ಗೋಲ್ಡ್ ಸ್ಮಗ್ಲಿಂಗ್ ಆರೋಪಿ ರನ್ಯಾರಾವ್ ಹಾಸನಾಂಬ ಗರ್ಭಗುಡಿಯಲ್ಲಿ: ಪ್ರಾಮಾಣಿಕ ಬಡ ಭಕ್ತರು ಬೀದಿ ಸಾಲಿನಲ್ಲಿ… ಇದೇನೇನ್ರಿ ಪ್ರೊಟೋಕಾಲ್ ನ್ಯಾಯ?

ಕನ್ನಡಪೋಸ್ಟ್.ಕಾಂ ವಿಶೇಷ

  • ಹಾಸನ (kannadapost.com): ವರ್ಷಕ್ಕೊಮ್ಮೆ ಮಾತ್ರ ಸಾರ್ವಜನಿಕ ದರ್ಶನ ನೀಡುವ ಹಾಸನಾಂಬೆ ತಾಯಿಯ ದರ್ಶನ ಪಡೆಯಲು ರಾಜ್ಯದ ವಿವಿಧ ಜಿಲ್ಲೆಗಳು ಹಾಗೂ ಹೊರರಾಜ್ಯಗಳಿಂದ ಲಕ್ಷಾಂತರ ಭಕ್ತರು ಹಾಸನಕ್ಕೆ ಆಗಮಿಸುತ್ತಿದ್ದಾರೆ. ನೂರಾರು ಕಿಲೋಮೀಟರ್‌ಗಳ ದೂರದಿಂದ ಬರುವ ಸಾಮಾನ್ಯ ಭಕ್ತರು ರಾತ್ರಿಯಿಡೀ ಸರದಿ ಸಾಲಿನಲ್ಲಿ ಕಾದು, ಮೂಲಸೌಕರ್ಯಗಳ ಕೊರತೆಯ ನಡುವೆ ಬೆಳಗಾಗುವವರೆಗೂ ನಿಂತು ದರ್ಶನ ಪಡೆಯಲು ಪರದಾಡುತ್ತಿದ್ದಾರೆ. ಆದರೆ ಇದೇ ಸಂದರ್ಭದಲ್ಲಿ ಚಿನ್ನದ ಕಳ್ಳಸಾಗಣೆ ಪ್ರಕರಣದಲ್ಲಿ ಗಂಭೀರ ಆರೋಪ ಎದುರಿಸುತ್ತಿರುವ ನಟಿ ರನ್ಯಾ ರಾವ್ ಅವರಿಗೆ ಜಿಲ್ಲಾಡಳಿತದ ಶಿಷ್ಟಾಚಾರದಡಿ ವಿಶೇಷ ದರ್ಶನದ ವ್ಯವಸ್ಥೆ ಮಾಡಿರುವುದು ಈಗ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಸಾಮಾನ್ಯ ಭಕ್ತರಿಗೆ ಗಂಟೆಗಟ್ಟಲೆ ಕಾಯುವ ಶಿಕ್ಷೆ; ಸ್ಮಗ್ಲಿಂಗ್ ಆರೋಪಿ, ಜೈಲು ವಾಸ ಮಾಡಿ ಬಂದವರಿಗೆ ಮಾತ್ರ ವಿಶೇಷ ಸೌಲಭ್ಯ? ಯಾಕೆ ಬೇಕು ಇಂತಹವರಿಗೆಲ್ಲ ಸರ್ಕಾರಿ ಗೌರವ?

ಇದು ಕೇವಲ ಒಬ್ಬ ನಟಿಗೆ ವಿಶೇಷ ದರ್ಶನ ಕಲ್ಪಿಸಿದ ವಿಚಾರವಲ್ಲ. ಇದು ಸಾರ್ವಜನಿಕ ಆಡಳಿತದ ಸಮಾನತೆ, ಅಧಿಕಾರದ ಬಳಕೆ ಮತ್ತು ಸಾಮಾನ್ಯ ಭಕ್ತರ ಘನತೆಯ ಪ್ರಶ್ನೆಯಾಗಿದೆ.

