10.3 C
Munich
Home ಕ್ರೈಮ್‌ ಮಣ್ಣಾದವನು ಎದ್ದು ಬಂದ; ಅಲ್ಲಿ ಸತ್ತಿದ್ದವನೇ ಕೊಲೆಗಾರ!!

ಮಣ್ಣಾದವನು ಎದ್ದು ಬಂದ; ಅಲ್ಲಿ ಸತ್ತಿದ್ದವನೇ ಕೊಲೆಗಾರ!!

ಜೀವ ವಿಮೆ ಹಣ ಪೀಕಲು ಅಮಾಯಕನನ್ನು ಕೊಂದಿದ್ದ ಮುನಿಶಾಮಿಗೌಡ| ಲಾರಿ ಹರಿಸಿ ಭಿಕ್ಷುಕನನ್ನು ಕೊಂದು ತಾನೇ ಸತ್ತಂತೆ ಕತೆ ಕಟ್ಟಿದ್ದವನಿಗೆ ಪತ್ನಿ ಸಾಥ್

ಹಾಸನ: ಜೀವವಿಮಾ ಸಂಸ್ಥೆಯಿಂದ ಪರಿಹಾರದ ಹಣ ಪೀಕಲು ಅಮಾಯಕನನ್ನು ಕೊಂದು ತಾನೇ ಅಪಘಾತದಲ್ಲಿ ಮೃತಪಟ್ಟಿರುವಂತೆ ಕ್ರೈಂಸೀನ್ ಸೃಷ್ಟಿಸಿದ್ದ ಹತ್ಯೆ ಪ್ರಕರಣ ಘಟನೆ ನಡೆದ ಹತ್ತು ದಿನಗಳ ನಂತರ ಬಯಲಾಗಿದ್ದು, ಆರೋಪಿ ದಂಪತಿಯನ್ನು ಬಂಧಿಸಲಾಗಿದೆ.

ಘಟನಾ ಸ್ಥಳದಲ್ಲಿ ಸಿಕ್ಕಿದ್ದ ಕಾರು

ಹೊಸಕೋಟೆ ತಾಲೂಕಿನ ಚಿಕ್ಕಕೋಲಿಗ ಗ್ರಾಮದ ಮುನಿಶಾಮಿಗೌಡ ಹಾಗೂ ಶಿಲ್ಪ ಬಂಧಿತ ದಂಪತಿ. ಅವರು ಕೊಲೆಗೈದಿದ್ದ ವ್ಯಕ್ತಿ ಭಿಕ್ಷುಕ ಎನ್ನಲಾಗಿದ್ದು ಆತನ ಗುರುತು ಪತ್ತೆಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಕೊಲೆಗೆ ಬಳಸಿದ್ದ ಲಾರಿ

ಆ.12 ರಂದು ಅರಸೀಕೆರೆ ತಾಲ್ಲೂಕಿನ ಗೊಲ್ಲರಹೊಸಳ್ಳಿ ಗೇಟ್ ಬಳಿ ರಸ್ತೆಯಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆಯಾಗಿತ್ತು. ಅದೇ ಸ್ಥಳದಲ್ಲಿ ಪಂಕ್ಚರ್ ಆಗಿದ್ದ ಕಾರು ಹಾಗೂ ಒಂದು ಲಾರಿ ಸಿಕ್ಕಿದ್ದವು. ಮೇಲ್ನೋಟಕ್ಕೆ ಪಂಕ್ಚರ್ ಆಗಿದ್ದ ಟೈರ್ ಬದಲಿಸುತ್ತಿದ್ದ ವ್ಯಕ್ತಿಯ ಮೇಲೆ ಲಾರಿ ಹರಿದು ಮೃತಪಟ್ಟಿರುವಂತೆ ಕಾಣಿಸುತ್ತಿತ್ತು.

ಗಂಡಸಿ ಪೊಲೀಸ್ ಠಾಣೆ

ಅಪರಿಚಿತ ಮೃತದೇಹವನ್ನು ಹಾಸನ ಜಿಲ್ಲಾಸ್ಪತ್ರೆಯ ಶವಾಗಾರದಲ್ಲಿ ಇರಿಸಿದ್ದ ಗಂಡಸಿ ಪೊಲೀಸರು ಗುರುತು ಪತ್ತೆಗೆ ಮುಂದಾಗಿದ್ದರು. ಆ.13 ರಂದು ಜಿಲ್ಲಾಸ್ಪತ್ರೆಗೆ ಬಂದಿದ್ದ ಶಿಲ್ಪರಾಣಿ ಈ ಮೃತದೇಹ ನನ್ನ ಪತಿ ಮುನಿಶ್ವಾಮಿಗೌಡರದ್ದು ಎಂದು ಗುರುತಿಸಿದ್ದಳು.

