8.9 C
Munich
Home ಜಿಲ್ಲೆ ಯಡಕುಮರಿಯಲ್ಲಿ ಪ್ಲಂಬರ್ ಕಾಲು ತುಳಿದ ಕಾಡಾನೆ

ಯಡಕುಮರಿಯಲ್ಲಿ ಪ್ಲಂಬರ್ ಕಾಲು ತುಳಿದ ಕಾಡಾನೆ

ಹಾಸನ: ಜಿಲ್ಲೆಯ ಮಲೆನಾಡು ಭಾಗದಲ್ಲಿ ಕಾಡಾನೆಗಳ ಹಾವಳಿ ಮುಂದುವರಿದಿದ್ದು, ಸಕಲೇಶಪುರ ತಾಲ್ಲೂಕಿನ ಯಡಕುಮರಿ ಗ್ರಾಮದಲ್ಲಿ ಮತ್ತೊಂದು ದುರ್ಘಟನೆ ಸಂಭವಿಸಿದೆ.

ಕೆಲಸ ಮುಗಿಸಿ ಮನೆಗೆ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಯೊಬ್ಬನ ಮೇಲೆ ಒಂಟಿಸಲಗವೊಂದು ಏಕಾಏಕಿ ದಾಳಿ ಮಾಡಿದ ಪರಿಣಾಮ ಆತನ ಒಂದು ಕಾಲು ಮುರಿದು ಗಂಭೀರವಾಗಿ ಗಾಯಗೊಂಡ ಘಟನೆ ನಿನ್ನೆ ರಾತ್ರಿ ನಡೆದಿದೆ.

 ಯಡಕುಮಾರಿ ಗ್ರಾಮದ ಹರೀಶ್ (49) ಗಾಯಾಳು. ಪ್ಲಂಬರ್ ಆಗಿ ಕೆಲಸ ಮಾಡುವ ಇವರು, ನಿನ್ನೆ ರಾತ್ರಿ ತಮ್ಮ ಕೆಲಸ ಮುಗಿಸಿ ಮನೆಗೆ ಹಿಂತಿರುಗುತ್ತಿದ್ದ ವೇಳೆ ಈ ದಾಳಿಗೆ ಒಳಗಾಗಿದ್ದಾರೆ. ಕಾಡಾನೆಯೊಂದು ಹರೀಶ್ ಅವರ ಮೇಲೆ ದಾಳಿ ಮಾಡಿ, ಕಾಲನ್ನು ತುಳಿದು ಹಾಕಿದೆ.

ಈ ಘಟನೆಯಿಂದ ಆತನ ಒಂದು ಕಾಲು ಮುರಿದಿದ್ದು, ಸ್ಥಳೀಯರು ತಕ್ಷಣ ಆತನನ್ನು ರಕ್ಷಿಸಿ ಚಿಕಿತ್ಸೆಗಾಗಿ ಆಸ್ಪತ್ರೆಗೆ ಸಾಗಿಸಿದ್ದಾರೆ.ಪ್ರಾಥಮಿಕ ಚಿಕಿತ್ಸೆಗಾಗಿ ಹರೀಶ್ ಅವರನ್ನು ಹೆತ್ತೂರು ಆಸ್ಪತ್ರೆಗೆ ಕರೆತರಲಾಗಿದ್ದು, ಬಳಿಕ ಮುಂದುವರಿದ ಚಿಕಿತ್ಸೆಗಾಗಿ ಹಾಸನ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಸ್ತುತ ಆತ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಘಟನೆಯ ಬಗ್ಗೆ ತಿಳಿದ ಅರಣ್ಯ ಇಲಾಖೆ ಸಿಬ್ಬಂದಿ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಈ ಘಟನೆ ಯಸಳೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಮಲೆನಾಡು ಭಾಗದಲ್ಲಿ ಕಾಡಾನೆಗಳ ಓಡಾಟ ಹೆಚ್ಚಾಗುತ್ತಿರುವುದು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಅರಣ್ಯ ಇಲಾಖೆಯನ್ನು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

error: Content is protected !!