ಹಾಸನ: ಬೆಳಗ್ಗೆ ಅರೆಂಜ್ಡ್ ಮ್ಯಾರೇಜ್ ನಲ್ಲಿ ವರ ತಾಳಿ ಕಟ್ಟುವಾಗ ಮದುವೆಯಾಗಲು ನಿರಾಕರಿಸಿ ಸುದ್ದಿಯಾಗಿದ್ದ ವಧು ಪಲ್ಲವಿ ಶುಕ್ರವಾರ ರಾತ್ರಿ ತನ್ನ ಪ್ರಿಯಕರನಿಂದ ಮಾಂಗಲ್ಯಧಾರಣೆ ಮಾಡಿಸಿಕೊಂಡು ನವಜೀವನಕ್ಕೆ ಕಾಲಿಟ್ಟರು.
ಹಾಸನ ನಗರದ ಎಂ.ಜಿ. ರಸ್ತೆಯ ಶ್ರೀ ಆದಿಚುಂಚನಗಿರಿ ಕಲ್ಯಾಣಮಂಟಪಕ್ಕೆ ಹೊಂದಿಕೊಂಡಿರುವ ಗಣಪತಿ ದೇವಾಲಯದ ಆವರಣದಲ್ಲಿ ಪಲ್ಲವಿ ತನ್ನ ಪ್ರಿಯಕರ ರಘುವಿನೊಂದಿಗೆ ಎರಡು ಕುಟುಂಬಸ್ಥರ ಸಮ್ಮುಖದಲ್ಲಿ ವಿವಾಹವಾದಳು.
ಹಾಸನ ತಾಲ್ಲೂಕಿನ ಬಸವನಹಳ್ಳಿ ಗ್ರಾಮದವನಾದ ರಘು, ಟ್ರಾನ್ಸ್‌ಪೋರ್ಟ್ ವ್ಯವಹಾರದಲ್ಲಿ ತೊಡಗಿಕೊಂಡಿದ್ದಾನೆ. ಪೋಷಕರ ಸಮ್ಮತಿಯೊಂದಿಗೆ ಗಣಪತಿ ದೇವಾಲಯದಲ್ಲಿ ನಡೆದ ಈ ವಿವಾಹದಲ್ಲಿ ರಘು ತನ್ನ ಪ್ರಿಯತಮೆ ಪಲ್ಲವಿಗೆ ತಾಳಿ ಕಟ್ಟಿದನು. ಎರಡೂ ಕುಟುಂಬದವರ ಉಪಸ್ಥಿತಿಯಲ್ಲಿ ನೆರವೇರಿದ ಈ ಸರಳ ವಿವಾಹದೊಂದಿಗೆ ಬೆಳಗಿನಿಂದ ಸಾರ್ವಜನಿಕ ವಲಯದಲ್ಲಿ ನಡೆದಿದ್ದ ಚರ್ಚೆಗೆ ಪೂರ್ಣ ವಿರಾಮ ದೊರಕಿತು.










