ಬೆಂಗಳೂರು: ಹಾಸನ ಜಿಲ್ಲೆಯಲ್ಲಿ ಹೃದಯಾಘಾತಗಳು ಹೆಚ್ಚಾಗುತ್ತಿರುವ ಕುರಿತಂತೆ ತಾಂತ್ರಿಕ ಸಮಿತಿ ಸದಸ್ಯರು ಅಧ್ಯಯನ ನಡೆಸಿ, ವರದಿ ಸಿದ್ಧಪಡಿಸಿ ಇಂದು ಆರೋಗ್ಯ ಇಲಾಖೆಗೆ ಸಲ್ಲಿಸಿದರು. ಸಮಿತಿ ಸದಸ್ಯರು ಆರೋಗ್ಯ ಇಲಾಖೆಯ ಸಚಿವ ದಿನೇಶ್ ಗುಂಡೂರಾವ್ ಅವರಿಗೆ ಸಲ್ಲಿಸಿದರು.
ವರದಿ ಸಲ್ಲಿಕೆ ಬಳಿಕ ಸಚಿವ ದಿನೇಶ್ ಗುಂಡುರಾವ್ ತಾಂತ್ರಿಕ ಸಮಿತಿ ಸದಸ್ಯರ ಜೊತೆ ಸಭೆ ನಡೆಸಿದರು. ಸಭೆಯಲ್ಲಿ ಹಾಸನ ಜಿಲ್ಲೆಯಲ್ಲಿ ನಡೆಸಿದ ಅಧ್ಯಯನದ ಬಗ್ಗೆ ಚರ್ಚೆ ನಡೆಸಿದರು. ಸಭೆ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಚಿವ ದಿನೇಶ್ ಗುಂಡುರಾವ್, ಹಾಸನದಲ್ಲಿ ಜನರು ಹೃದಯಾಘಾತದಿಂದ ಸಾವಿಗೀಡಾಗಿರುವುದಕ್ಕೆ ಕಾರಣ ಮಧುಮೇಹ, ಮದ್ಯಪಾನ ಮತ್ತು ಕುಟುಂಬದ ಹಿನ್ನೆಲೆ ಅಂತ ವರದಿ ಮೂಲಕ ತಿಳಿದುಬಂದಿದೆ ಎಂದು ಹೇಳಿದರು.
ಇದೇ ವರ್ಷದ ಮೇ ಮತ್ತು ಜೂನ್ ತಿಂಗಳಲ್ಲಿ ಹಾಸನ ಜಿಲ್ಲೆಯಲ್ಲಿ ಹೃದಯಾಘಾತದಿಂದ ಮೃತಪಟ್ಟ 24 ಜನರ ಸಾವಿನ ಬಗ್ಗೆ ತಜ್ಞರು ನೀಡಿದ ಅಧ್ಯಯನ ವರದಿಯಲ್ಲಿ ನಾಲ್ವರು ಹೃದಯ ಸ್ತಂಭನದಿಂದ ಮೃತಪಟ್ಟಿಲ್ಲವೆಂದು ಇದೆ. ಇನ್ನುಳಿದ 20 ಜನರಲ್ಲಿ 10 ಜನರು ಹೃದಯಕ್ಕೆ ಸಂಬಂಧಿ ಸಮಸ್ಯೆಯಿಂದ ಮೃತಪಟ್ಟಿದ್ದಾರೆ. 10 ಜನರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ಹೇಳಬಹುದು. ಮೃತಪಟ್ಟ 20 ಜನರಲ್ಲಿ 15 ಮಂದಿ 45 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದಾರೆ ಎಂದರು.
ಹಾಸನದಲ್ಲಿ ಹೃದಯಾಘಾತ ಹೆಚ್ಚಾಗ್ತಿದೆಯಾ ಎಂಬ ಆತಂಕ ಇತ್ತು. 2024ರಲ್ಲಿ ಹೃದಯಾಘಾತದಿಂದ 24 ಜನರು ಮೃತಪಟ್ಟಿದ್ದಾರೆ. ಈ ವರ್ಷ 20 ಜನರ ಸಾವಾಗಿದೆ, ಆತಂಕ ಪಡುವ ಸಂಗತಿ ಇಲ್ಲ. ಚಿಕ್ಕ ವಯಸ್ಸಿನವರಿಗೆ ಹೃದಯಾಘಾತವಾಗುತ್ತಿದ್ದು ಗಂಭೀರ ವಿಚಾರವಾಗಿದೆ. ಚಿಕ್ಕ ವಯಸ್ಸಿನವರು ಹೃದಯಾಘಾತದಿಂದ ಸಾವನ್ನಪ್ಪುತ್ತಿರುವುದಕ್ಕೆ ಅತಿಯಾದ ಬೊಜ್ಜು ಕಾರಣ ಎಂಬುವುದು ಮರಣೋತ್ತರ ಪರೀಕ್ಷೆಯಲ್ಲಿ ತಿಳಿದುಬಂದಿದೆ ಎಂದು ದಿನೇಶ್ ಗುಂಡೂರಾವ್ ತಿಳಿಸಿದರು.










