​ಹಾಸನಾಂಬೆ ದರ್ಶನ: ₹29.55 ಕೋಟಿ ಆದಾಯ ಸಂಗ್ರಹ; 30 ಲಕ್ಷಕ್ಕೂ ಹೆಚ್ಚು ಭಕ್ತರಿಂದ ದರ್ಶನ |

2026ರ ಹಾಸನಾಂಬಾ ದೇವಾಲಯದ ದರ್ಶನೋತ್ಸವ ಯಶಸ್ವಿ. 12 ದಿನಗಳಲ್ಲಿ 30 ಲಕ್ಷಕ್ಕೂ ಅಧಿಕ ಭಕ್ತರಿಂದ ದರ್ಶನ. ಒಟ್ಟು ₹29.55 ಕೋಟಿ ಆದಾಯ ಹಾಗೂ ಚಿನ್ನ-ಬೆಳ್ಳಿ ಕಾಣಿಕೆ ವಿವರ ಇಲ್ಲಿದೆ

ಹಾಸನ(kannadapost.com): ಪ್ರಸಿದ್ಧ ಐತಿಹಾಸಿಕ ಶ್ರೀ ಹಾಸನಾಂಬಾ ದೇವಾಲಯದ ಈ ಬಾರಿಯ ದರ್ಶನೋತ್ಸವವು ಭಕ್ತಸಾಗರದ ನಡುವೆ ಅತ್ಯಂತ ಯಶಸ್ವಿಯಾಗಿ ಸಂಪೂರ್ಣಗೊಂಡಿದ್ದು, ದೇವಾಲಯದ ಆಡಳಿತ ಮಂಡಳಿಯು ಅಧಿಕೃತ ಆದಾಯದ ವಿವರಗಳನ್ನು ಬಿಡುಗಡೆ ಮಾಡಿದೆ. ಕಳೆದ ವರ್ಷಕ್ಕಿಂತ ಈ ಬಾರಿ ಭಕ್ತರ ಸಂಖ್ಯೆ ಹಾಗೂ ಆದಾಯದಲ್ಲಿ ಗಣನೀಯ ಏರಿಕೆಯಾಗಿದೆ.

​ದೇವಾಲಯದ ಆಡಳಿತಾಧಿಕಾರಿ ಹಾಗೂ ಉಪವಿಭಾಗಾಧಿಕಾರಿ ಜಗದೀಶ್ ಗಂಗಣ್ಣನವರ್ ಮಾಧ್ಯಮಗಳಿಗೆ ಈ ಕುರಿತು ಮಾಹಿತಿ ನೀಡಿದ್ದು, 2026ರ ಅಕ್ಟೋಬರ್ 29ರಂದು ಗರ್ಭಗುಡಿ ಬಾಗಿಲು ತೆರೆಯಲಾಗಿತ್ತು ಎಂದು ತಿಳಿಸಿದರು. ಅಂದು ಸಾರ್ವಜನಿಕರಿಗೆ ನೇರ ದರ್ಶನಾವಕಾಶವಿಲ್ಲದಿದ್ದರೂ, ಆಗಮಿಸಿದ್ದ ಕೆಲ ವಿಶೇಷ ಆಹ್ವಾನಿತರು ಹಾಗೂ ಭಕ್ತರಿಗೆ ದೇವಿಯ ದರ್ಶನ ಪಡೆಯಲು ಅವಕಾಶ ಕಲ್ಪಿಸಲಾಗಿತ್ತು. ಆ ದಿನ ಒಂದೇ ದಿನ ಬಸು 5,600 ಮಂದಿ ಭಕ್ತರು ದರ್ಶನ ಪಡೆದಿದ್ದರು.

​ದಾಖಲೆ ಬರೆದ ಭಕ್ತರ ಆಗಮನ: 30 ಲಕ್ಷಕ್ಕೂ ಹೆಚ್ಚು ಭಕ್ತರಿಂದ ದರ್ಶನ

​2026ರ ಅಕ್ಟೋಬರ್ 30ರಿಂದ ನವೆಂಬರ್ 10ರವರೆಗೆ ಒಟ್ಟು 12 ದಿನಗಳ ಕಾಲ ಸಾರ್ವಜನಿಕರಿಗೆ ಮುಕ್ತ ಅವಕಾಶ ಕಲ್ಪಿಸಲಾಗಿತ್ತು. ಈ ಅವಧಿಯಲ್ಲಿ ಹಾಸನ ಜಿಲ್ಲೆ ಸೇರಿದಂತೆ ರಾಜ್ಯದ ಮೂಲೆ ಮೂಲೆಗಳಿಂದ ಹಾಗೂ ಹೊರ ರಾಜ್ಯಗಳಿಂದಲೂ ಲಕ್ಷಾಂತರ ಭಕ್ತರು ಹರಿದುಬಂದಿದ್ದರು. ಒಟ್ಟು 30 ಲಕ್ಷದ 6,000 ಭಕ್ತರು ತಾಯಿ ಹಾಸನಾಂಬೆಯ ದರ್ಶನ ಪಡೆದು ಧನ್ಯರಾಗಿದ್ದಾರೆ.

