ಹಾಸನ (kannadapost.com): ಗಣೇಶ ವಿಸರ್ಜನೆ ವೇಳೆ ಸುಪ್ರೀಂ ಕೋರ್ಟ್ ಆದೇಶವನ್ನು ಉಲ್ಲಂಘಿಸಿ, ಸಾರ್ವಜನಿಕರಿಗೆ ತೊಂದರೆಯಾಗುವ ರೀತಿಯಲ್ಲಿ ಡಿಜೆ (DJ) ಬಳಸಿದ ಹಿನ್ನೆಲೆಯಲ್ಲಿ ಹಿಂದೂ ಮಹಾಗಣಪತಿಯ ಆಯೋಜಕರು, ಡಿಜೆ ಚಾಲಕ ಹಾಗೂ ಮಾಲೀಕ ಸೇರಿದಂತೆ 12 ಮಂದಿ ವಿರುದ್ಧ ಹಾಸನ ನಗರ ಪೊಲೀಸ್ ಠಾಣೆಯಲ್ಲಿ ಪಿ.ಎಸ್.ಐ.ಪ್ರಿಯಾಂಕ ನೀಡಿದ ದೂರಿನನ್ವಯ ಎಫ್ಐಆರ್ (FIR) ದಾಖಲಾಗಿದೆ.
ಘಟನೆಯ ವಿವರ:
ಸೆಪ್ಟೆಂಬರ್ 23 ರಂದು ಹಾಸನ ನಗರದ ಹೊಸಲೈನ್ ರಸ್ತೆಯ ಹಾಸನಾಂಬ ಸರ್ಕಲ್ ಬಳಿ ಹಿಂದೂ ಮಹಾಗಣಪತಿ ವಿಸರ್ಜನಾ ಕಾರ್ಯಕ್ರಮದ ಮೆರವಣಿಗೆ ಸಾಗುತ್ತಿತ್ತು. ಈ ಮೆರವಣಿಗೆಯಲ್ಲಿ ಹೆಚ್ಚು ಕರ್ಕಶವಾಗಿ ಶಬ್ದವನ್ನುಂಟು ಮಾಡುವ 4 ಬೇಸ್ಕೆಟ್ ಮತ್ತು 4 ಡಿಜೆ ಸ್ಪೀಕರ್ಗಳನ್ನು ಲಾರಿಗೆ ಅಳವಡಿಸಿ, ಜನರೇಟರ್ ಬಳಸಿ ಸಾರ್ವಜನಿಕರಿಗೆ ತೊಂದರೆಯಾಗುವ ರೀತಿಯಲ್ಲಿ ಶಬ್ದ ಮಾಲಿನ್ಯ ಮಾಡಲಾಗುತ್ತಿತ್ತು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಇದಕ್ಕೂ ಮುನ್ನ, ಸೆಪ್ಟೆಂಬರ್ 22 ರಂದೇ ಪೊಲೀಸ್ ಇನ್ಸ್ಪೆಕ್ಟರ್ ಅವರು ಆಯೋಜಕರ ಸಭೆ ಕರೆದು, ಗಣಪತಿ ಕಾರ್ಯಕ್ರಮದಲ್ಲಿ ಯಾವುದೇ ಶಬ್ದ ವರ್ಧಕ (ಡಿಜೆ) ಬಳಸಬಾರದು ಎಂದು ಸುಪ್ರೀಂ ಕೋರ್ಟ್ ಆದೇಶವನ್ನು ಲಿಖಿತವಾಗಿ ತಿಳಿಸಿದ್ದರು. ಆದಾಗ್ಯೂ, ನಿಯಮ ಉಲ್ಲಂಘಿಸಿ ಡಿಜೆ ಬಳಸಲಾಗಿದೆ. ಸಾರ್ವಜನಿಕರು ಶಬ್ದ ಮಾಲಿನ್ಯದಿಂದ ಮಾನಸಿಕ ಕಿರಿಕಿರಿ ಅನುಭವಿಸಿ ಆರೋಪ ಮಾಡಿದಾಗ, ಭದ್ರತಾ ಕರ್ತವ್ಯದಲ್ಲಿದ್ದ ಪಿಎಸ್ಐ ಪ್ರಿಯಾಂಕಾ ಮತ್ತು ಸಿಬ್ಬಂದಿ ಡಿಜೆ ಚಾಲಕ ಪವನನಿಗೆ ಧ್ವನಿ ಕಡಿಮೆ ಮಾಡುವಂತೆ ಸೂಚಿಸಿದರು. ಆದರೆ, ಆತ ಸೂಚನೆಯನ್ನು ನಿರ್ಲಕ್ಷಿಸಿದ್ದಾನೆ.
ಪರಿಸರ ಇಲಾಖೆಯಿಂದ ಡೆಸಿಬಲ್ ಅಳತೆ:
ಕೂಡಲೇ ಪರಿಸರ ಇಲಾಖೆಯ ಸಿಬ್ಬಂದಿ ಕುಶಾಲ್ ಗೌಡ ಅವರನ್ನು ಸ್ಥಳಕ್ಕೆ ಕರೆಯಿಸಿ ಶಬ್ದದ ಡೆಸಿಬಲ್ ಅಳತೆ ಮಾಡಿಸಲಾಯಿತು. ಸುಪ್ರೀಂ ಕೋರ್ಟ್ ಆದೇಶ ಉಲ್ಲಂಘನೆ ಮತ್ತು ಸಾರ್ವಜನಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಿದ ಆರೋಪದಡಿ ಗಣಪತಿ ಆಯೋಜಕರಾದ ವಿಕಾಸ್, ದಯಾನಂದ್, ಅಭಿಷೇಕ್, ಲೋಕಿ, ವಿಕ್ಕಿ, ಅನೂಪ್, ದಿನೇಶ್ ಸಿಂಗ್, ದಾಸರಕೊಪ್ಪಲು ಮಂಜು, ಶರತ್ ಗುಟ್ಟೇನಹಳ್ಳಿ ಮತ್ತು ಮಹಿಪಾಲ್, ಹಾಗೂ ಡಿಜೆ ಚಾಲಕ ಪವನ ಮತ್ತು ಡಿಜೆ ಮಾಲೀಕ ನವೀನ ಸೇರಿ ಒಟ್ಟು 12 ಜನರ ವಿರುದ್ಧ ದೂರು ನೀಡಲಾಗಿದೆ.
ನ್ಯಾಯಾಲಯದ ಅನುಮತಿ ಪಡೆದ ನಂತರ, ಕರ್ನಾಟಕ ಪೊಲೀಸ್ ಕಾಯ್ದೆ 1963 (U/S 37, 109) ಹಾಗೂ ಭಾರತೀಯ ನ್ಯಾಯ ಸಂಹಿತೆ (BNS) 2023 (U/S 292) ಅಡಿ ಹಾಸನ ನಗರ ಠಾಣೆಯಲ್ಲಿ (Crime No: 173/2026) ಪ್ರಕರಣ ದಾಖಲಿಸಿಕೊಂಡು ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.












