ಅರಸೀಕೆರೆ (kannadapost.com): ಪೋಷಕರು ಮಕ್ಕಳಿಗೆ ಕೇವಲ ಆಸ್ತಿ ಮಾಡುವುದಕ್ಕಿಂತ ಉತ್ತಮ ಶಿಕ್ಷಣ ನೀಡಿ ಅವರನ್ನು ಸಮಾಜದ ಆಸ್ತಿಯನ್ನಾಗಿ ಮಾಡುವುದು ಜವಾಬ್ದಾರಿ ಎಂದು ಮಾಡಾಳು ನಿರಂಜನ ಪೀಠ ಸೌಹಾರ್ದ ಸಹಕಾರ ಸಂಘದ ಅಧ್ಯಕ್ಷರಾದ ಶ್ರೀ ರುದ್ರಮುನಿ ಸ್ವಾಮೀಜಿ ಕರೆ ನೀಡಿದರು.
ಅರಸೀಕೆರೆ ತಾಲ್ಲೂಕಿನ ಕಣಕಟ್ಟೆ ಹೋಬಳಿಯ ಮಾಡಾಳು ಗ್ರಾಮದಲ್ಲಿ ನಡೆದ ಮಾಡಾಳು ನಿರಂಜನ ಪೀಠ ಸೌಹಾರ್ದ ಸಹಕಾರ ಸಂಘದ 2ನೇ ವರ್ಷದ ವಾರ್ಷಿಕ ಮಹಾಸಭೆ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರಜ್ಞಾವಂತ ಸಮಾಜ ಇಂದು ಕವಲೊಡೆದ ದಾರಿಯಲ್ಲಿ ಸಾಗುತ್ತಿದ್ದು, ಯುವಜನತೆ ಆಧುನಿಕ ಜೀವನಶೈಲಿಗೆ ಒಳಗಾಗಿ ಹಲವು ಸಂಕಷ್ಟಗಳನ್ನು ಎದುರಿಸುವಂತಾಗಿದೆ ಎಂದು ರುದ್ರಮುನಿ ಸ್ವಾಮೀಜಿ ಬೇಸರ ವ್ಯಕ್ತಪಡಿಸಿದರು.
ಯುವಜನತೆ ಉತ್ತಮ ಶಿಕ್ಷಣದೊಂದಿಗೆ ಸಂಸ್ಕಾರ, ಸಾಮಾಜಿಕ ಜವಾಬ್ದಾರಿ ಹಾಗೂ ಉತ್ತಮ ಜೀವನ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕು. ಪೋಷಕರು ಮಕ್ಕಳ ಭವಿಷ್ಯಕ್ಕಾಗಿ ಆಸ್ತಿ ಸಂಪಾದಿಸುವುದರ ಜೊತೆಗೆ, ಅವರಿಗೆ ಗುಣಮಟ್ಟದ ಶಿಕ್ಷಣ ಕೊಡಿಸುವತ್ತ ಹೆಚ್ಚಿನ ಗಮನ ಹರಿಸಬೇಕು ಎಂದು ಸಲಹೆ ನೀಡಿದರು.
ರೈತರ ನೆರವಿಗೆ ಸರ್ಕಾರ ಮುಂದಾಗಲಿ
ಪ್ರಸ್ತುತ ರಾಜ್ಯದಲ್ಲಿ ಪ್ರಕೃತಿ ವಿಕೋಪದಿಂದಾಗಿ ಕೆಲವೆಡೆ ಅತಿವೃಷ್ಟಿ ಹಾಗೂ ಅನಾವೃಷ್ಟಿಯ ಪರಿಸ್ಥಿತಿ ಎದುರಾಗಿದೆ. ಹಾಸನ ಜಿಲ್ಲೆಯಲ್ಲಿಯೂ ಮಳೆಯ ಕೊರತೆಯಿಂದ ಬರದ ಪರಿಸ್ಥಿತಿ ನಿರ್ಮಾಣವಾಗಿದ್ದು, ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಅವರು ಗಮನ ಸೆಳೆದರು.
ರೈತರ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸಿ ಚುನಾಯಿತ ಜನಪ್ರತಿನಿಧಿಗಳು ಹಾಗೂ ಸರ್ಕಾರ ತಕ್ಷಣ ರೈತರ ನೆರವಿಗೆ ಧಾವಿಸಬೇಕು ಎಂದು ರುದ್ರಮುನಿ ಸ್ವಾಮೀಜಿ ಆಗ್ರಹಿಸಿದರು.
ಕಾರ್ಯಕ್ರಮದಲ್ಲಿ ಸಹಕಾರ ಸಂಘದ ಉಪಾಧ್ಯಕ್ಷ ನಾಗಸಮುದ್ರದ ಮರುಳುಸಿದ್ದ ಸ್ವಾಮಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಹಾಗೂ ನಿರ್ದೇಶಕ ಶಶಿ ವಾಳದ, ಎಸ್.ಸಿ. ಗಂಗಾಧರಪ್ಪ, ನಿರ್ದೇಶಕರಾದ ವಿಜಯ್ ಕುಮಾರ್, ಕಲ್ಲೇಶಪ್ಪ, ಡಿ.ಬಿ. ಕುಮಾರ್, ಸಿ.ಕೆ. ಸುಧಾ, ದ್ರಾಕ್ಷಾಯಿಣಿ, ಎಂ.ಸಿ. ಚಂದ್ರಶೇಖರಪ್ಪ, ಮುಖಂಡ ಕೊಡ್ಲಿ ಬಸವರಾಜ್ ಹಾಗೂ ಕಾರ್ಯನಿರ್ವಾಹಣಾಧಿಕಾರಿ ಡಿ.ಆರ್. ಸುಷ್ಮಾ ಉಪಸ್ಥಿತರಿದ್ದರು.












