ಹಾಸನ(kannadapost.com): ನಗರದ ಎನ್.ಆರ್. ವೃತ್ತದಲ್ಲಿ ಕೆಎಸ್ಆರ್ಟಿಸಿ ಬಸ್ ಚಾಲಕನ ಅತಿವೇಗ ಹಾಗೂ ನಿರ್ಲಕ್ಷ್ಯದ ಚಾಲನೆಗೆ ಗೃಹಿಣಿಯೋರ್ವಳು ದಾರುಣವಾಗಿ ಸಾವನ್ನಪ್ಪಿರುವ ಘಟನೆ ಶನಿವಾರ ನಡೆದಿದೆ. ಮೃತರನ್ನು ಹಾಸನ ತಾಲ್ಲೂಕಿನ ದೊಡ್ಡ ಆಲದಹಳ್ಳಿ ಗ್ರಾಮದ ಮೂಲದ ಅಪರ್ಣ ಡಿ.ಜೆ. (31) ಎಂದು ಗುರುತಿಸಲಾಗಿದೆ.
ಬೆಂಗಳೂರಿನಲ್ಲಿ ಪತಿ ಯೋಗೀಶ್ ಅವರೊಂದಿಗೆ ನೆಲೆಸಿದ್ದ ಅಪರ್ಣ ಅವರು, ಗೌರಿ-ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಶುಕ್ರವಾರ ರಾತ್ರಿಯಷ್ಟೇ ತಮ್ಮ ತವರು ಮನೆಗೆ ಬಂದಿದ್ದರು. ಇಂದು (ಶನಿವಾರ) ಆಸ್ಪತ್ರೆಗೆ ಭೇಟಿ ನೀಡುವ ಸಲುವಾಗಿ ಹಾಸನ ನಗರಕ್ಕೆ ಬಂದಿದ್ದ ಅಪರ್ಣ, ಕೆಲಸ ಮುಗಿಸಿಕೊಂಡು ತಮ್ಮ ಸ್ನೇಹಿತೆ ರಕ್ಷಿತಾ ಅವರೊಂದಿಗೆ ಸ್ಕೂಟರ್ನಲ್ಲಿ ವಾಪಸ್ ಊರಿಗೆ ತೆರಳುತ್ತಿದ್ದರು.
ಘಟನೆಯ ವಿವರ:
ಅಪರ್ಣ ಹಾಗೂ ರಕ್ಷಿತಾ ಅವರು ಎನ್.ಆರ್. ವೃತ್ತದ ಬಳಿ ತೆರಳುತ್ತಿದ್ದಾಗ, ಹಿಂದಿನಿಂದ ಅತಿವೇಗವಾಗಿ ಬಂದ ಕೆಎಸ್ಸಾರ್ಟಿಸಿ ಸಾರಿಗೆ ಬಸ್ ಇವರ ಸ್ಕೂಟರ್ಗೆ ಭೀಕರವಾಗಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಇಬ್ಬರೂ ರಸ್ತೆಗೆ ಬಿದ್ದಿದ್ದಾರೆ. ಈ ವೇಳೆ ಬಸ್ ಚಕ್ರಕ್ಕೆ ಸಿಲುಕಿದ ಅಪರ್ಣ ಅವರನ್ನು ಬಸ್ಸು ಸ್ವಲ್ಪ ದೂರದವರೆಗೆ ಎಳೆದುಕೊಂಡು ಹೋಗಿದೆ.
ಇದನ್ನು ಗಮನಿಸಿದ ಆಟೋ ಚಾಲಕ ಕುಮಾರ್ ಎಂಬುವವರು ತಕ್ಷಣವೇ ಸ್ಪಂದಿಸಿ, ಚಕ್ರದಡಿಯಿಂದ ಅಪರ್ಣ ಅವರನ್ನು ಹೊರತೆಗೆದು ಜಿಲ್ಲಾಸ್ಪತ್ರೆಗೆ ದಾಖಲಿಸಲು ಮುಂದಾಗಿದ್ದಾರೆ. ಆದರೆ, ತೀವ್ರ ರಕ್ತಸ್ರಾವ ಹಾಗೂ ಗಂಭೀರ ಗಾಯಗಳಾಗಿದ್ದರಿಂದ ಆಸ್ಪತ್ರೆ ತಲುಪುವಷ್ಟರಲ್ಲೇ ಅಪರ್ಣ ಕೊನೆಯುಸಿರೆಳೆದಿದ್ದಾರೆ.
ಬ್ರೇಕ್ ವಿಫಲವಾಗಿದೆ ಎಂದ ಚಾಲಕ:
ಅಪಘಾತಕ್ಕೆ ಬಸ್ನ ಬ್ರೇಕ್ ಹಿಡಿಯದಿರುವುದೇ ಕಾರಣ ಎಂದು ಬಸ್ ಚಾಲಕ ಸ್ಥಳದಲ್ಲಿ ಸಬೂಬು ನೀಡಿದ್ದಾನೆ. ಹಬ್ಬದ ಸಂಭ್ರಮದಲ್ಲಿದ್ದ ಕುಟುಂಬದಲ್ಲಿ ಇದೀಗ ಸೂತಕದ ಛಾಯೆ ಆವರಿಸಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ.
ಕಳೆದುಹೋದ ಮಾಂಗಲ್ಯ ಸರ:
ಈ ಭೀಕರ ಅಪಘಾತದ ಗಡಿಬಿಡಿಯಲ್ಲಿ, ಮೃತ ಅಪರ್ಣ ಅವರ ಕೊರಳಿನಲ್ಲಿದ್ದ ಎರಡು ಎಳೆಯ ಚಿನ್ನದ ಮಾಂಗಲ್ಯ ಸರ ಕಳೆದುಹೋಗಿದೆ ಎಂದು ತಿಳಿದುಬಂದಿದೆ.
ಘಟನಾ ಸ್ಥಳಕ್ಕೆ ಹಾಸನ ಸಂಚಾರಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.












