“ಈ ಕರ್ಮದಲ್ಲಿ ನಾನು ಪಾಲುದಾರ ಆಗಲ್ಲ; ಸಿಎಂಗೆ ಹೇಳಿ ವಾಪಸ್ ಹೋಗ್ತೀನಿ”: ಹಾಸನಾಂಬೆ ಜಾತ್ರೆಯ ದುಂದು ವೆಚ್ಚದ ಎಸ್ಟಿಮೇಟ್ ಕಂಡು ಗರಂ ಆದ ಸಚಿವ ಕೆ.ಎಂ. ಶಿವಲಿಂಗೇಗೌಡ

ಹಾಸನ (kannadapost.com):ಹಾಸನಾಂಬೆ ಜಾತ್ರೋತ್ಸವದ ಸಿದ್ಧತೆಗಳ ಕುರಿತು ಚರ್ಚಿಸಲು ಸಚಿವ ಕೆ.ಎಂ. ಶಿವಲಿಂಗೇಗೌಡ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಕೆಎಂಶಿ ಕೇವಲ ಒಂದು ಕಂಟ್ರೋಲ್ ರೂಂ ಸಿದ್ಧಪಡಿಸಲು ಬರೋಬ್ಬರಿ 50 ಲಕ್ಷ ರೂ. ಟೆಂಡರ್ ಪ್ರಸ್ತಾಪವನ್ನು ಕಂಡು ಸಚಿವರು ಅಧಿಕಾರಿಗಳ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

​50 ಲಕ್ಷ ಅಂದ್ರೆ ಅರ್ಧ ಕೋಟಿ ರೀ.. ಜನ ಏನಂತಾರೆ?

ಸಭೆಯಲ್ಲಿ ಅಧಿಕಾರಿಗಳಿಂದ ಜಾತ್ರೆಯ ತಯಾರಿ ಮತ್ತು ಖರ್ಚು-ವೆಚ್ಚಗಳ ಮಾಹಿತಿ ಪಡೆದ ಸಚಿವರಿಗೆ ಭಾರೀ ಆಘಾತ ಕಾದಿತ್ತು. ಒಂದು ಕಂಟ್ರೋಲ್ ರೂಂ ಸಿದ್ಧತೆಗೆ 50 ಲಕ್ಷ ರೂಪಾಯಿಗಳ ಟೆಂಡರ್ ಕರೆಯಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದೇ ತಡ, ಸಚಿವರು ಕೆಂಡಾಮಂಡಲರಾದರು. “ಒಂದು ಕಂಟ್ರೋಲ್ ರೂಂಗೆ ಇಷ್ಟು ದುಡ್ಡಾ? ಐವತ್ತು ಲಕ್ಷ ಅಂದ್ರೆ ಅರ್ಧ ಕೋಟಿ ರೀ… ಜನ ಏನಂತಾರೆ? ರಾಜ್ಯದಲ್ಲಿ ಬರಗಾಲ ಇದೆ, ಜನರು ಏನು ಮಾಡ್ತಾರೆ?” ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

​ನಾನು ಆತ್ಮಸಾಕ್ಷಿಗೆ ವಿರುದ್ಧ ನಡೆಯಲ್ಲ!

ಸಚಿವರ ಕೋಪವನ್ನು ಶಮನ ಮಾಡಲು ಯತ್ನಿಸಿದ  ಜಿಲ್ಲಾಧಿಕಾರಿ ಲತಾಕುಮಾರಿ ಅವರು, “ಸರ್ ಹಂಗೆಲ್ಲಾ ಹೇಳ್ಬೇಡಿ, ಬೇಡ ಅಂದ್ರೆ ಡಿಲೀಟ್ ಮಾಡಿಸೋಣ” ಎಂದು ಸಮಾಧಾನಪಡಿಸಲು ಮುಂದಾದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, “ಹಂಗಲ್ಲ ಮೇಡಂ, ಒಂದು ಕಂಟ್ರೋಲ್ ರೂಂಗೆ ಇಷ್ಟು ಹಣನಾ? ನನಗೆ ಒಂದು ಅರ್ಥ ಆಗ್ತಿಲ್ಲ. ಜಾತ್ರೆ ಚೆನ್ನಾಗಿ ಮಾಡಬೇಕು ಅನ್ನೋದು ನನಗೂ ಸಹ ಇಷ್ಟ. ಆದರೆ ಇಷ್ಟೊಂದು ದುಂದು ವೆಚ್ಚ ಬೇಕಾ? ಈ ಕರ್ಮದಲ್ಲಿ ನಾನು ಪಾಲುದಾರ ಆಗಲಾರೆ,” ಎಂದು ಕಡ್ಡಿ ಮುರಿದಂತೆ ಹೇಳಿದರು.

