ಹಾಸನ: ಶಾಸಕ ಬಿ.ಆರ್.ಪಾಟೀಲ್ ಹಾಗೂ ಸಚಿವ ಜಮೀರ್ ಅಹಮದ್ ಆಪ್ತನ ಜತೆ ಮನೆ ಹಂಚಿಕೆ ಕುರಿತು ನಡೆಸಿರುವ ದೂರವಾಣಿ ಸಂಭಾಷಣೆ ಆಡಿಯೋ ವೈರಲ್ (Audio viral) ಆಗಿರುವ ವಿಚಾರ ರಾಜ್ಯ ರಾಜಕೀಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಈ ಬಗ್ಗೆ ರಾಜ್ಯ ರೈಲ್ವೆ ಮತ್ತು ಜಲ ಶಕ್ತಿ ಕೇಂದ್ರ ಸಚಿವ ವಿ.ಸೋಮಣ್ಣ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡುವಾಗ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
“ಸರ್ಕಾರ ಎಂಥೆಂಥಾ ಸಮಸ್ಯೆ ಇಟ್ಟುಕೊಂಡು ಇಂತಹ ಕ್ಷುಲ್ಲಕ ವಿಚಾರದ ಬಗ್ಗೆ ಅವರ ಪಾರ್ಟಿಯ ಎಂಎಲ್ಎ ಹೇಳುತ್ತಾರೆಂದರೆ ಸರ್ಕಾರಕ್ಕೆ ನೈತಿಕತೆ ಇದೆಯಾ?” ಎಂದು ಸೋಮಣ್ಣ ಪ್ರಶ್ನಿಸಿದ್ದಾರೆ. “ನೈತಿಕತೆ ಇದ್ದಿದ್ದರೆ ಈ ರೀತಿಯ ಘಟನೆಗಳು ನಡೆಯುತ್ತಿತ್ತೇ?” ಎಂದು ಅವರು ಕಿಡಿಕಾರಿದರು.
ಸಚಿವ ಜಮೀರ್ ಅಹಮದ್ ಅವರಿಗೆ ಸಲಹೆ ನೀಡಿದ ಸೋಮಣ್ಣ, “ಜಮೀರ್ ನನಗಿಂತ ವಯಸ್ಸಿನಲ್ಲಿ ಚಿಕ್ಕವರು. ಆಫೀಸ್ನಲ್ಲಿ ಕುಳಿತು ಸಾರ್ವಜನಿಕರ ಅಹವಾಲು ಕೇಳುವುದನ್ನು ಕಲಿತುಕೊಳ್ಳಿ, ಸುತ್ತಾಟ ಕಡಿಮೆ ಮಾಡಲಿ, “ಬಡವರ ಇಲಾಖೆಯಲ್ಲಿ ಏನೇನು ನಡೆಯುತ್ತಿದೆ ಎಂಬುದು ಚರ್ಚೆಯಾಗಲಿ. ನಾನು ಎಲ್ಲ ದಾಖಲೆಗಳನ್ನು ಇಟ್ಟುಕೊಂಡಿದ್ದೇನೆ” ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ, “ಅಲ್ಪಸ್ವಲ್ಪ ಗೌರವ ಇದ್ದರೆ, ಅವರ ಪಾರ್ಟಿಯವರು ಗೌರವ ಸ್ಥಾನದಲ್ಲಿದ್ದವರು ಈ ರೀತಿ ಮಾತನಾಡುತ್ತಾರೆಂದರೆ, ನಿಮ್ಮ ಭಾವನೆ ಏನು?, ನೈತಿಕತೆ ಏನು ಎಂಬುದನ್ನು ಚಿಂತಿಸಿ, ಸಾಮಾನ್ಯ ಜನರ ನೋವನ್ನು ಸರ್ಕಾರ ಅರ್ಥಮಾಡಿಕೊಳ್ಳಬೇಕು” ಎಂದರು.
ಶಾಸಕ ಬಿ.ಆರ್.ಪಾಟೀಲ್ ಅವರ ಮಾತಿಗೆ ಅಭಿನಂದನೆ ಸಲ್ಲಿಸಿದ ಸೋಮಣ್ಣ, “ಬಡವರ ಹೆಸರಿನಲ್ಲಿ ಇಂತಹ ಪಾಪದ ಕೆಲಸ ಮಾಡಿದರೆ ಭಗವಂತ ಕ್ಷಮಿಸಲಾರ” ಎಂದರು.









