- ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲ್ಲೂಕಿನ ಅಪ್ಪೇನಹಳ್ಳಿ ಗ್ರಾಮದಲ್ಲಿ ತುಂಡಾಗಿ ಬಿದ್ದಿದ್ದ ಹೈಟೆನ್ಷನ್ ವಿದ್ಯುತ್ ತಂತಿ ತುಳಿದು ಸುಪ್ರೀತ್ (35) ಎಂಬ ಯುವಕ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಹಾಸನ(kannadapost.com): ಮನೆಯ ಹಿಂಭಾಗದಲ್ಲಿ ತುಂಡಾಗಿ ಬಿದ್ದಿದ್ದ ಹೈಟೆನ್ಷನ್ ವಿದ್ಯುತ್ ತಂತಿಯನ್ನು ಗಮನಿಸದೆ ತುಳಿದ ಪರಿಣಾಮ, ಯುವಕನೋರ್ವ ವಿದ್ಯುತ್ ಶಾಕ್ನಿಂದ ಸ್ಥಳದಲ್ಲೇ ದಾರುಣವಾಗಿ ಸಾವನ್ನಪ್ಪಿರುವ ಘಟನೆ ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲ್ಲೂಕಿನ ಅಪ್ಪೇನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಅಪ್ಪೇನಹಳ್ಳಿ ಗ್ರಾಮದ ನಿವಾಸಿ ಸುಪ್ರೀತ್ (35) ಮೃತಪಟ್ಟ ದುರ್ದೈವಿ ಯುವಕ.
ಘಟನೆಯ ವಿವರ:
ಎಂದಿನಂತೆ ಸುಪ್ರೀತ್ ಅವರು ತಮ್ಮ ಜಾನುವಾರುಗಳನ್ನು ಹಿಡಿದುಕೊಂಡು ಜಮೀನಿನ ಬಳಿಗೆ ತೆರಳುತ್ತಿದ್ದರು. ಈ ವೇಳೆ ಮನೆಯ ಹಿಂಭಾಗದಲ್ಲೇ ಹೈಟೆನ್ಷನ್ ವಿದ್ಯುತ್ ವೈರ್ ತುಂಡಾಗಿ ಬಿದ್ದಿತ್ತು. ಇದನ್ನು ಗಮನಿಸದ ಸುಪ್ರೀತ್ ಆಕಸ್ಮಿಕವಾಗಿ ವಿದ್ಯುತ್ ತಂತಿಯನ್ನು ತುಳಿದಿದ್ದಾರೆ. ತಂತಿಯಲ್ಲಿ ಪ್ರವಹಿಸುತ್ತಿದ್ದ ಭಾರೀ ವಿದ್ಯುತ್ ಶಾಕ್ ತಗುಲಿದ ಪರಿಣಾಮ, ಅವರು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.
ಕುಟುಂಬಕ್ಕೆ ಎರಗಿದ ಮತ್ತೊಂದು ಆಘಾತ:
ಮೃತ ಸುಪ್ರೀತ್ ಅವರ ಕುಟುಂಬಕ್ಕೆ ಇದು ಎರಡನೇ ದೊಡ್ಡ ಆಘಾತವಾಗಿದೆ. ಕಳೆದ ಹತ್ತು ವರ್ಷಗಳ ಹಿಂದೆ ಸುಪ್ರೀತ್ ಅವರ ತಂದೆ ರಂಗಸ್ವಾಮಿ ಅವರು ಕಾಡಾನೆ ದಾಳಿಗೆ ಸಿಲುಕಿ ಪ್ರಾಣ ಕಳೆದುಕೊಂಡಿದ್ದರು. ತಂದೆಯ ಸಾವಿನ ನೋವಿನಿಂದ ಚೇತರಿಸಿಕೊಂಡು ಕುಟುಂಬಕ್ಕೆ ಆಧಾರವಾಗಿದ್ದ ಮಗ ಸುಪ್ರೀತ್ ಕೂಡ ಈಗ ವಿದ್ಯುತ್ ದುರಂತಕ್ಕೆ ಬಲಿಯಾಗಿರುವುದು ಇಡೀ ಗ್ರಾಮದಲ್ಲಿ ಶೋಕದ ಛಾಯೆ ಮೂಡಿಸಿದೆ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ವಿಷಯ ತಿಳಿಯುತ್ತಿದ್ದಂತೆಯೇ ಚನ್ನರಾಯಪಟ್ಟಣ ಗ್ರಾಮಾಂತರ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸೆಸ್ಕ್ (CESC) ಅಧಿಕಾರಿಗಳ ನಿರ್ಲಕ್ಷ್ಯವೇ ಈ ದುರಂತಕ್ಕೆ ಕಾರಣ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಚನ್ನರಾಯಪಟ್ಟಣ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.












