ಹಾಸನ (kannadapost.com): ಹಾಸನಾಂಬ ಜಾತ್ರಾ ಮಹೋತ್ಸವದ ಗುತ್ತಿಗೆಯಲ್ಲಿ ಭಾರಿ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿ ಹಾಗೂ ಸ್ಥಳೀಯ ಭಕ್ತರಿಗೆ ಪ್ರತ್ಯೇಕ ದರ್ಶನದ ವ್ಯವಸ್ಥೆ ಕಲ್ಪಿಸುವಂತೆ ಒತ್ತಾಯಿಸಿ ನಗರದಲ್ಲಿಂದು ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು.
ವಿಶ್ವ ಹಿಂದೂ ಪರಿಷತ್, ಬಜರಂಗದಳ, ಹಾಸನಾಂಬ ಸಿದ್ದೇಶ್ವರಸ್ವಾಮಿ ಪುಣ್ಯಕ್ಷೇತ್ರ ಸೇವಾ ಸಮಿತಿ, ವರ್ತಕರ ಸಂಘ ಹಾಗೂ ಅರ್ಚಕರ ಸಂಘ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದವು. ನಗರದ ವರ್ತಕರು ಸ್ವಯಂಪ್ರೇರಿತರಾಗಿ ಅಂಗಡಿ ಮುಂಗಟ್ಟುಗಳನ್ನು ಮುಚ್ಚುವ ಮೂಲಕ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದರು.
ನಗರದ ಹೇಮಾವತಿ ಪ್ರತಿಮೆ ಬಳಿಯಿಂದ ಆರಂಭವಾದ ಪ್ರತಿಭಟನಾ ಮೆರವಣಿಗೆಯು ಸುಭಾಷ್ ವೃತ್ತ, ಕಸ್ತೂರಬಾ ರಸ್ತೆ ಹಾಗೂ ಗಾಂಧಿಬಜಾರ್ ಮೂಲಕ ಸಾಗಿ ಎನ್.ಆರ್. ವೃತ್ತ ತಲುಪಿತು. ಎನ್.ಆರ್. ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ರಸ್ತೆ ತಡೆ ನಡೆಸಿದ ಪ್ರತಿಭಟನಾಕಾರರು, ಜಾತ್ರಾ ಮಹೋತ್ಸವದ ಹೆಸರಿನಲ್ಲಿ ಲೂಟಿ ಮಾಡಲಾಗುತ್ತಿದೆ ಎಂದು ಆರೋಪಿಸಿ ಜಿಲ್ಲಾಧಿಕಾರಿ ಹಾಗೂ ಉಪವಿಭಾಗಾಧಿಕಾರಿ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನಾಕಾರರ ಪ್ರಮುಖ ಬೇಡಿಕೆಗಳು:
- ಹಾಸನಾಂಬ ಜಾತ್ರಾ ಮಹೋತ್ಸವದಲ್ಲಿ ಹಾಸನ ತಾಲ್ಲೂಕಿನ ಜನತೆಗೆ ದೇವಿಯ ದರ್ಶನಕ್ಕೆ ಪ್ರತ್ಯೇಕ ಅವಕಾಶ ಕಲ್ಪಿಸಬೇಕು.
- ಜಾತ್ರಾ ಮಹೋತ್ಸವದ ಅವಧಿಯಲ್ಲಿ ಸಿದ್ದೇಶ್ವರಸ್ವಾಮಿ ದೇವಾಲಯದ ಬಾಗಿಲು ಮುಚ್ಚಬಾರದು.
- ದರ್ಶನಕ್ಕೆ ಬರುವ ಭಕ್ತಾದಿಗಳಿಗೆ ದೇವಿಯ ಪ್ರಸಾದವಾಗಿ ಹೂವು ಹಾಗೂ ಕುಂಕುಮ ನೀಡಬೇಕು.
- ಜಾತ್ರಾ ಮಹೋತ್ಸವದ ಗುತ್ತಿಗೆಯಲ್ಲಿ ನಡೆದಿರುವ ಭ್ರಷ್ಟಾಚಾರದ ಕುರಿತು ಸೂಕ್ತ ತನಿಖೆಯಾಗಬೇಕು.