ಮರಣೋತ್ತರ ಪರೀಕ್ಷೆ ನಂತರ ಮೃತದೇಹವನ್ನು ಕೊಂಡೊಯ್ದಿದ್ದ ಆಕೆ ಅಂದೇ ಹೊಸಕೋಟೆ ತಾಲ್ಲೂಕಿನ, ಚಿಕ್ಕಕೋಲಿಗ ಗ್ರಾಮದಲ್ಲಿ ಅಂತ್ಯಸಂಸ್ಕಾರ ನಡೆಸಿದ್ದಳು.

ಗಂಡಸಿ ಪೊಲೀಸ್ ಠಾಣೆಯಲ್ಲಿ ಬಿಎನ್‌‌ಎಸ್ 304 ಅಡಿ ಪ್ರಕರಣ ದಾಖಲಾಗಿತ್ತು. ಮೃತ ವ್ಯಕ್ತಿಯ ಕುತ್ತಿಗೆಯಲ್ಲಿ ಗಾಯದ ಗುರುತು ಇದ್ದಿದ್ದರಿಂದ ಪ್ರಕರಣದ ಬಗ್ಗೆ ಅನುಮಾನಗೊಂಡು ಗಂಡಸಿ ಪೊಲೀಸರು ತನಿಖೆ ಆರಂಭಿಸಿದ್ದರು.

ಪ್ರಕರಣದ ಬಗ್ಗೆ ಎಸ್ಪಿ ಮಹಮದ್ ಸುಜೀತಾಗೆ ಮಾಹಿತಿ ನೀಡಿದ್ದ ಗಂಡಸಿ ಹಾಗೂ ಅರಸೀಕೆರೆ ವೃತ್ತ ನಿರೀಕ್ಷರಿಗೆ ತನಿಖೆ ವೇಳೆ ಆಘಾತಕಾರಿ ಬೆಳಕಿಗೆ‌ ಬಂದಿತ್ತು.

ಸತ್ತವನು ಮುನಿಶಾಮಿಗೌಡ ಅಲ್ಲ!:
ಬೆಂಗಳೂರು ಸಮೀಪದ ಹೊಸಕೋಟೆಯಲ್ಲಿ ಟೈರ್ ಮಾರಾಟ ಮಳಿಗೆ ಹೊಂದಿರುವ ಮುನಿಶಾಮಿಗೌಡ ಸಾಲದಲ್ಲಿ ಮುಳುಗಿ ಹೋಗಿದ್ದ. ಇದರಿಂದ ಪಾರಾಗಲು ದಾರಿ ಕಾಣದೇ ಒದ್ದಾಡುತ್ತಿದ್ದ ಆತ ತನ್ನ ಮರಣಾನಂತರ ದೊರೆಯುವ ಜೀವವಿಮೆ ಹಣವನ್ನು ಬದುಕಿದ್ದಾಗಲೇ ಲಪಟಾಯಿಸಲು ಪತ್ನಿ ಜತೆಗೂಡಿ ತಂತ್ರ ರೂಪಿಸಿದ್ದ.

ಭಿಕ್ಷುಕನೊಬ್ಬನನ್ನು ಮಾತನಾಡಿಸಿ ವಿಶ್ವಾಸಕ್ಕೆ ಪಡೆದಿದ್ದ ಮುನಿಶಾಮಿಗೌಡ ತನ್ನೊಂದಿಗೆ ಕಾರಿನಲ್ಲಿ ಭಿಕ್ಷುಕನನ್ನು ಕೂರಿಸಿಕೊಂಡು ಪ್ರಯಾಣ ಆರಂಭಿಸಿದ್ದ. ಮಾರ್ಗಮಧ್ಯ ಗೊಲ್ಲರ ಹೊಸಳ್ಳಿ ಗೇಟ್ ಬಳಿ ಕಾರಿನ ಚಕ್ರ ಪಂಕ್ಚರ್ ಆಗಿದ್ದು ಚಕ್ರ ಬದಲಿಸುವಂತೆ ಭಿಕ್ಷುಕನಿಗೆ ಹೇಳಿದ್ದ. ಅದರಂತೆ ಆತ ಪಂಕ್ಚರ್ ಆದ ಚಕ್ರ ಬಿಚ್ಚಲು ಕುಕ್ಕರುಗಾಲಿನಲ್ಲಿ ಕುಳಿತಿದ್ದಾಗ ಆತನ ಕುತ್ತಿಗೆಗೆ ಚೈನ್ ಹಾಕಿ ಎಳೆದು‌ ರಸ್ತೆಗೆ ಬೀಳಿಸಿದ್ದ. ಆಗ ಆತನ ಹಂಚಿಕೆಯಂತೆ ಹಿಂಬಾಲಿಸಿಕೊಂಡು ಬಂದಿದ್ದ ಲಾರಿ ಚಾಲಕ ಲಾರಿಯನ್ನು ಭಿಕ್ಷುಕನ ಮೇಲೆ ಹರಿಸಿ‌ ಕೊಲೆಗೈದಿದ್ದ. ನಂತರ ಲಾರಿ, ಕಾರುಗಳನ್ನು ಅಲ್ಲೇ ಬಿಟ್ಟು ಪರಾರಿಯಾಗಿದ್ದ ಮುನಿಶಾಮಿಗೌಡ ಅಜ್ಞಾತ ಸ್ಥಳದಲ್ಲಿ ತಲೆಮರೆಸಿಕೊಂಡಿದ್ದ.

