ಮಾಡಾಳು: ವೈಭವದ ಚಂದ್ರಮಂಡಲೋತ್ಸವ; ಕಲ್ಯಾಣಿಯಲ್ಲಿ ‘ ಮೂಲಸ್ಥಾನ ಸ್ವರ್ಣ ಗೌರಮ್ಮ’ ದೇವಿ ವಿಸರ್ಜನೆ, 12 ದಿನಗಳ ಜಾತ್ರೆ ಸಂಪನ್ನ

ಮಾಡಾಳು (kannadapost.com): ಶ್ರಾವಣ ಕಳೆದು ಭಾದ್ರಪದ ಮಾಸ ಬಂತೆಂದರೆ ರಾಜ್ಯ ಹಾಗೂ ದೇಶಾದ್ಯಂತ ಗಣಪನ ಆರಾಧನೆ ನಡೆದರೆ, ಇತ್ತ ಅರಸೀಕೆರೆ ತಾಲೂಕಿನ ಮಾಡಾಳು ಗ್ರಾಮದಲ್ಲಿ ಮಾತ್ರ ಗಣಪನ ತಾಯಿ ಗೌರಮ್ಮ ದೇವಿಯ ದರ್ಬಾರ್ ನಡೆಯುತ್ತದೆ. ‘ಕರ್ಪೂರ ಪ್ರಿಯೆ’, ‘ಮೂಗುತಿ ಸುಂದರಿ’ ಎಂದೇ ಖ್ಯಾತಿ ಪಡೆದಿರುವ ಮಾಡಾಳು ಮೂಲಸ್ಥಾನ ಶ್ರೀ ಸ್ವರ್ಣ ಗೌರಿ ಅಮ್ಮನವರ 12 ದಿನಗಳ ಜಾತ್ರಾ ಮಹೋತ್ಸವವು ಶುಕ್ರವಾರ ದೇವಿಯ ವಿಸರ್ಜನೆಯೊಂದಿಗೆ ಸಂಪನ್ನಗೊಂಡಿತು.

​ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಶಿಲಾ ದೇವಾಲಯದಲ್ಲಿ ಪ್ರತಿಷ್ಠಾಪನೆಗೊಂಡಿದ್ದ ಗೌರಮ್ಮ ದೇವಿ, 12 ದಿನಗಳ ಕಾಲ ಭಕ್ತರಿಂದ ತ್ರಿಕಾಲ ಪೂಜೆ ಸ್ವೀಕರಿಸಿ, ಶುಕ್ರವಾರ ಸಂಜೆ ಊರ ಮುಂದಿನ ಕಲ್ಯಾಣಿಯಲ್ಲಿ ವಿಸರ್ಜನೆಗೊಂಡಳು.

​ಚಂದ್ರಮಂಡಲೋತ್ಸವ ಹಾಗೂ ದುಗ್ಗಳ ಹರಕೆ:

ಶುಕ್ರವಾರ ಮುಂಜಾನೆ ದೇವಾಲಯದ ಮುಂಭಾಗ ಚಂದ್ರಮಂಡಲೋತ್ಸವಕ್ಕೆ ಸಿದ್ಧಗೊಳಿಸಿದ್ದ ವೇದಿಕೆಯಲ್ಲಿ, ಪುಷ್ಪಾಲಂಕೃತ ಮಂಟಪದಲ್ಲಿ ದೇವಿಯನ್ನು ಪ್ರತಿಷ್ಠಾಪಿಸಲಾಯಿತು. ಕೋಡಿಮಠದ ಉತ್ತರಾಧಿಕಾರಿ ಶ್ರೀ ಚೇತನ್ ಮರಿದೇವರ ಸಮ್ಮುಖದಲ್ಲಿ ಹಾಗೂ ಗ್ರಾಮದ ಆರಾಧ್ಯ ದೈವ ಶ್ರೀ ಗುರು ಚನ್ನಬಸವಣ್ಣನವರ ಪಕ್ಕದಲ್ಲಿ ದೇವಿಯನ್ನು ಕೂರಿಸಿ ವಿಶೇಷ ಪೂಜೆ ಸಲ್ಲಿಸಲಾಯಿತು. ಈ ವೇಳೆ ನೂರಾರು ಮಹಿಳೆಯರು ತಮ್ಮ ತಲೆಯ ಮೇಲೆ ‘ದುಗ್ಗಳದ ಬಟ್ಟಲ’ನ್ನು ಹೊತ್ತು ದೇವಿಗೆ ಹರಕೆ ತೀರಿಸಿದರು. ಬೆಳಗಿದ ಕರ್ಪೂರದ ಜ್ಯೋತಿಯ ಬೆಳಕಿನಲ್ಲಿ ಅಮ್ಮನವರು ಅತ್ಯಂತ ಪ್ರಕಾಶಮಾನವಾಗಿ ಕಂಗೊಳಿಸಿದರು.

