ಚನ್ನರಾಯಪಟ್ಟಣ: ನಾಲೆಗೆ ಬಿದ್ದಿದ್ದ ಗೆಳೆಯನನ್ನು ನೋಡಲು ಬಂದವನೂ ರಸ್ತೆ ಅಪಘಾತದಲ್ಲಿ ಸಾವು; ಒಂದೇ ದಿನ ಇಬ್ಬರು ಸ್ನೇಹಿತರ ದುರ್ಮರಣ

ಚನ್ನರಾಯಪಟ್ಟಣ (kannadapost.com): ಬೈಕ್ ಸ್ಕಿಡ್ ಆಗಿ ಹೇಮಾವತಿ ನಾಲೆಗೆ ಬಿದ್ದಿದ್ದ ತನ್ನ ಆಪ್ತ ಸ್ನೇಹಿತನನ್ನು ನೋಡಲು ಬಂದಿದ್ದ ಯುವಕನೊಬ್ಬ, ಮರಳಿ ಊರಿಗೆ ತೆರಳುವಾಗ ಭೀಕರ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿರುವ ಹೃದಯವಿದ್ರಾವಕ ಘಟನೆ ಹಾಸನ ಜಿಲ್ಲೆಯ ಚನ್ನರಾಯಪಟ್ಟಣದಲ್ಲಿ ನಿನ್ನೆ (ಬುಧವಾರ) ರಾತ್ರಿ ನಡೆದಿದೆ.

​ರಸ್ತೆ ಅಪಘಾತದಲ್ಲಿ ಮೃತಪಟ್ಟ ಯುವಕನನ್ನು ಆನೆಕೆರೆ ಗ್ರಾಮದ ಆನಂದ್ (30) ಎಂದು ಗುರುತಿಸಲಾಗಿದೆ. ಬುಧವಾರ ಸಂಜೆಯಷ್ಟೇ ಬೈಕ್ ಸ್ಕಿಡ್ ಆಗಿ ಹೇಮಾವತಿ ನಾಲೆಗೆ ಬಿದ್ದಿದ್ದ ಕೆಇಬಿ (ಸೆಸ್ಕ್) ನೌಕರ ಹೇಮಂತ್ ಹಾಗೂ ಆನಂದ್ ಅತ್ಯಂತ ಆತ್ಮೀಯ ಸ್ನೇಹಿತರಾಗಿದ್ದರು.

ಸ್ನೇಹಿತನಿಗಾಗಿ ಬಂದು ಪ್ರಾಣ ಬಿಟ್ಟ ಗೆಳೆಯ:

ತನ್ನ ಪ್ರಾಣಸ್ನೇಹಿತ ಹೇಮಂತ್ ನಾಲೆಗೆ ಬಿದ್ದಿರುವ ವಿಷಯ ತಿಳಿದ ತಕ್ಷಣ ಆನಂದ್ ಆಘಾತಗೊಂಡು, ಘಟನಾ ಸ್ಥಳಕ್ಕೆ ಬೈಕ್‌ನಲ್ಲಿ ಧಾವಿಸಿದ್ದನು. ಅಲ್ಲಿ ಶೋಧಕಾರ್ಯ ನಡೆಯುತ್ತಿದ್ದ ಸ್ಥಳದಲ್ಲಿ ಕೆಲಕಾಲ ಇದ್ದು, ರಾತ್ರಿ ತನ್ನ ಬೈಕ್‌ನಲ್ಲಿ ವಾಪಸ್ ಗ್ರಾಮಕ್ಕೆ ಮರಳುತ್ತಿದ್ದನು.

​ಈ ವೇಳೆ ಆನಂದ್ ಚಲಾಯಿಸುತ್ತಿದ್ದ ಬೈಕ್, ರಸ್ತೆ ಬದಿಯಲ್ಲಿ ನಿಂತಿದ್ದ ಅಪರಿಚಿತ ವಾಹನವೊಂದಕ್ಕೆ ಹಿಂಬದಿಯಿಂದ ಗುದ್ದಿದೆ. ಡಿಕ್ಕಿಯ ರಭಸಕ್ಕೆ ಗಂಭೀರವಾಗಿ ಗಾಯಗೊಂಡ ಆನಂದ್ ಸ್ಥಳದಲ್ಲೇ ದಾರುಣವಾಗಿ ಸಾವನ್ನಪ್ಪಿದ್ದಾನೆ.

ಪತ್ತೆಯಾಗದ ಹೇಮಂತ್ ಮೃತದೇಹ:

ಒಂದೆಡೆ ನಾಲೆಗೆ ಬಿದ್ದಿರುವ ಹೇಮಂತ್ ಅವರ ಮೃತದೇಹ ಇನ್ನೂ ಪತ್ತೆಯಾಗಿಲ್ಲ. ಇದರ ನಡುವೆಯೇ ಆತನ ಆಪ್ತ ಸ್ನೇಹಿತ ಆನಂದ್ ಕೂಡ ಅಪಘಾತದಲ್ಲಿ ಅಸುನೀಗಿರುವುದು ಕುಟುಂಬಸ್ಥರ ಹಾಗೂ ಆನೆಕೆರೆ ಗ್ರಾಮಸ್ಥರ ಆಕ್ರಂದನಕ್ಕೆ ಕಾರಣವಾಗಿದೆ. ಒಂದೇ ದಿನ ಇಬ್ಬರು ಸ್ನೇಹಿತರು ಬಲಿಯಾಗಿರುವುದು ಇಡೀ ಗ್ರಾಮದಲ್ಲಿ ಶೋಕ ಮಡುಗಟ್ಟುವಂತೆ ಮಾಡಿದೆ.

​ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಈ ಸಂಬಂಧ ಚನ್ನರಾಯಪಟ್ಟಣ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಪಘಾತಕ್ಕೆ ಕಾರಣವಾದ ವಾಹನದ ಪತ್ತೆಗೆ ಪೊಲೀಸರು ಬಲೆಬೀಸಿದ್ದಾರೆ.