ಕರ್ನಾಟಕದಲ್ಲಿ ವಿಧ್ವಂಸಕ ಕೃತ್ಯಕ್ಕೆ ಸಂಚು: ಟೆಲಿಗ್ರಾಂ ಮೂಲಕ ಜಾಲ, ಬಂಧಿತ ಶಂಕಿತನಿಗೂ ಹಾಸನಕ್ಕೂ ಏನು ಸಂಬಂಧ?

ಚಿಕ್ಕಬಳ್ಳಾಪುರ / ಅರಕಲಗೂಡು (kannadapost.com):ರಾಜ್ಯದಲ್ಲಿ ವಿಧ್ವಂಸಕ ಕೃತ್ಯಗಳನ್ನು ನಡೆಸಲು ಸಂಚು ರೂಪಿಸಿದ ಗಂಭೀರ ಆರೋಪದ ಹಿನ್ನೆಲೆಯಲ್ಲಿ ಇಬ್ಬರು ಶಂಕಿತರನ್ನು ರಾಜ್ಯ ಗುಪ್ತಚರ ಇಲಾಖೆ ಹಾಗೂ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.

​ಬಂಧಿತರನ್ನು ಚಿಕ್ಕಬಳ್ಳಾಪುರ ಮೂಲದ ಶಬ್ಬೀರ್ ಹಾಗೂ ಉತ್ತರ ಭಾರತದ ಬಿಹಾರ ಮೂಲದ ಸಲಾಮಿನ್ (25) ಎಂದು ಗುರುತಿಸಲಾಗಿದೆ. ಈ ಇಬ್ಬರು ಟೆಲಿಗ್ರಾಂ ಆ್ಯಪ್‌ನ ‘ಕ್ಲೋಸ್ಡ್ ಗ್ರೂಪ್’ (ಖಾಸಗಿ ಗುಂಪು) ಒಂದರಲ್ಲಿ ಪ್ರಚೋದನಕಾರಿ ವಿಚಾರಗಳು ಹಾಗೂ ಭಯೋತ್ಪಾದನೆಗೆ ಸಂಬಂಧಿಸಿದ ಚರ್ಚೆಗಳನ್ನು ನಡೆಸುತ್ತಿದ್ದರು ಎಂಬ ಆಘಾತಕಾರಿ ಮಾಹಿತಿ ಪ್ರಾಥಮಿಕ ತನಿಖೆಯಿಂದ ಬಹಿರಂಗವಾಗಿದೆ.

​ಸಲಾಮಿನ್ ಸಿಕ್ಕಿಬಿದ್ದಿದ್ದು ಹೇಗೆ?

ರಾಜ್ಯ ಗುಪ್ತಚರ ಇಲಾಖೆಯ ಮಾಹಿತಿಯ ಮೇರೆಗೆ ಚಿಕ್ಕಬಳ್ಳಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಮೊದಲು ಶಬ್ಬೀರ್‌ನನ್ನು ವಶಕ್ಕೆ ಪಡೆದರು. ಆತನ ಮೊಬೈಲ್ ಪರಿಶೀಲನೆ ನಡೆಸಿದಾಗ ಬಿಹಾರ ಮೂಲದ ಸಲಾಮಿನ್ ಎಂಬುವವನ ಸಂಪರ್ಕ ಪತ್ತೆಯಾಗಿದೆ. ಶಬ್ಬೀರ್ ನೀಡಿದ ಮಾಹಿತಿ ಹಾಗೂ ಮೊಬೈಲ್ ನೆಟ್‌ವರ್ಕ್ ಜಾಡು ಹಿಡಿದು ಪೊಲೀಸರು ಕಾರ್ಯಾಚರಣೆ ಚುರುಕುಗೊಳಿಸಿದರು.