​ಮಡಿಲಕ್ಕಿ ಸೇವೆ ಹಾಗೂ ಭಕ್ತಿಪೂರ್ವಕ ಸ್ವಾಗತ:

ಬೆಳಿಗ್ಗೆ 11 ಗಂಟೆಗೆ ಪುಷ್ಪಾಲಂಕೃತ ಮಂಟಪವನ್ನು ಹೊತ್ತ ಭಕ್ತರು, ದೇವಿ ‘ಮಡಿಲಕ್ಕಿ ಸೇವೆ’ಗಾಗಿ ಉತ್ಸವದೊಂದಿಗೆ ಗ್ರಾಮದ ಬೀದಿಗಳಲ್ಲಿ ಸಾಗಿದರು. ಉತ್ಸವ ಸಾಗುವ ಮಾರ್ಗದುದ್ದಕ್ಕೂ ಮಹಿಳೆಯರು ನೀರು ಹಾಕಿ, ಬಣ್ಣ ಬಣ್ಣದ ಚಿತ್ತಾರದ ರಂಗೋಲಿಗಳನ್ನು ಬಿಡಿಸಿ ದೇವಿಯನ್ನು ಸ್ವಾಗತಿಸಿದರು. ಭಕ್ತಿಯಿಂದ ಪೂಜೆ ಸಲ್ಲಿಸಿ ಮಡಿಲಕ್ಕಿ ಸಮರ್ಪಿಸುವ ದೃಶ್ಯಗಳು ಎಲ್ಲೆಡೆ ಕಂಡುಬಂದವು.

​ವಿಸರ್ಜನಾ ಮಹೋತ್ಸವದ ಅಂಗವಾಗಿ ಇಡೀ ಗ್ರಾಮವು ತಳಿರು ತೋರಣ, ಬಾಳೆಕಂದು ಹಾಗೂ ಬಣ್ಣ ಬಣ್ಣದ ವಿದ್ಯುತ್ ದೀಪಗಳಿಂದ ಮದುವಣಗಿತ್ತಿಯಂತೆ ಸಿಂಗಾರಗೊಂಡು ಭಕ್ತರ ಕಣ್ಮನ ಸೆಳೆಯಿತು.

​ಕಲ್ಯಾಣಿಯಲ್ಲಿ ದೇವಿ ವಿಸರ್ಜನೆ:

ಶುಕ್ರವಾರ ಸಂಜೆ ಹಾರನಹಳ್ಳಿ ಸುಕ್ಷೇತ್ರ ಕೋಡಿಮಠದ ಜಗದ್ಗುರು ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಅವರ ದಿವ್ಯ ಸಾನಿಧ್ಯದಲ್ಲಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿ ಮಹಾಮಂಗಳಾರತಿ ಬೆಳಗಲಾಯಿತು. ಸಂಜೆ 4 ಗಂಟೆಗೆ ಸರಿಯಾಗಿ ಕಲ್ಯಾಣಿಯಲ್ಲಿ ದೇವಿಯನ್ನು ಭಕ್ತಿಭಾವದಿಂದ ವಿಸರ್ಜಿಸುವ ಮೂಲಕ, 12 ದಿನಗಳ ಕಾಲ ಅತ್ಯಂತ ವೈಭವಯುತವಾಗಿ ನಡೆದ ಜಾತ್ರಾ ಮಹೋತ್ಸವಕ್ಕೆ ತೆರೆ ಬಿದ್ದಿತು.

​ಈ ಪುಣ್ಯ ಕಾರ್ಯಕ್ರಮದಲ್ಲಿ ಕೋಡಿಮಠದ ಉತ್ತರಾಧಿಕಾರಿ ಚೇತನ್ ಮರಿದೇವರು, ಐನಹಳ್ಳಿ ಪ್ರಶಾಂತ್ ದೇವರು, ಡಿವೈಎಸ್‌ಪಿ ಗೋಪಿ, ಪಿಎಸ್‌ಐ ಸುರೇಶ್, ಕೋಡಿಮಠದ ಏಜೆಂಟ್ ಮಹದೇವಪ್ಪ ಸೇರಿದಂತೆ ಅಪಾರ ಸಂಖ್ಯೆಯ ಭಕ್ತರು ಹಾಗೂ ಮುಖಂಡರು ಉಪಸ್ಥಿತರಿದ್ದರು.