ಹೊಳೇನರಸೀಪುರ: ತಾಲ್ಲೂಕಿನ ಹಳೆಕೋಟೆ ಹೋಬಳಿಯ ಬೆಟ್ಟದಸಾತೇನಹಳ್ಳಿ ಗ್ರಾಮದ ಜೋಡಿ ಹಳ್ಳ ಕೆರೆಗೆ ಕಾಲುವೆಯಿಂದ ಹರಿದು ವ್ಯರ್ಥವಾಗುವ ನೀರನ್ನು ಸಂಗ್ರಹಿಸಿ ಜಾನುವಾರುಗಳಿಗೆ ಕುಡಿಯುವ ನೀರಾಗಿ ಬಳಸುವಂತೆ ಅಗತ್ಯ ವ್ಯವಸ್ಥೆಯನ್ನು ಹಾಸನ ಲೋಕಸಭಾ ಕ್ಷೇತ್ರದ ಸಂಸದ ಶ್ರೇಯಸ್ ಎಂ. ಪಟೇಲ್ ಅವರು ತಮ್ಮ ಲೋಕಸಭಾ ಸದಸ್ಯರ ವೇತನದಿಂದ ವೈಯಕ್ತಿಕವಾಗಿ ವೆಚ್ಚ ಭರಿಸಿ ಮಾಡಿಸಿದ್ದಾರೆ.
ಕಳೆದ 5 ವರ್ಷಗಳಿಂದ ಜೋಡಿ ಹಳ್ಳ ಕೆರೆಯಲ್ಲಿ ನೀರಿಲ್ಲದೆ, ಕೆರೆಗೆ ಯಾವುದೇ ಶಾಶ್ವತ ನೀರಾವರಿ ವ್ಯವಸ್ಥೆಯೂ ಇಲ್ಲದ ಕಾರಣ ಸ್ಥಳೀಯ ರೈತರು ಹಾಗೂ ಗ್ರಾಮಸ್ಥರು ಸಮಸ್ಯೆ ಎದುರಿಸುತ್ತಿದ್ದರು. ಪ್ರಸ್ತುತ ತೀವ್ರ ಬರ ಪರಿಸ್ಥಿತಿಯಲ್ಲಿ ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಉಂಟಾಗದಂತೆ ಈ ವ್ಯವಸ್ಥೆ ಮಾಡಲಾಗಿದೆ.
ಕಾಲುವೆಯಿಂದ ಹರಿದು ವ್ಯರ್ಥವಾಗುತ್ತಿದ್ದ ನೀರನ್ನು ಜೋಡಿ ಹಳ್ಳ ಕೆರೆಗೆ ಹರಿಸಿ ಸಂಗ್ರಹಿಸುವ ಮೂಲಕ ಜಾನುವಾರುಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲಾಗಿದೆ. ಇದರಿಂದ ಸ್ಥಳೀಯ ರೈತರು ಹಾಗೂ ಗ್ರಾಮಸ್ಥರು ಸಂತಸ ವ್ಯಕ್ತಪಡಿಸಿ ಸಂಸದ ಶ್ರೇಯಸ್ ಎಂ. ಪಟೇಲ್ ಅವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.
ಈ ಸಂದರ್ಭದಲ್ಲಿ ರೈತರು ಜೋಡಿ ಹಳ್ಳ ಕೆರೆಗೆ ಶಾಶ್ವತ ನೀರಿನ ಮೂಲ ಹಾಗೂ ನೀರಾವರಿ ವ್ಯವಸ್ಥೆ ಕಲ್ಪಿಸಬೇಕು ಎಂದು ಸಂಸದರಿಗೆ ಮನವಿ ಮಾಡಿದ್ದಾರೆ. ರೈತರ ಮನವಿಗೆ ಸ್ಪಂದಿಸಿದ ಸಂಸದರು, ಕೆರೆಗೆ ಶಾಶ್ವತ ನೀರಿನ ಮೂಲ ಕಲ್ಪಿಸುವ ನಿಟ್ಟಿನಲ್ಲಿ ಸಂಬಂಧಪಟ್ಟ ಇಲಾಖೆಗಳೊಂದಿಗೆ ಅಗತ್ಯ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.
“ಬರದಂತಹ ಸಂಕಷ್ಟದ ಸಂದರ್ಭದಲ್ಲಿ ರೈತರು ಹಾಗೂ ಜಾನುವಾರುಗಳೊಂದಿಗೆ ನಿಲ್ಲುವುದು ನಮ್ಮ ಜವಾಬ್ದಾರಿ. ಜೋಡಿ ಹಳ್ಳ ಕೆರೆಗೆ ಶಾಶ್ವತ ನೀರಿನ ಮೂಲ ಕಲ್ಪಿಸುವ ನಿಟ್ಟಿನಲ್ಲಿ ಮುಂದಿನ ಹಂತದ ಕ್ರಮಗಳಿಗೂ ಆದ್ಯತೆ ನೀಡಲಾಗುವುದು” ಎಂದು ಸಂಸದ ಶ್ರೇಯಸ್ ಎಂ. ಪಟೇಲ್ ತಿಳಿಸಿದ್ದಾರೆ.