ರಾತ್ರಿಯಿಡೀ ಸರದಿಯಲ್ಲಿ ನಿಂತರೂ ಸುಗಮ ದರ್ಶನವಿಲ್ಲ!

ಹಾಸನಾಂಬೆ ತಾಯಿಯ ದರ್ಶನಕ್ಕಾಗಿ ವೃದ್ಧರು, ಮಹಿಳೆಯರು, ಮಕ್ಕಳು ಸೇರಿದಂತೆ ಸಾವಿರಾರು ಭಕ್ತರು ಗಂಟೆಗಟ್ಟಲೆ ಸರದಿ ಸಾಲಿನಲ್ಲಿ ಕಾಯುತ್ತಿದ್ದಾರೆ. ಬೀದರ್, ವಿಜಯಪುರದಂತಹ  ಊರುಗಳಿಂದ ಬಂದವರು ರಾತ್ರಿಯಿಡೀ ನಿದ್ರೆಯಿಲ್ಲದೆ ಸಾಲಿನಲ್ಲಿ ನಿಲ್ಲಬೇಕಾದ ಪರಿಸ್ಥಿತಿ ಎದುರಿಸುತ್ತಿದ್ದಾರೆ.

ಕಾಯುವ ಅವಧಿಯಲ್ಲಿ ಕುಡಿಯುವ ನೀರು, ಆಹಾರ, ವಿಶ್ರಾಂತಿ ಹಾಗೂ ಸ್ವಚ್ಛ ಶೌಚಾಲಯಗಳಂತಹ ಮೂಲಭೂತ ಸೌಲಭ್ಯಗಳು ಸಮರ್ಪಕವಾಗಿ ಸಿಗುತ್ತಿಲ್ಲ ಅನ್ನುವ ಅಳಲು ಕೇಳಿ ಬರುವುದು ಮಾಮೂಲಿ. ಪ್ರಕೃತಿಯ ಕರೆ ಬಂದಾಗಲೂ ಸಾಲು ಬಿಟ್ಟು ಹೋಗಲಾಗದೆ ಸಂಕಷ್ಟ ಅನುಭವಿಸುವ ಭಕ್ತರ ಸ್ಥಿತಿ ಯಾರಿಗೂ ಬೇಡ.

ಜನರು ಸಾವಿರಾರು ಸಂಖ್ಯೆಯಲ್ಲಿ ಬಂದಾಗ ಇದು ಅನಿವಾರ್ಯ ವ್ಯವಸ್ಥೆ ನಿಜ. ಹಿರಿಯ ಅಧಿಕಾರಿಗಳು, ನ್ಯಾಯಾಧೀಶರು, ವರ್ಚಸ್ವಿ ನಟ,ನಟಿಯರು, ಜನಪ್ರತಿನಿಧಿಗಳಂತಹ ಪ್ರಭಾವಿಗಳಿಗಾಗಿ ಮಾಡಿಕೊಂಡಿರುವ ಪ್ರೋಟೋಕಾಲ್ ದರ್ಶನ ವ್ಯವಸ್ಥೆಯನ್ನು ಜನರು ಅನಿವಾರ್ಯವಾಗಿ ಒಪ್ಪಿದ್ದಾರೆ.

ಆದರೆ ಚಿನ್ನದ ಕಳ್ಳಸಾಗಣೆ ಪ್ರಕರಣದ ಆರೋಪಿಗೆ ವಿಶೇಷ ಆದ್ಯತೆ ಏಕೆ?