​ಸಿಎಂಗೆ ಹೇಳಿ ವಾಪಸ್ ಹೋಗ್ತೀನಿ:

“ನಮಗೆ ಈ ದುಂದುವೆಚ್ಚ ಇವೆಲ್ಲ ನೋಡ್ಬಿಟ್ರೆ ನಾವೂ ಈ ಕರ್ಮದಲ್ಲಿ ಭಾಗಿ ಆಗ್ಬೇಕಾ ಅನಿಸುತ್ತೆ. ಯಾವ ಬ್ರಹ್ಮ, ನಮ್ಮಪ್ಪ ಕೂತವನಲ್ಲ ಬಂದು ಹೇಳಿದರೂ ಆತ್ಮಸಾಕ್ಷಿ ವಿರುದ್ಧವಾದ ಮಾತು ಕೇಳಲ್ಲ. ನಾನು ಬೇಡ ಅನ್ನೋದಾದರೆ, ಬೇಕಾದರೆ ನಾನು ಸಿಎಂಗೆ ಹೇಳಿ ವಾಪಸ್ ಹೋಗ್ತೀನಿ. ಇವರು ಹಾಕಿಕೊಂಡು ಬಂದಿರೋ ಲೆಕ್ಕ ಎಲ್ಲ ಒಪ್ಪೋದಕ್ಕೆ ಆಗಲ್ಲ,” ಎಂದು ಕಟ್ಟುನಿಟ್ಟಾಗಿ ಎಚ್ಚರಿಸಿದರು.

​”ಜವಾಬ್ದಾರಿ ಕೊಟ್ಟಿದಾರೆ ಅಂತ ಆತ್ಮಸಾಕ್ಷಿಗೆ ವಿರುದ್ಧವಾಗಿ ನಡೆದುಕೊಳ್ಳಲು ಆಗಲ್ಲ. ಹೋದ ಸಾರಿ ಚೆನ್ನಾಗಿ ಮಾಡಿದ್ರಿ, ಅದನ್ನು ಒಪ್ಕೊತೀನಿ. ಆದರೆ ತೀರಾ ಓವರ್ ಆಗಿ ಆತ್ಮ ಒಪ್ಪದ ಕೆಲಸ ನಾನು ಮಾಡಲ್ಲ. ನೋಡಿ ಇದು ಬರಗಾಲ. ಏನೇನೋ ಮಾಡಿಕೊಂಡರೆ ನಾಳೆ ಜನ ಏನಂತಾರೆ ಅಂತ ಯೋಚನೆ ಮಾಡ್ಬೇಕು. ನೆಗೋಸಿಯೇಷನ್ ಮಾಡೋದು ಆಮೇಲೆ, ಈಗ ಎಸ್ಟಿಮೇಟ್ ಮಾಡಿರೋದು ಹೇಳಿ. ಐವತ್ತು ಲಕ್ಷ ಅಂದರೆ ಏನಂತಾ ತಿಳ್ಕಂಡಿದೀರಿ?” ಎಂದು ಸಭೆಯಲ್ಲಿ ತಮ್ಮ ಆಕ್ರೋಶ ಹೊರಹಾಕಿದರು.

​ಬರಗಾಲದ ಸಮಯದಲ್ಲಿ ಅನಗತ್ಯ ಖರ್ಚುಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಸಚಿವರು ತೆಗೆದುಕೊಂಡಿರುವ ಈ ನಿಲುವು ಇದೀಗ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.