11.3 C
Munich
Home News ಹಾಸನ: ಜಿಲ್ಲೆಗೆ 3 ಸಾವಿರ ಮೆಟ್ರಿಕ್ ಟನ್ ಯೂರಿಯಾಗೆ ಬೇಡಿಕೆ ಇಟ್ಟ ಸಂಸದ ಶ್ರೇಯಸ್ ಪಟೇಲ್

ಹಾಸನ: ಜಿಲ್ಲೆಗೆ 3 ಸಾವಿರ ಮೆಟ್ರಿಕ್ ಟನ್ ಯೂರಿಯಾಗೆ ಬೇಡಿಕೆ ಇಟ್ಟ ಸಂಸದ ಶ್ರೇಯಸ್ ಪಟೇಲ್

ಹಾಸನ: ನವದೆಹಲಿಯಲ್ಲಿ ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಜಗತ್ ಪ್ರಕಾಶ್ ನಡ್ಡಾ ಅವರನ್ನು ಭೇಟಿಯಾದ ಸಂಸದ ಶ್ರೇಯಸ್ ಪಟೇಲ್ ವಿವಿಧ ಬೇಡಿಕೆಗಳ ಈಡೇರಿಕೆಗೆ ಮನವಿ ಸಲ್ಲಿಸಿದರು.
ಜಿಲ್ಲೆಗೆ ತುರ್ತಾಗಿ ಆಗಸ್ಟ್ ಅಂತ್ಯದ ವೇಳೆಗೆ 3000 ಮೆಟ್ರಿಕ್ ಟನ್ ಯೂರಿಯಾ ರಸಗೊಬ್ಬರ ಪೂರೈಕೆ ಮಾಡುವಂತೆ ಕೋರಲಾಯಿತು.
ಈಗಿರುವ ಯೂರಿಯಾ ಸಗಟು ಸ್ಟಾಕ್ ಅಗತ್ಯಕ್ಕೆ ತಕ್ಕಷ್ಟು ಇಲ್ಲದೆ ಕೃಷಿ ಉತ್ಪಾದನೆ ಮತ್ತು ರೈತರ ಆದಾಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಆದ್ದರಿಂದ ಕನಿಷ್ಠ 3000 ಮೆಟ್ರಿಕ್ ಟನ್ ಯೂರಿಯಾ ರಸಗೊಬ್ಬರವನ್ನು ಸರಬರಾಜು ಮಾಡಿ ಕೃಷಿಕರಿಗೆ ನೆರವಾಗಬೇಕು ಎಂದು ಮನವಿ ಮಾಡಿದರು.

ಆರೋಗ್ಯ ವಿಚಾರ ಕುರಿತು ಮನವಿ
ಹಾಸನದಲ್ಲಿ ಇತ್ತೀಚಿನ ವರ್ಷಗಳಲ್ಲಿ ಹೃದಯಾಘಾತ ಪ್ರಕರಣಗಳು ಹೆಚ್ಚಾಗಿ ವರದಿಯಾಗಿವೆ.
ಜಿಲ್ಲೆಯಲ್ಲಿ ಕಳೆದ ಎರಡು ವರ್ಷಗಳಲ್ಲಿ ಒಟ್ಟು 507 ಹೃದಯಾಘಾತ ಪ್ರಕರಣಗಳು ಸಂಭವಿಸಿದ್ದು, 140 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಇವರಲ್ಲಿ ಹೆಚ್ಚಿನವರು 20 ರಿಂದ 45 ವರ್ಷದ ವಯೋಮಿತಿಯವರು ಎನ್ನುವುದು ಗಮನಾರ್ಹ ಸಂಗತಿ. ಅಧ್ಯಯನಗಳ ಪ್ರಕಾರ, ಹೃದಯಾಘಾತಕ್ಕೆ ಒಳಗಾಗುವವರಲ್ಲಿ ಶೇ. 35ರಷ್ಟು ಜನರು 40ರ ವಯೋಮಾನದವರಾಗಿದ್ದಾರೆ.
ಯುವಕರಲ್ಲಿ ಉಲ್ಬಣಗೊಳ್ಳುತ್ತಿರುವ ಹೈಪರ್‌ ಟೆನ್ಷನ್, ಮಧುಮೇಹ, ಜೀವನಶೈಲಿ ಹಾಗೂ ಅನುವಂಶಿಕ ಕಾರಣಗಳ ಹಿನ್ನೆಲೆಯಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಅಗತ್ಯ ಕ್ರಮದ ಅಗತ್ಯವಿದೆ.
ಈ ಹಿನ್ನೆಲೆಯಲ್ಲಿ ಸರ್ಕಾರ ಹೃದಯಾಘಾತದಿಂದ ಸಂಭವಿಸುತ್ತಿರುವ ಮರಣ ಪ್ರಮಾಣ ತಡೆಗೆ ರಾಷ್ಟ್ರೀಯ ಮಿಷನ್ ಅನ್ನು ಆರಂಭಿಸಲು ಕೋರಿದರು. ಹೃದಯಾಘಾತ ಮರಣ ತಡೆಗೆ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ICMR) ವಿಶೇಷ ಅಧ್ಯಯನವನ್ನು ಪ್ರಾರಂಭಿಸಲು ವಿನಂತಿಸಿದರು.
ಜೊತೆಗೆ ಹಾಸನ ಜಿಲ್ಲೆಯ ಅರಸೀಕೆರೆ ಮತ್ತು ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲ್ಲೂಕಿನಲ್ಲಿ ಪ್ರತ್ಯೇಕ 100 ಹಾಸಿಗೆಗಳ ಮೆಟರ್ನಲ್ ಅಂಡ್ ಚೈಲ್ಡ್ ಹೆಲ್ತ್ (MCH) ಆಸ್ಪತ್ರೆಗಳ ತೆರೆಯುವ ಅವಶ್ಯಕತೆಯನ್ನು ಸಚಿವರ ಗಮನಕ್ಕೆ ತಂದರು.

error: Content is protected !!