ಕೆಲವೇ ಚಿತ್ರಗಳಲ್ಲಿ ನಟಿಸಿರುವ, ಅತ್ತ ವರ್ಚಸ್ಸೂ ಇಲ್ಲದ ರನ್ಯಾ ರಾವ್, ದುಬೈನಿಂದ ಬೆಂಗಳೂರಿಗೆ ಚಿನ್ನದ ಕಳ್ಳಸಾಗಣೆ ಮಾಡಿದ ಆರೋಪದ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದರು. ಒಂದು ವರ್ಷ ಜೈಲು ವಾಸ ಮುಗಿಸಿ, ಭಾರಿ ದಂಡ ವಿಧಿಸಿಕೊಂಡು ಬಿಡುಗಡೆ ಆಗಿರುವ ಅವರ ಮೇಲೆ ED ದಾಖಲಿಸಿರುವ ಅಕ್ರಮ ಹಣ ವರ್ಗಾವಣೆ ಆರೋಪದ ವಿಚಾರಣೆ ಇನ್ನೂ ಬಾಕಿ ಇದೆ.

ಹೀಗೆ ಕುಖ್ಯಾತಿ ಸಂಪಾದಿಸಿರುವ ನಟಿಮಣಿಗೆ ಜಿಲ್ಲಾಡಳಿತ ಕೆಂಪುಹಾಸು ಹಾಸುವ ಅಗತ್ಯವಿತ್ತೇ? ಅವರ ತಂದೆ ನಿವೃತ್ತ ಡಿಜಿಪಿ ಡಾ.ಕೆ.ರಾಮಚಂದ್ರರಾವ್ ಸೇರಿದಂತೆ ಕುಟುಂಬ ಸದಸ್ಯರೊಂದಿಗೆ ಆಗಮಿಸಿದ್ದ ರನ್ಯಾ ಅವರನ್ನು ಪ್ರವಾಸಿ ಮಂದಿರದಿಂದ ಹಾಸನಾಂಬ ದೇವಾಲಯಕ್ಕೆ ಜಿಲ್ಲಾಡಳಿತ ನಿಗದಿ ಮಾಡಿರುವ ಐಷಾರಾಮಿ ಅರ್ಬೇನಿಯಾ ವಾಹನದಲ್ಲಿ ಭದ್ರತೆಯಲ್ಲಿ ಕರೆದೊಯ್ಯಲಾಗಿತ್ತು.

ನಂತರ ಹಾಸನಾಂಬ ದೇವಾಲಯದ ಗರ್ಭಗುಡಿಯೊಳಗೂ ಕುಟುಂಬ ಸದಸ್ಯರೊಂದಿಗೆ ಪ್ರವೇಶಿಸಿದ ಅವರು ಅಲ್ಲಿ ಪ್ರಾರ್ಥನೆ ಸಲ್ಲಿಸಿ ಮಂಗಳಾರತಿ ಪಡೆದರು. ಸಿದ್ದೇಶ್ವರ ಸ್ವಾಮಿ ದರ್ಶನದ ನಂತರ ಅವರು ಶಿಷ್ಟಾಚಾರದ ವಾಹನದಲ್ಲಿಯೇ ಹಿಂದಿರುಗಿದರು.

ಹೀಗೆ ಅವರು ಚಿಟಿಕೆ ಹೊಡೆದಂತೆ ದರ್ಶನ ಪಡೆದು, ನಿಮಿಷಗಳ ಕಾಲ ಗರ್ಭಗುಡಿಯಲ್ಲಿ ಪ್ರಾರ್ಥಿಸುತ್ತಿದ್ದಾಗ ಗಂಟೆಗಳ ಕಾಲ ಸಾಲಿನಲ್ಲಿ ನಿಂತು ಬಳಲಿ, ಗರ್ಭಗುಡಿ ಹೊರ ಆವರಣಕ್ಕೆ ಬಂದು ದೇವಿಯನ್ನು ಒಂದು ಸೆಕೆಂಡ್ ಕಣ್ತುಂಬಿಕೊಂಡು ಕೈ ಮುಗಿಯುವಷ್ಟರಲ್ಲಿ ಪೊಲೀಸರಿಂದ ಆಚೆಗೆ ದಬ್ಬಿಸಿಕೊಂಡ ನೂರಾರು ‘ಸಾಮಾನ್ಯರು‘ ದೇವಾಲಯದಿಂದ ಹೊರ ಬಂದು ನಿಟ್ಟುಸಿರು ಬಿಡುತ್ತಿದ್ದರು ಎನ್ನುವುದು ಯಾರಿಗೂ ಪ್ರಮುಖವಾಗುವುದೇ ಇಲ್ಲ.

