ಹಾಸನಾಂಬೆ ದರ್ಶನ: “ಡಿಸಿ ಕ್ಷಮೆ ಕೇಳುವುದು, ಉಸ್ತುವಾರಿ ಸಚಿವರು ಒತ್ತಡ ತಾಳಲಾರದೆ ಕದ್ದು ಕೂರುವುದು ಜಿಲ್ಲೆಗೆ ಶೋಭೆಯಲ್ಲ!”- ವಿಐಪಿ ದರ್ಶ‌ನಕ್ಕೆ ನೀತಿ ಸಂಹಿತೆ ಜಾರಿಯಾಗಲಿ: ಎಚ್.ವಿ.ಹರೀಶ್ ಆಗ್ರಹ

ಹಾಸನಾಂಬೆಯ ದರ್ಶನ ವಿಷಯದಲ್ಲಿ ರಾಜಕೀಯ ಒತ್ತಡ ತಪ್ಪಿಸಲು ಮತ್ತು ಸ್ಥಳೀಯ ಭಕ್ತರಿಗೆ ಸುಗಮ ದರ್ಶನ ಕಲ್ಪಿಸಲು ಶಿಷ್ಟಾಚಾರ ದರ್ಶನಕ್ಕೆ ಕಠಿಣ ನೀತಿ ಸಂಹಿತೆ ಜಾರಿಗೆ ತರಬೇಕು ಎಂದು ವಿಶ್ವಕರ್ಮ ಸಮಾಜದ ಜಿಲ್ಲಾಧ್ಯಕ್ಷ ಹೆಚ್.ವಿ. ಹರೀಶ್ ಒತ್ತಾಯಿಸಿದ್ದಾರೆ.

ಹಾಸನ(kannadapost.com): ಹಾಸನಾಂಬೆ ದೇವಿಯ ದರ್ಶನದ ವಿಚಾರದಲ್ಲಿ ರಾಜಕೀಯ ಒತ್ತಡದಿಂದ ಹೈರಾಣಾಗಿರುವ ಜಿಲ್ಲಾಡಳಿತವನ್ನು ಪಾರು ಮಾಡಲು ಹಾಗೂ ಸ್ಥಳೀಯ ಭಕ್ತರಿಗೆ ನೆಮ್ಮದಿಯ ದರ್ಶನ ಕಲ್ಪಿಸಲು ಶಿಷ್ಟಾಚಾರ (VIP Protocol) ದರ್ಶನಕ್ಕೆ ಶಾಶ್ವತವಾದ ಮಾನದಂಡ ಮತ್ತು ಕಠಿಣ ನೀತಿ ಸಂಹಿತೆಯನ್ನು ಜಾರಿಗೆ ತರಬೇಕು ಎಂದು ಹಾಸನ ಜಿಲ್ಲಾ ವಿಶ್ವಕರ್ಮ ಸಮಾಜದ (ರಿ.) ಅಧ್ಯಕ್ಷರಾದ ಹೆಚ್. ವಿ. ಹರೀಶ್ ಅವರು ಒತ್ತಾಯಿಸಿದ್ದಾರೆ.

​ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಹಾಸನಾಂಬೆ ಜಾತ್ರಾ ಮಹೋತ್ಸವದ ವೇಳೆ ಉಂಟಾಗುತ್ತಿರುವ ಗೊಂದಲಗಳು ಮತ್ತು ಸ್ಥಳೀಯ ಭಕ್ತರ ಪರದಾಟದ ಬಗ್ಗೆ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.

​ಹೊರಗಿನವರ ದರ್ಪ ಸಹಿಸಲು ಸಾಧ್ಯವಿಲ್ಲ:

“ಹೊರಗಿನಿಂದ ಬರುವ ರಾಜಕೀಯ ಪಕ್ಷದವರು, ಅಧಿಕಾರಶಾಹಿಗಳು ಹಾಗೂ ಪ್ರಭಾವಿಗಳು ಹಾಸನ ಜಿಲ್ಲಾಡಳಿತದ ಹಿರಿಯ ಅಧಿಕಾರಿಗಳಿಗೂ ಮತ್ತು ಸ್ಥಳೀಯ ಭಕ್ತರಿಗೂ ಕಿಂಚಿತ್ತೂ ಗೌರವ ನೀಡದೆ ಅಧಿಕಾರ ಚಲಾಯಿಸುತ್ತಿದ್ದಾರೆ. ಇಂತಹ ದರ್ಪವನ್ನು ಜಿಲ್ಲೆಯ ಜನತೆ ಸಹಿಸಲು ಸಾಧ್ಯವಿಲ್ಲ. ಸರತಿ ಸಾಲಿನಲ್ಲಿ ನಿಲ್ಲುವ ಸಾಮಾನ್ಯ ಹಾಗೂ ಸ್ಥಳೀಯ ಭಕ್ತರಿಗೆ ನೆಮ್ಮದಿಯ ದರ್ಶನ ಸಿಗದೆ ರೋಸಿ ಹೋಗಿದ್ದಾರೆ” ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

​ಜಿಲ್ಲೆಯ ಗೌರವಕ್ಕೆ ಧಕ್ಕೆ:

“ಕ್ಷುಲ್ಲಕ ಕಾರಣಗಳಿಗಾಗಿ ನಮ್ಮ ಜಿಲ್ಲಾಧಿಕಾರಿಗಳು ಕ್ಷಮೆ ಕೇಳುವ ಪರಿಸ್ಥಿತಿ ನಿರ್ಮಾಣವಾಗಿರುವುದು ಮತ್ತು ರಾಜಕೀಯ ಒತ್ತಡ ತಾಳಲಾರದೆ ಜಿಲ್ಲಾ ಉಸ್ತುವಾರಿ ಸಚಿವರು ಕದ್ದು ಕೂರುವುದು ಹಾಸನ ಜಿಲ್ಲೆಗೆ ಶೋಭೆ ತರುವ ವಿಷಯವಲ್ಲ. ಶಿಲ್ಪಕಲೆಗಳ ತವರೂರಾದ ನಮ್ಮೆಲ್ಲರ ಹೆಮ್ಮೆಯ ಹಾಸನದ ಗೌರವವನ್ನು ಕಾಪಾಡುವ ಕೆಲಸವಾಗಬೇಕಿದೆ” ಎಂದು ಹೆಚ್.ವಿ. ಹರೀಶ್ ಹೇಳಿದ್ದಾರೆ.

​ಮುಂದಿನ ಬಾರಿಯ ಹಾಸನಾಂಬೆ ಉತ್ಸವದಲ್ಲಾದರೂ ಸರ್ಕಾರ ಮತ್ತು ಜಿಲ್ಲಾಡಳಿತ ಈ ಬಗ್ಗೆ ಸಮಗ್ರವಾಗಿ ಚಿಂತಿಸಿ, ಸ್ಥಳೀಯ ಭಕ್ತಾದಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಗಂಭೀರವಾಗಿ ಜನಾನುರಾಗಿ ವ್ಯವಸ್ಥೆಯನ್ನು ಕಲ್ಪಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.