ಕೆಪಿಸಿಸಿ ಕಚೇರಿಯಲ್ಲಿದ್ದ ಸಿಡಿ ಕಂಪನಿ ವಿಧಾನಸೌಧಕ್ಕೆ ಶಿಫ್ಟ್ ಆಗಿದೆ: ಬಿ.ವೈ. ವಿಜಯೇಂದ್ರ | BY Vijayendra Statement in Sakleshpur | Kannada Post

ಕೆಪಿಸಿಸಿ ಕಚೇರಿಯಲ್ಲಿದ್ದ ಸಿಡಿ ತಯಾರಿಕಾ ಕಂಪನಿ ವಿಧಾನಸೌಧಕ್ಕೆ ಶಿಫ್ಟ್ ಆಗಿದ್ದು, ಕಾಂಗ್ರೆಸ್ ಶಾಸಕರೂ ಆತಂಕದಲ್ಲಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಸಕಲೇಶಪುರದಲ್ಲಿ ಆರೋಪಿಸಿದ್ದಾರೆ.

ಸಕಲೇಶಪುರ / ಹಾಸನ (kannadapost.com): ಕೆಪಿಸಿಸಿ ಕಚೇರಿಯಲ್ಲಿದ್ದ ಸಿಡಿ ತಯಾರಿಕಾ ಕಂಪನಿ ಇಂದು ವಿಧಾನಸೌಧಕ್ಕೆ ಸ್ಥಳಾಂತರಗೊಂಡಿದ್ದು, ಆಡಳಿತ ಪಕ್ಷದ ಸಚಿವರು ಹಾಗೂ ಶಾಸಕರೂ ಸ್ಟಿಂಗ್ ಆಪರೇಷನ್ ಭೀತಿಯಲ್ಲಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಗಂಭೀರ ಆರೋಪ ಮಾಡಿದ್ದಾರೆ.

​ಪಟ್ಟಣದಲ್ಲಿಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸ್ಟಿಂಗ್ ಆಪರೇಷನ್ ವಿಚಾರವಾಗಿ ಬಿಜೆಪಿ ಮೌನ ವಹಿಸಿದೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, “ಇದೊಂದು ಓಪನ್ ಅಂಡ್ ಶಟ್ ಕೇಸ್ ಆಗಿರುವುದರಿಂದ ಈ ಬಗ್ಗೆ ಮಾತನಾಡುವ ಅವಶ್ಯಕತೆಯಿಲ್ಲ. ಸಿದ್ದರಾಮಯ್ಯ ಅವರಿಗೆ ಮಾತ್ರ ದೋಖಾ ಮಾಡಿಲ್ಲ, ಆಡಳಿತ ಪಕ್ಷದ ಸಚಿವರು ಹಾಗೂ ಶಾಸಕರಿಗೂ ಸ್ಟಿಂಗ್ ಆಗಿದೆ ಎಂಬ ಗುಮಾನಿ ಎಲ್ಲರನ್ನೂ ಕಾಡುತ್ತಿದೆ. ಶಾಸಕರ ಮನಸ್ಸನ್ನು ಗೆಲ್ಲಲು ಸಾಧ್ಯವಾಗದಿದ್ದಾಗ, ಅಧಿಕಾರದ ಹಪಾಹಪಿಯಿಂದ ಸ್ಟಿಂಗ್ ಮಾಡಿಯಾದರೂ ಅಧಿಕಾರ ಹಿಡಿಯಲು ಷಡ್ಯಂತ್ರ ನಡೆದಿದೆ ಎಂದು ಸ್ವತಃ ಕಾಂಗ್ರೆಸ್ ಶಾಸಕರೇ ಮಾತನಾಡಿಕೊಳ್ಳುತ್ತಿದ್ದಾರೆ” ಎಂದರು.

​ಸ್ಥಳೀಯ ಸಂಸ್ಥೆ ಚುನಾವಣೆ ನಡೆಸುವ ಮನಸ್ಸಿಲ್ಲ:

ಇಂದಿನ ಚುನಾವಣಾ ಫಲಿತಾಂಶದ ಬಳಿಕ ಮುಖ್ಯಮಂತ್ರಿಗಳ ಮುಖಚರ್ಯೆ ಹಾಗೂ ರಾಜ್ಯದ ವಾತಾವರಣವನ್ನು ಗಮನಿಸಿದರೆ ಕಾಂಗ್ರೆಸ್ ಸರ್ಕಾರಕ್ಕೆ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸುವ ಮಾನಸಿಕ ಸ್ಥಿತಿಯಿಲ್ಲ ಎಂದು ವಿಜಯೇಂದ್ರ ಟೀಕಿಸಿದರು. “ಅವರೇ ನ್ಯಾಯಾಲಯಕ್ಕೆ ಹೋಗಿ ತಡೆಯಾಜ್ಞೆ ತರುವ ರೀತಿಯಲ್ಲಿ ಮೀಸಲಾತಿ ಕೆಟಗರಿಗಳನ್ನು ಮಾಡಿ ಗೊಂದಲ ಸೃಷ್ಟಿಸಿದ್ದಾರೆ. ಒಂದು ವೇಳೆ ಚುನಾವಣೆ ನಡೆದರೆ ಬಿಜೆಪಿ ಸಂಪೂರ್ಣ ಸನ್ನದ್ಧವಾಗಿದೆ. ಬೂತ್ ವಿಜಯ ಸಂಕಲ್ಪ ಯಾತ್ರೆಯ ಅಂಗವಾಗಿ ಎಲ್ಲಾ ವಿಧಾನಸಭಾ ಕ್ಷೇತ್ರಗಳಿಗೆ ಭೇಟಿ ನೀಡುತ್ತಿದ್ದು, ಮತದಾರರು ಆಶೀರ್ವಾದ ಮಾಡಲಿದ್ದಾರೆ ಎಂಬ ವಿಶ್ವಾಸವಿದೆ” ಎಂದು ಹೇಳಿದರು.

​ಮೈತ್ರಿ ಕುರಿತು ವರಿಷ್ಠರ ನಿರ್ಧಾರ:

ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಮೈತ್ರಿ ಕುರಿತು ಪ್ರತಿಕ್ರಿಯಿಸಿದ ಅವರು, “ನಮ್ಮದು ರಾಷ್ಟ್ರೀಯ ಪಕ್ಷ. ರಾಷ್ಟ್ರೀಯ ವರಿಷ್ಠರು ನೀಡುವ ಸೂಚನೆಯಂತೆ ನಡೆದುಕೊಳ್ಳುವುದು ನಮ್ಮೆಲ್ಲರ ಕರ್ತವ್ಯ. ವರಿಷ್ಠರು ಏನು ನಿರ್ಧಾರ ಕೈಗೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ” ಎಂದು ಸ್ಪಷ್ಟಪಡಿಸಿದರು.