BJPಯಲ್ಲಿ ಭಿನ್ನಮತ ಎಲ್ಲಿದೆ? ಶುಭ ಕಾರ್ಯಕ್ಕೆ ಹೋಗೋದು ಭಿನ್ನಮತವೇ? ಮಾಧ್ಯಮಗಳು ಉಪ್ಪು-ಖಾರ ಹಾಕ್ತಿದ್ದಾವೆ: ವಿ.ಸೋಮಣ್ಣ ಅಸಮಾಧಾನ

State Railways and Jal Shakti Union Minister V. Somanna expressed strong objections to media reports that a meeting of BJP dissidents was held at the residence of MP Siddeshwar and provided clarification to reporters.

ಹಾಸನ: “(BJP) ಬಿಜೆಪಿಯಲ್ಲಿ ಎಲ್ಲಿದೆ ಭಿನ್ನಮತ? ಸಿದ್ದೇಶ್ವರ್ ಅವರು ನಾಲ್ಕು ಬಾರಿ ಎಂಪಿಯಾಗಿದ್ದಾರೆ, ಅವರ ತಂದೆ ಮೂರು ಬಾರಿ ಎಂಪಿಯಾಗಿದ್ದಾರೆ. ಅವರ ತಮ್ಮನ ಮಗನ ಮದುವೆಗೆ ನಾನು ಹೋಗಿರಲಿಲ್ಲ, ಆದರೆ ಬೆಂಗಳೂರಿಗೆ ಬಂದ ಮೇಲೆ ಅವರ ಮನೆಗೆ ಭೇಟಿ ನೀಡಿ ಅರ್ಧ ಗಂಟೆ ಕೂತು ಬಂದಿದ್ದೇನೆ. ಇದನ್ನು ಭಿನ್ನಮತ ಎಂದು ಬಿಂಬಿಸುವ ಅವಶ್ಯಕತೆ ಇಲ್ಲ. ಮಾಧ್ಯಮಗಳು ಇದಕ್ಕೆ ಉಪ್ಪು,‌ ಖಾರ ಹಾಕುತ್ತಿವೆ” ಎಂದು ಸೋಮಣ್ಣ ಹೇಳಿದರು.

ಲಿಂಕ್ ಕ್ಲಿಕ್ ಮಾಡಿ ಸೋಮಣ್ಣ ಹೇಳಿಕೆಯ ವಿಡಿಯೋ ವೀಕ್ಷಿಸಿ: https://youtu.be/yPQabHpjPIo

ಸಂಸದ ಸಿದ್ದೇಶ್ವರ ನಿವಾಸದಲ್ಲಿ ಬಿಜೆಪಿ ಭಿನ್ನಮತೀಯರ ಸಭೆ ನಡೆದಿದೆ ಎಂಬ ಮಾಧ್ಯಮಗಳ ವರದಿಗೆ ಸಂಬಂಧಿಸಿದಂತೆ ರಾಜ್ಯ ರೈಲ್ವೆ ಮತ್ತು ಜಲ ಶಕ್ತಿ ಕೇಂದ್ರ ಸಚಿವ ವಿ.ಸೋಮಣ್ಣ ತೀವ್ರ ಆಕ್ಷೇಪ ವ್ಯಕ್ತಪಡಿಸಿ, ಸುದ್ದಿಗಾರರಿಗೆ ಸ್ಪಷ್ಟನೆ ನೀಡಿದರು.

“ಶುಭಕಾರ್ಯಕ್ಕೆ ಹೋಗುವುದು ತಪ್ಪೇ? ಸಿದ್ದೇಶ್ವರ್ ಕುಟುಂಬ ಬಿಜೆಪಿಯ ಅವಿಭಾಜ್ಯ ಅಂಗ” ಎಂದು ಅವರು ಸ್ಪಷ್ಟಪಡಿಸಿದರು.

48 ವರ್ಷಗಳ ರಾಜಕೀಯ ಜೀವನದಲ್ಲಿ ಪಕ್ಷವನ್ನು ತಾಯಿಯಂತೆ ಕಾಣುವುದಾಗಿ ಹೇಳಿರುವ ಸೋಮಣ್ಣ, “ಸಿದ್ದೇಶ್ವರ್ ಅವರು ಭಿನ್ನಮತೀಯರಂತಹವರಲ್ಲ. ಯಾರಾದರೂ ದೊಡ್ಡವರು ಈ ರೀತಿ ಆರೋಪಿಸಿದರೆ, ಅವರ ಹೆಸರು ಕೊಡಿ, ನಾನೇ ಮಾತನಾಡುತ್ತೇನೆ” ಎಂದು ಸವಾಲು ಹಾಕಿದರು.

ರಾಜ್ಯ ಸರ್ಕಾರದ ಕಾರ್ಯವೈಖರಿಯನ್ನು ಟೀಕಿಸಿದ ಸೋಮಣ್ಣ, “ಸೈಟು, ಹಾಳು, ಮೂಳು ಒಂದಾದ ಮೇಲೆ ಒಂದು ಹಗರಣಗಳಿಗೆ ತಗಲಾಕಿಕೊಂಡು ಜನರನ್ನು ದಾರಿತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಎರಡು ವರ್ಷ ಕಳೆದರೂ ಯಾವುದೇ ಪ್ರಗತಿಯಿಲ್ಲ” ಎಂದು ಆರೋಪಿಸಿದ್ದಾರೆ. ಮುಸ್ಲಿಂರಿಗೆ 15% ಮೀಸಲಾತಿ ವಿಚಾರದ ಬಗ್ಗೆ‌ ಪ್ರತಿಕ್ರಿಯಿಸಿದ ಅವರು, “ಯಾರಾದರೂ ಇದಕ್ಕೆ ಅರ್ಜಿ ಸಲ್ಲಿಸಿದ್ದಾರಾ? ಇದು ಕೇವಲ ಜನರ ಗಮನ ಬೇರೆಡೆಗೆ ಸೆಳೆಯುವ ತಂತ್ರ” ಎಂದು ಕಿಡಿಕಾರಿದರು.

“ಜಾತಿಗಣತಿ ಏನಾಯಿತು? ಎಲ್ಲಿಗೆ ಹೋಯಿತು? ಅಭಿವೃದ್ಧಿಗೆ ಹಣವಿಲ್ಲ, ಮಳೆಯಿಂದ ನೂರಾರು ಕಡೆ ಹಾನಿಯಾಗಿದೆ. ಆದರೆ ಸರ್ಕಾರ ಇದಕ್ಕೆ ಪ್ರಾಮುಖ್ಯತೆ ಕೊಡುತ್ತಿಲ್ಲ. ಇದು ಶೋಭೆ ತರುವುದಿಲ್ಲ” ಎಂದು ಸೋಮಣ್ಣ ಆಕ್ಷೇಪ ವ್ಯಕ್ತಪಡಿಸಿದರು.

ರಾಜ್ಯ ಬಿಜೆಪಿ ಅಧ್ಯಕ್ಷರ ಚುನಾವಣೆ ವಿಚಾರವನ್ನು “ವರಿಷ್ಠರು ತೀರ್ಮಾನಿಸುತ್ತಾರೆ” ಎಂದು ತಿಳಿಸಿದ ಅವರು, ಸರ್ಕಾರದ ವಿರುದ್ಧ ಜನರ ಗಮನವನ್ನು ವಿವಾದಗಳಿಂದ ದಾರಿತಪ್ಪಿಸುವ ಪ್ರಯತ್ನ ನಡೆಯುತ್ತಿದೆ ಎಂದು ಆರೋಪಿಸಿದ್ದಾರೆ.