​ಸಲಾಮಿನ್ ತನ್ನ ಅಣ್ಣನ ಜೊತೆ ಹಾವೇರಿ ಜಿಲ್ಲೆಯಲ್ಲಿ ರಸ್ತೆ ಕಾಮಗಾರಿ ಕೆಲಸ ಮಾಡುತ್ತಿದ್ದ. ಮಂಗಳವಾರ ಅಲ್ಲಿನ ಕಾಮಗಾರಿ ಮುಕ್ತಾಯಗೊಂಡ ಹಿನ್ನೆಲೆಯಲ್ಲಿ, ಗುತ್ತಿಗೆದಾರನು ಆತನನ್ನು ಬುಧವಾರ ಹಾಸನ ಜಿಲ್ಲೆಯ ಅರಕಲಗೂಡಿನ ರಸ್ತೆ ಕಾಮಗಾರಿಗೆ ಕಳುಹಿಸಿದ್ದನು. ಈ ನಿಖರ ಮಾಹಿತಿ ಆಧರಿಸಿ ಅರಕಲಗೂಡಿಗೆ ಆಗಮಿಸಿದ ಪೊಲೀಸರ ತಂಡ, ನಿನ್ನೆ (ಗುರುವಾರ) ಮಧ್ಯಾಹ್ನ ಸಂತೆ ಮರೂರು ವೃತ್ತದಲ್ಲಿ ಸಲಾಮಿನ್‌ನನ್ನು ಬಂಧಿಸಿ ಕರೆದೊಯ್ದಿದೆ. ಈ ಕಾರ್ಯಾಚರಣೆಯ ಬಳಿಕ ಸ್ಥಳೀಯ ಅರಕಲಗೂಡು ಪೊಲೀಸರಿಗೂ ಮಾಹಿತಿಯನ್ನು ರವಾನಿಸಲಾಗಿದೆ.

​ಎಸ್ಪಿ ಪದ್ಮಿನಿ ಸಾಹೂ ಹೇಳಿದ್ದೇನು?

ಈ ಪ್ರಕರಣದ ಕುರಿತು ಪ್ರತಿಕ್ರಿಯಿಸಿರುವ ಚಿಕ್ಕಬಳ್ಳಾಪುರ ಎಸ್‌ಪಿ ಪದ್ಮಿನಿ ಸಾಹೂ ಅವರು, “ಬಂಧಿತರಿಬ್ಬರಿಗೂ ಯಾವುದೇ ರೀತಿಯ ಭಯೋತ್ಪಾದನಾ ಹಿನ್ನೆಲೆ ಇರುವುದು ಸದ್ಯದ ಪ್ರಾಥಮಿಕ ತನಿಖೆಯಲ್ಲಿ ಪತ್ತೆಯಾಗಿಲ್ಲ. ಹೆಚ್ಚಿನ ವಿಚಾರಣೆಗಾಗಿ ಇಬ್ಬರನ್ನೂ ಪೊಲೀಸ್ ಕಸ್ಟಡಿಗೆ ಪಡೆಯುವ ಪ್ರಕ್ರಿಯೆ ನಡೆಯುತ್ತಿದೆ” ಎಂದು ಸ್ಪಷ್ಟಪಡಿಸಿದ್ದಾರೆ.

​ಪ್ರಕರಣದ ಬೆನ್ನು ಬಿದ್ದಿರುವ ಪೊಲೀಸರು, ಬಂಧಿತರ ಹಿನ್ನೆಲೆ, ಅವರ ಆರ್ಥಿಕ ವ್ಯವಹಾರಗಳು, ರಾಜ್ಯದಲ್ಲಿರುವ ಇತರೆ ಸಂಪರ್ಕಗಳು ಹಾಗೂ ಈ ಟೆಲಿಗ್ರಾಂ ಜಾಲದಲ್ಲಿ ಇನ್ನೂ ಯಾರಾದರೂ ಭಾಗಿಯಾಗಿದ್ದಾರೆಯೇ ಎಂಬ ಆಯಾಮಗಳಲ್ಲಿ ತೀವ್ರ ತನಿಖೆ ಮುಂದುವರಿಸಿದ್ದಾರೆ.