ಹಾಸನ, ಮೇ 01, 2025: ಸಕಲೇಶಪುರ ತಾಲೂಕಿನ ಹಲಸುಲಿಗೆ ಗ್ರಾಮದ ಮಾಗಡಿ ಎಸ್ಟೇಟ್ನಲ್ಲಿ ನಡೆದ ಪುಂಡಾನೆ ಸೆರೆ ಕಾರ್ಯಾಚರಣೆ ಮೊದಲ ದಿನವೇ ಯಶಸ್ವಿಯಾಗಿದೆ.
ನರಹಂತಕ ಪುಂಡಾನೆಯನ್ನು ಸೆರೆಹಿಡಿಯುವಲ್ಲಿ ಅರಣ್ಯ ಇಲಾಖೆ ತಂಡ ಯಶಸ್ಸು ಕಂಡಿದೆ.ವೈದ್ಯರಾದ ಮುಜೀಬ್ ಮತ್ತು ವಾಸಿಂ ಅವರು ಕಾಡಾನೆಗೆ ಅರವಳಿಕೆ ಚುಚ್ಚುಮದ್ದು (ಟ್ರಾಂಕ್ವಿಲೈಜರ್) ನೀಡಿದರು. ಇಂಜೆಕ್ಷನ್ ಪಡೆದ ಕೂಡಲೇ ಗಂಡಾನೆ ಓಡಲಾರಂಭಿಸಿತಾದರೂ, ಸ್ವಲ್ಪ ದೂರ ಓಡಿದ ನಂತರ ಪ್ರಜ್ಞೆ ತಪ್ಪಿ ಬಿದ್ದಿತು.

ವೈದ್ಯರು ಕಾಡಾನೆಗೆ ನೀರು ಹಾಕಿ ಆರೈಕೆ ಮಾಡಿದ ನಂತರ, ಕಾಲಿಗೆ ಹಗ್ಗ ಕಟ್ಟಿ ರಿವರ್ಸಲ್ ಇಂಜೆಕ್ಷನ್ ನೀಡಿದರು. ಆನಂತರ, ಆರು ಸಾಕಾನೆಗಳ ಸಹಾಯದಿಂದ ಕಾಡಾನೆಯನ್ನು ರಸ್ತೆಗೆ ಎಳೆದು ತರಲಾಯಿತು.
ಈ ಪುಂಡಾನೆ ಸಕಲೇಶಪುರದ ಬೈಕೆರೆಯಲ್ಲಿ ಷಣ್ಮುಖ ಎಂಬವರನ್ನು ಬಲಿ ಪಡೆದಿದ್ದು, ಹೆಬ್ಬನಹಳ್ಳಿ ಗ್ರಾಮದ ರಾಜು ಎಂಬವರನ್ನು ತುಳಿದು ಗಂಭೀರವಾಗಿ ಗಾಯಗೊಳಿಸಿತ್ತು. ಸಕಲೇಶಪುರ ಭಾಗದ ಕಾಫಿ ಬೆಳೆಗಾರರು ಮತ್ತು ಕಾರ್ಮಿಕರಲ್ಲಿ ಭಯ ಹುಟ್ಟಿಸಿದ್ದ ಈ ಅಂದಾಜು 20 ವರ್ಷದ ಗಂಡಾನೆಯನ್ನು ಸೆರೆಹಿಡಿಯಲಾಗಿದೆ.
ಅರಣ್ಯ ಇಲಾಖೆ ಈ ಕಾಡಾನೆಯನ್ನು ಸ್ಥಳಾಂತರಿಸಲು ಯೋಜನೆ ರೂಪಿಸಿದೆ. ಡಿಎಫ್ಓ ಸೌರಭ್ಕುಮಾರ್ ನೇತೃತ್ವದಲ್ಲಿ ನಡೆದ ಈ ಕಾರ್ಯಾಚರಣೆಯ ಯಶಸ್ಸು ಸ್ಥಳೀಯರಲ್ಲಿ ಸಮಾಧಾನ ಮೂಡಿಸಿದೆ.









