಾರಿಗೆ ಇಲಾಖೆ ನೌಕರರು ತಮ್ಮ ಮುಷ್ಕರ ಕೈ ಬಿಟ್ಟು ತಮ್ಮ ಸೇವಾ ಕಾರ್ಯ ಮುಂದುವರಿಸುವುದು ಒಳಿತು ಎಂದು ಮನವಿ ಮಾಡಿದರು.

error: Content is protected !!