ಹಾಸನ (kannadapost.com): ಐತಿಹಾಸಿಕ ಹಾಸನಾಂಬ ದೇಗುಲದ ಮಹೋತ್ಸವ ಮತ್ತು ದರ್ಶನೋತ್ಸವದ ವಿಚಾರವಾಗಿ ಹಾಸನ ಜಿಲ್ಲಾಡಳಿತ ಹಾಗೂ ಮಾಜಿ ಸಚಿವ ಎಚ್.ಡಿ. ರೇವಣ್ಣ ನಡುವಿನ ಜಟಾಪಟಿ ತಾರಕಕ್ಕೇರಿದೆ. ಜಿಲ್ಲಾಡಳಿತ ಶಿಷ್ಟಾಚಾರ ಉಲ್ಲಂಘಿಸಿ ತಮಗೆ ಅವಮಾನ ಮಾಡಿದೆ ಎಂದು ಆರೋಪಿಸಿರುವ ರೇವಣ್ಣ, ಈ ಬಾರಿ ಹಾಸನಾಂಬೆಯ ದರ್ಶನಕ್ಕೆ ತೆರಳದಿರಲು ತೀರ್ಮಾನಿಸಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಜಿಲ್ಲಾಧಿಕಾರಿಗಳ ಕಾರ್ಯವೈಖರಿ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
”3೦ ವರ್ಷ ರಾಜಕೀಯ ಮಾಡಿದವನಿಗೆ ಗುಮಾಸ್ತನಿಂದ ಆಹ್ವಾನವೇ?”
”ನಾನೊಬ್ಬ ಮಾಜಿ ಸಚಿವ, ಮೂವತ್ತು ವರ್ಷಗಳಿಂದ ಸಾರ್ವಜನಿಕ ಜೀವನದಲ್ಲಿದ್ದೇನೆ. ಅಂತಹ ವ್ಯಕ್ತಿಗೆ ಗೌರವಯುತವಾಗಿ ಆಹ್ವಾನ ನೀಡುವ ಬದಲು ಯಾರೋ ಒಬ್ಬ ಗುಮಾಸ್ತನ ಕೈಯಲ್ಲಿ ಆಹ್ವಾನ ಪತ್ರಿಕೆ ಕಳುಹಿಸುತ್ತಾರೆ. ಕರೆಯದೇ ಇರುವ ಜಾಗಕ್ಕೆ ನಾನೇಕೆ ಹೋಗಬೇಕು? ಅಲ್ಲಿಗೆ ಬಂದು ‘ಥೂ’ ಎನಿಸಿಕೊಳ್ಳುವ ಅಗತ್ಯ ನನಗಿಲ್ಲ. ಈ ಬಾರಿ ನಾನು ಹಾಸನಾಂಬೆ ದರ್ಶನಕ್ಕೆ ಹೋಗುವುದಿಲ್ಲ. ಮನೆಯಲ್ಲೇ ನಿಂತು ಆ ತಾಯಿಗೆ ಕೈಮುಗಿಯುತ್ತೇನೆ. ನಮ್ಮ ತಂದೆ-ತಾಯಿಯನ್ನು ಕಣ್ಣೀರು ಹಾಕಿಸಿದವರನ್ನು ನೀನೇ ನೋಡಿಕೋ ಎಂದು ಬೇಡಿಕೊಳ್ಳುತ್ತೇನೆ” ಎಂದು ಭಾವುಕರಾಗಿ ನುಡಿದರು.
”ಹಾಸನಾಂಬೆ ಉತ್ಸವ ಕಾಂಗ್ರೆಸ್ ಕಾರ್ಯಕ್ರಮವಾಗಿದೆ”
ಜಿಲ್ಲಾಡಳಿತ ಸರ್ಕಾರದ ತಾಳಕ್ಕೆ ತಕ್ಕಂತೆ ಕುಣಿಯುತ್ತಿದೆ ಎಂದು ಕಿಡಿಕಾರಿದ ರೇವಣ್ಣ, “ಹಾಸನ ಜಿಲ್ಲೆಯಲ್ಲಿ ಜೆಡಿಎಸ್ನ ನಾಲ್ವರು ಹಾಗೂ ಬಿಜೆಪಿಯ ಇಬ್ಬರು ಶಾಸಕರಿದ್ದಾರೆ. ಆದರೆ ನಗರದಲ್ಲಿ ಹಾಕಲಾಗಿರುವ ಅಧಿಕೃತ ಫ್ಲೆಕ್ಸ್ಗಳಲ್ಲಿ ಸ್ಥಳೀಯ ಶಾಸಕರ ಫೋಟೋಗಳೇ ಇಲ್ಲ. ಹಾಸನಾಂಬೆ ಉತ್ಸವ ಸಂಪೂರ್ಣವಾಗಿ ಕಾಂಗ್ರೆಸ್ ಪಕ್ಷದ ಕಾರ್ಯಕ್ರಮವಾಗಿ ಬದಲಾಗಿದೆ. ಸಂಸದರ ಮನೆ ಬಾಗಿಲಿಗೆ ಹೋಗಿ ವಿಐಪಿ ಪಾಸ್ಗಳನ್ನು ತಲುಪಿಸುವ ಅಧಿಕಾರಿಗಳು, ನಮಗೆ ಕನಿಷ್ಠ ಆಹ್ವಾನ ಪತ್ರಿಕೆಯನ್ನೂ ಸರಿಯಾಗಿ ನೀಡಿಲ್ಲ” ಎಂದು ನೇರ ವಾಗ್ದಾಳಿ ನಡೆಸಿದರು.
ಕಾರ್ಯಕರ್ತರನ್ನು ನುಗ್ಗಿಸುವ ಎಚ್ಚರಿಕೆ
ವಿಐಪಿ ಪಾಸ್ ಹಂಚಿಕೆಯಲ್ಲಿ ನಡೆಯುತ್ತಿರುವ ತಾರತಮ್ಯದ ವಿರುದ್ಧ ಹರಿಹಾಯ್ದ ಅವರು, “ಪಾಸ್ ನೀಡಬೇಕಾದರೆ ಎಲ್ಲ ಜನಪ್ರತಿನಿಧಿಗಳಿಗೂ ಸಮಾನವಾಗಿ ಹಂಚಿಕೆ ಮಾಡಬೇಕು. ಇಲ್ಲವೇ ಎಲ್ಲರೂ ಸಾಮಾನ್ಯ ಸರತಿ ಸಾಲಿನಲ್ಲೇ ತೆರಳಿ ದರ್ಶನ ಪಡೆಯುವ ವ್ಯವಸ್ಥೆ ಮಾಡಬೇಕು. ಎಲ್ಲರಿಗೂ ಸಮಾನವಾಗಿ ಪಾಸ್ ಹಂಚದಿದ್ದರೆ ಬುಧವಾರ ನಮ್ಮ ಕಾರ್ಯಕರ್ತರನ್ನು ದೇವಾಲಯಕ್ಕೆ ನುಗ್ಗಿಸುತ್ತೇವೆ” ಎಂದು ಜಿಲ್ಲಾಡಳಿತಕ್ಕೆ ನೇರ ಎಚ್ಚರಿಕೆ ರವಾನಿಸಿದರು.