ಇನ್ನಾದರೂ ಜಿಲ್ಲಾಡಳಿತ ಕುಖ್ಯಾತರು, ಕ್ರಿಮಿನಲ್ ಅರೋಪ ಹೊತ್ತವರನ್ನಾದರೂ ಶಿಷ್ಟಾಚಾರ ದರ್ಶನದಿಂದ ಹೊರಗಿಟ್ಟು, ಕಿಲೋಮೀಟರ್ ಗಟ್ಟಲೆ ಸಾಲಿನಲ್ಲಿ ನಿಂತು ಬೆವರಿ ಬಳಲಿ ಒಂದು ಸೆಕೆಂಡ್ ಗೂ ಕಡಿಮೆ ಸಮಯ ದೇವಿ ದರ್ಶನ ಪಡೆಯುವ ಬಡ, ಪ್ರಾಮಾಣಿಕ, ಸಾಮಾನ್ಯ ಭಕ್ತರಿಗೆ ಕನಿಷ್ಠ ಗೌರವವನ್ನಾದರೂ ನೀಡಬೇಕು ಅಲ್ವ?

ನಾನು ಪ್ರತಿಫಲಾಪೇಕ್ಷೆಯೇ ಇಲ್ಲದೆ ಲಕ್ಷಾಂತರ ಗಿಡಗಳನ್ನು ನೆಟ್ಟು ಪೋಷಿಸಿದ್ದೇನೆ. ಪರಿಸರ ರಕ್ಷಣೆಗಾಗಿ ಹೋರಾಡುತ್ತಿದ್ದೇನೆ. ನಾನು ಹಾಸನಾಂಬೆ ದರ್ಶನಕ್ಕೆ ಒಂದೂವರೆ ಗಂಟೆ ಕಾಲ ಕಾದು ನಿಲ್ಲಬೇಕಾಯಿತು. ಆದರೆ ರನ್ಯಾ ರಾವ್ ಅವರಂತಹ ಸ್ಮಗ್ಲಿಂಗ್ ಪ್ರಕರಣದ ಆರೋಪಿಗೆ ಪೊಲೀಸರೇ ರಕ್ಷಣೆ ನೀಡಿ ಗರ್ಭ ಗುಡಿಗೆ ಕರೆದೊಯ್ದು ದರ್ಶನ ಕೊಡಿಸಿದ್ದು ಕಾನೂನಿನ ವ್ಯಂಗ್ಯ. ಯಾವುದೋ ಐಡಿ ದುರುಪಯೋಗ ಎಂದು ಕಂದಾಯ ಇಲಾಖೆ ನೌಕರನನ್ನು ಡಿಸಿ ನಿನ್ನೆ ಅಮಾನತು ಮಾಡಿದ್ದಾರೆ. ಸ್ಮಗ್ಲಿಂಗ್ ಆರೋಪಿಗೆ ಶಿಷ್ಟಾಚಾರ ನೀಡಿದವರಿಗೆ ಯಾವ ಶಿಕ್ಷೆ? –ಬಳ್ಳೂರು ಉಮೇಶ್, ದಿ.ಸಾಲುಮರದ ತಿಮ್ಮಕ್ಕ ಅವರ  ಪುತ್ರ ಹಾಗೂ ಪರಿಸರ ಹೋರಾಟಗಾರ.

ಶಿಷ್ಟಾಚಾರ ನೀಡುವುದು ಕಂದಾಯ ಇಲಾಖೆ ಕೆಲಸ. ನಾವು ಭದ್ರತೆ ಜವಾಬ್ದಾರಿ ಮಾತ್ರ‌ ನೋಡಿಕೊಳ್ಳುತ್ತೇವೆ.   –ಗಂಗಾಧರಪ್ಪ, ಡಿ.ವೈ.ಎಸ್ಪಿ.