ಮುನಿಶಾಮಿಗೌಡನ ಸಂಬಂಧಿಕರಾದ ಶಿಡ್ಲಘಟ್ಟ ಸಿಪಿಐ ಶ್ರೀನಿವಾಸ್ ಕೂಡ ಆತ ಸತ್ತಿದ್ದಾನೆ ಎಂದು ಎಲ್ಲರಂತೆ ನಂಬಿ ಸಮಾಧಿಗೆ ಹೂವಿನ ಹಾರ ಹಾಕಿ‌ ಬಂದಿದ್ದರು.
ಆದರೆ ಅಜ್ಞಾತ ಸ್ಥಳದಲ್ಲಿದ್ದ ಮುನಿಶಾಮಿಗೌಡನಿಗೆ ಹೊರಗೆ ಏನು ನಡೆಯುತ್ತಿದೆ ಎಂದು ಗೊತ್ತಾಗದೆ ಕಂಗಾಲಾಗಿದ್ದ.‌ ಪಾಪಪ್ರಜ್ಞೆಯಿಂದ ಅಸ್ವಸ್ಥಗೊಂಡು ಒತ್ತಡ ತಡೆಯಲಾರದೇ ಶಿಡ್ಲಘಟ್ಟ ಸಿಪಿಐ ಶ್ರೀನಿವಾಸ್ ಎದುರು ಹಾಜರಾಗಿದ್ದಾನೆ.

ಮೃತಪಟ್ಟಿದ್ದ ಸಂಬಂಧಿ ಜೀವಂತವಾಗಿರುವುದನ್ನು‌ ಕಂಡ ಸಿಪಿಐ ಅಚ್ಚರಿಗೊಂಡಿದ್ದಾನೆ.‌ ಅವರಿಗೂ‌ ಸುಳ್ಳು ಹೇಳಿದ ಆರೋಪಿ ತಾನು ಅಪಘಾತದಲ್ಲಿ ಕಾರು ಗುದ್ದಿಸಿದ್ದೆ. ಆತ ಮೃತಪಟ್ಟಿದ್ದಾನೆ ಎಂದು ಹೇಳಿದ್ದ. ಆತನ ಮಾತಿನಿಂದ ಅನುಮಾನಗೊಂಡ ಅವರು ಆತನನ್ನು ಗಂಡಸಿ ಪೊಲೀಸರ ವಶಕ್ಕೆ ಒಪ್ಪಿಸಿದರು.

ಅತ್ತ ಪತಿಯ ಸಾವಿನ ದುಃಖದಲ್ಲಿರುವಂತೆ ನಟಿಸುತ್ತಿದ್ದ ಶಿಲ್ಪಾ ಆವರೆಗೂ ತನಿಖೆಗೆ ಸಹಕಾರ ನೀಡಿರಲಿಲ್ಲ. ಮುನಿಶಾಮಿಗೌಡ ತಮ್ಮ ವಶಕ್ಕೆ ಸಿಕ್ಕಿರುವ ವಿಷಯ ತಿಳಿಸದೇ ಪೊಲೀಸರು ವಿಚಾರಣೆಗೆ ನಡೆಸಿದಾಗ ಆಕೆ ನಾಟಕ ಮುಂದುವರಿಸಿದ್ದಳು. ತಕ್ಷಣ ಪೊಲೀಸರು ಆಕೆಯ ಪತಿಯನ್ನು ಮುಂದೆ ನಿಲ್ಲಿಸಿದಾಗ ಕಕ್ಕಾಬಿಕ್ಕಿಯಾದ ಆಕೆ ಸತ್ಯ ಬಾಯ್ಬಿಟ್ಟಿದ್ದಾಳೆ.

ಪೊಲೀಸರು ಆರೋಪಿಗಳಿಬ್ಬರನ್ನು ಬಂಧಿಸಿದ್ದು ಈ ಖತರ್ನಾಕ್ ದಂಪತಿಯ ಸಂಚಿಗೆ ಬಲಿಯಾದ ಅಮಾಯಕನ ಗುರುತು ಇನ್ನೂ ಪತ್ತೆಯಾಗಬೇಕಾಗಿದೆ. ಲಾರಿ, ಕಾರು ವಶಕ್ಕೆ ಪಡೆದಿರುವ ಪೊಲೀಸರು ಲಾರಿ ಚಾಲಕನಿಗಾಗಿ ಹುಡುಕಾಟ ಆರಂಭಿಸಿದ್ದಾರೆ.

error: Content is protected !!