​ಹೋಲಿಕೆ ಮಾಡಿ ನೋಡುವುದಾದರೆ, ಕಳೆದ 2025ರಲ್ಲಿ 13 ದಿನಗಳಲ್ಲಿ ಒಟ್ಟು 25 ಲಕ್ಷ 36 ಭಕ್ತರು ಮಾತ್ರ ದರ್ಶನ ಪಡೆದಿದ್ದರು. ಆದರೆ ಈ ಬಾರಿ ದಿನಗಳು ಕಡಿಳಿದ್ದರೂ (12 ದಿನ) ಭಕ್ತರ ಸಂಖ್ಯೆಯಲ್ಲಿ ಭರ್ಜರಿ ಹೆಚ್ಚಳ ಕಂಡುಬಂದಿದೆ.

​ಹುಂಡಿ ಎಣಿಕೆ ಹಾಗೂ ಒಟ್ಟು ಆದಾಯದ ಸಂಪೂರ್ಣ ವಿವರ

​ಶ್ರೀ ಹಾಸನಾಂಬ ದೇವಿ ಹಾಗೂ ಶ್ರೀ ಸಿದ್ದೇಶ್ವರಸ್ವಾಮಿ ದೇವಾಲಯದ ಹುಂಡಿ ಎಣಿಕೆ ಕಾರ್ಯ ಮುಕ್ತಾಯಗೊಂಡಿದ್ದು, ಈ ಬಾರಿಯ ಒಟ್ಟು ಆದಾಯದ ಕೋಟಿಗಳ ಲೆಕ್ಕಾಚಾರ ಹೊರಬಿದ್ದಿದೆ:

  • ​₹1000 ವಿಶೇಷ ದರ್ಶನ ಟಿಕೆಟ್ ಮಾರಾಟದಿಂದ: ₹16,98,11,257
  • ​₹300 ವಿಶೇಷ ದರ್ಶನ ಟಿಕೆಟ್ ಮಾರಾಟದಿಂದ: ₹7,24,14,000
  • ​ಲಾಡು ಪ್ರಸಾದ ಮಾರಾಟದಿಂದ: ₹1,35,99,156
  • ​ದೇಣಿಗೆಯಾಗಿ ಬಂದ ಮೊತ್ತ: ₹5,91,228
  • ​ಇ-ಹುಂಡಿ (E-Hundi) ಮೂಲಕ: ₹13,13,264
  • ​ಜಾಹೀರಾತಿನಿಂದ ಬಂದ ಆದಾಯ: ₹5,74,000
  • ​ಹುಂಡಿ ಕಾಣಿಕೆ (ನಗದು): ₹3,71,63,933
  • ​ಶ್ರೀ ಸಿದ್ದೇಶ್ವರಸ್ವಾಮಿ ದೇವಾಲಯದ ಹುಂಡಿ ಸಂಗ್ರಹ: ₹18,99,100

​ಒಟ್ಟು ದೇವಾಲಯದ ಸಂಗ್ರಹ: ₹25,82,88,199

ಹುಂಡಿ ಕಾಣಿಕೆ ಸೇರಿದಂತೆ ಒಟ್ಟು ಆದಾಯ: ₹29,55,27,852 (ಸುಮಾರು ₹29.55 ಕೋಟಿ)

​ಕಳೆದ 2025ರಲ್ಲಿ ವಿಶೇಷ ದರ್ಶನ ಟಿಕೆಟ್‌ಗಳು, ಲಾಡು ಪ್ರಸಾದ ಹಾಗೂ ಹುಂಡಿ ಕಾಣಿಕೆ ಸೇರಿ ಒಟ್ಟು ₹25 ಕೋಟಿ 59 ಲಕ್ಷ ರೂ. ಸಂಗ್ರಹವಾಗಿತ್ತು. ಆದರೆ ಈ ಬಾರಿ ಎಲ್ಲಾ ಮೂಲಗಳಿಂದ ಒಟ್ಟು ₹29.55 ಕೋಟಿ ಆದಾಯ ಸಂಗ್ರಹವಾಗಿದ್ದು, ಕಳೆದ ವರ್ಷಕ್ಕಿಂತ ಬರೋಬ್ಬರಿ ₹4 ಕೋಟಿಗೂ ಅಧಿಕ ಆದಾಯ ಹೆಚ್ಚಳವಾಗಿದೆ.

​ಚಿನ್ನ ಮತ್ತು ಬೆಳ್ಳಿ ಕಾಣಿಕೆ

​ನಗದು ಹಣದ ಜೊತೆಗೆ ಭಕ್ತರು ಮುಕ್ತ ಮನಸ್ಸಿನಿಂದ ಚಿನ್ನ ಹಾಗೂ ಬೆಳ್ಳಿಯನ್ನು ಕಾಣಿಕೆಯಾಗಿ ಸಮರ್ಪಿಸಿದ್ದಾರೆ. ಈ ಬಾರಿ 43 ಗ್ರಾಂ 170 ಮಿಲಿಗ್ರಾಂ ಚಿನ್ನ ಹಾಗೂ 1 ಕೆಜಿ 255 ಗ್ರಾಂ 300 ಮಿಲಿಗ್ರಾಂ ಬೆಳ್ಳಿಯನ್ನು ಭಕ್ತರು ದೇವಿಗೆ ಕಾಣಿಕೆಯಾಗಿ ನೀಡಿದ್ದಾರೆ.