ಹಾಸನ: ಅವರಿಬ್ಬರು ಬಿಹಾರದಿಂದ ಕಟ್ಟಡ ಕಾಮಗಾರಿಗಾಗಿ ಬಂದಿದ್ದ ಕೂಲಿ ಕಾರ್ಮಿಕರು, ಆದರೆ ಅವರ ಕಣ್ಣು ಕುಕ್ಕಿದ್ದು ತಮ್ಮ ಮಾಲೀಕನ ಮೈಮೇಲಿದ್ದ ಚಿನ್ನಾಭರಣ. ಅಪರಿಚಿತ ಬಿಹಾರಿಗಳನ್ನು ನಂಬಿದ ಕಾರಣಕ್ಕಾಗಿ ಆ ಮಾಲೀಕ ಪ್ರಾಣವನ್ನೇ ಕಳೆದುಕೊಂಡಿದ್ದಾರೆ!.
ಹೌದು, ಅರಸೀಕೆರೆ ಪಟ್ಟಣದ ಕೆಎಸ್‌ಆರ್‌ಟಿಸಿ ಬಸ್ ಡಿಪೋ ಮುಂಭಾಗದಲ್ಲಿ ಕಾಂಟ್ರಾಕ್ಟರ್ ವಿಜಯಕುಮಾರ್ (46) ಎಂಬವರನ್ನು ಚಿನ್ನದ ಒಡವೆಗಳನ್ನು ದೋಚುವುದಕ್ಕಾಗಿ ಅವರ ಬಳಿ ಕೆಲಸ ಮಾಡುತ್ತಿದ್ದವರೇ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ನಿನ್ನೆ ರಾತ್ರಿ ನಡೆದಿದೆ.

ವಿಜಯಕುಮಾರ್ ಅರಸೀಕೆರೆಯಲ್ಲಿ ನೂತನ ಕಟ್ಟಡದ ಕಾಮಗಾರಿಗಾಗಿ ಬಿಹಾರ ಮೂಲದ ವಿಕ್ರಂ ಮತ್ತು ಸಚಿನ್ ಎಂಬ ಕಾರ್ಮಿಕರನ್ನು ಕೆಲಸಕ್ಕಾಗಿ ಕರೆತಂದಿದ್ದರು. ಆದರೆ, ವಿಜಯಕುಮಾರ್ ಧರಿಸಿದ್ದ ಚಿನ್ನದ ಒಡವೆಗಳ ಮೇಲೆ ಕಣ್ಣಿಟ್ಟಿದ್ದ ಆರೋಪಿಗಳು, “ನಮಗೆ ಹುಷಾರಿಲ್ಲ, ಆಸ್ಪತ್ರೆಗೆ ಕರೆದುಕೊಂಡು ಹೋಗಿ” ಎಂದು ಕರೆ ಮಾಡಿ ವಿಜಯಕುಮಾರ್‌ರನ್ನು ಕಟ್ಟಡದ ಬಳಿಗೆ ಕರೆಸಿಕೊಂಡಿದ್ದಾರೆ.
ಕಟ್ಟಡದ ಬಳಿ ಬಂದ ತಕ್ಷಣ, ಆರೋಪಿಗಳು ಕಬ್ಬಿಣದ ರಾಡ್ ಮತ್ತು ಸಿಲಿಂಡರ್‌ನಿಂದ ವಿಜಯಕುಮಾರ್ ಮೇಲೆ ದಾಳಿ ಮಾಡಿ ಕೊಲೆಗೈದಿದ್ದಾರೆ. ನಂತರ, ಅವರ ಮೈಮೇಲಿದ್ದ ಒಂದು ಚಿನ್ನದ ಸರ, ಮೂರು ಉಂಗುರಗಳು, ಮೊಬೈಲ್ ಹಾಗೂ ಹಣವನ್ನು ಕಸಿದುಕೊಂಡು ಪರಾರಿಯಾಗಿದ್ದಾರೆ. ಒಂದು ಬೆರಳಿನಿಂದ ಉಂಗುರ ಬಿಡಿಸಲಾಗದೇ ಇದ್ದಾಗ, ಕೊಲೆಗಡುಕರು ಬೆರಳನ್ನೇ ತುಂಡರಿಸಿ ಉಂಗುರ ಸಮೇತ ಹೊತ್ತೊಯ್ದಿರುವ ಘೋರ ಕೃತ್ಯ ಬೆಳಕಿಗೆ ಬಂದಿದೆ.
ಘಟನೆಯ ಸ್ಥಳಕ್ಕೆ ಅರಸೀಕೆರೆ ನಗರ ಪೊಲೀಸ್ ಠಾಣೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆರೋಪಿಗಳ ಪತ್ತೆಗೆ ತನಿಖೆ ಚುರುಕುಗೊಳಿಸಲಾಗಿದೆ.










