ಅಡಗೂರು ಜಿನಮಂದಿರ: ಮಾನಸ್ತಂಭದ ಮಂಟಪದಲ್ಲಿ ವಿಜೃಂಭಣೆಯ ಚತುರ್ಮುಖ ಜಿನ ಬಿಂಬ ಪ್ರತಿಷ್ಠಾಪನೆ ಹಾಗೂ ಪುಣ್ಯಪ್ರಭಾವನಾ ಮಹೋತ್ಸವ

ಅಡಗೂರು/ಹಳೇಬೀಡು (kannadapost.com): ಸಮೀಪದ ಅಡಗೂರು ಜಿನಮಂದಿರದಲ್ಲಿ ನೂತನವಾಗಿ ನಿರ್ಮಿಸಿರುವ ಮಾನಸ್ತಂಭದ ಮಂಟಪದಲ್ಲಿ ಚತುರ್ಮುಖ ಜಿನ ಬಿಂಬ ಪ್ರತಿಷ್ಠಾಪನೆ ಹಾಗೂ ಪುಣ್ಯಪ್ರಭಾವನಾ ಕಾರ್ಯಕ್ರಮವು ಭಕ್ತಿಭಾವ ಹಾಗೂ ಸಡಗರ ಸಂಭ್ರಮಗಳಿಂದ ನೆರವೇರಿತು. ಮುನಿಶ್ರೀ ವೀರಸಾಗರ ಮಹಾರಾಜರು ಹಾಗೂ ಶ್ರವಣಬೆಳಗೊಳ ಮಠದ ಅಭಿನವ ಚಾರುಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಸ್ವಾಮೀಜಿ ಅವರ ದಿವ್ಯ ಸಾನಿಧ್ಯದಲ್ಲಿ ಊರಿನ ಜೈನ ಯುವಕರು ಚತುರ್ಮುಖ ಜಿನಬಿಂಬವನ್ನು ಪ್ರತಿಷ್ಠಾಪಿಸಿದರು.

ಶ್ರವಣಬೆಳಗೊಳ ಹಾಗೂ ಅಡಗೂರು ಗ್ರಾಮದ ಐತಿಹಾಸಿಕ ನಂಟು

ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಅಭಿನವ ಚಾರುಕೀರ್ತಿ ಭಟ್ಟಾರಕ ಪಟ್ಟಾಚಾರ್ಯ ಸ್ವಾಮೀಜಿ, ಶ್ರವಣಬೆಳಗೊಳ ಹಾಗೂ ಅಡಗೂರು ಗ್ರಾಮಕ್ಕಿರುವ ಐತಿಹಾಸಿಕ ಮಹತ್ವದ ಸಂಬಂಧವನ್ನು ಎಳೆಎಳೆಯಾಗಿ ಬಿಚ್ಚಿಟ್ಟರು.

​”ಹೊಯ್ಸಳರ ಕಾಲದಲ್ಲಿ ಅಡಗೂರು ಬಳಿಯ ರಾಶಿಗುಡ್ಡದಲ್ಲಿ ಸಂಭವಿಸಿದ ಜ್ವಾಲಾಮುಖಿಯನ್ನು ಶಮನ ಮಾಡಲು, ಶ್ರವಣಬೆಳಗೊಳದ ಶುಭಚಂದ್ರ ಮುನಿ ಮಹಾರಾಜರು ಆನೆಯ ಮೇಲೆ ಕೂಷ್ಮಾಂಡಿನಿ ಮಾತೆಯನ್ನು ಕರೆತಂದು, ವಿವಿಧ ಪೂಜಾ ವಿಧಾನಗಳನ್ನು ನಡೆಸಿ ಜ್ವಾಲಾಮುಖಿಯನ್ನು ಶಮನಗೊಳಿಸಿದ್ದರು. ಈ ಕಾರ್ಯವನ್ನು ಮೆಚ್ಚಿದ ಹೊಯ್ಸಳ ರಾಜರು ಶ್ರವಣಬೆಳಗೊಳದ ಸ್ವಾಮೀಜಿಯವರಿಗೆ ‘ಚಾರುಕೀರ್ತಿ’ ಎಂಬ ಬಿರುದು ನೀಡಿದರು. ಹೀಗಾಗಿ ಶ್ರವಣಬೆಳಗೊಳದಲ್ಲಿ ಚಾರುಕೀರ್ತಿ ಪೀಠ ಸ್ಥಾಪನೆಯಾಗಲು ಅಡಗೂರು ಗ್ರಾಮವೇ ಮೂಲ ಕಾರಣವಾಗಿದೆ,” ಎಂದು ಇತಿಹಾಸವನ್ನು ಸ್ಮರಿಸಿದರು.

ಜಿನಮಂದಿರ, ಶಾಸನಗಳ ರಕ್ಷಣೆಗೆ ಯುವಕರಿಗೆ ಕರೆ

“ಅಡಗೂರಿನವರಾದ ದೇವಪ್ಪ ಮುನಿಗಳಿಗೆ ಶ್ರವಣಬೆಳಗೊಳದಲ್ಲಿ ಮುನಿ ದೀಕ್ಷೆ ನಡೆದಿದೆ ಎಂಬುದಕ್ಕೆ ಸ್ಪಷ್ಟ ದಾಖಲೆಗಳಿವೆ. ಹೀಗಾಗಿ ಅಡಗೂರು ಜಿನಮಂದಿರದ ಆವರಣದಲ್ಲಿರುವ ದೇವಪ್ಪ ಸ್ವಾಮಿ ಅವರ ಪಾದಗಳಿಗೆ ಶ್ರವಣಬೆಳಗೊಳ ಮಠದಿಂದ ಶೀಘ್ರದಲ್ಲೇ ಶಿಲಾಮಯ ಮಂಟಪ ನಿರ್ಮಿಸಿಕೊಡಲಾಗುವುದು,” ಎಂದು ಶ್ರೀಗಳು ಭರವಸೆ ನೀಡಿದರು.

​”ಒಂದು ಕಾಲದಲ್ಲಿ ಕರ್ನಾಟಕದಲ್ಲಿ ಜೈನ ಧರ್ಮ ಅತ್ಯಂತ ಪ್ರಬಲವಾಗಿತ್ತು. ಹಾಸನ ಜಿಲ್ಲೆ ಒಂದರಲ್ಲೇ ಸಾವಿರಾರು ಜಿನ ಮಂದಿರಗಳು ನೆಲಸಮಗೊಂಡಿವೆ. ಈಗಿನ ಜೈನ ಯುವಕರು ಧರ್ಮ ರಕ್ಷಣೆಗೆ ಮುಂದಾಗಬೇಕು. ಜೈನಕ್ಷೇತ್ರ, ಜಿನಮಂದಿರ, ಜಿನಮೂರ್ತಿ ಹಾಗೂ ಜೈನ ಶಾಸನಗಳನ್ನು ಸಂರಕ್ಷಿಸುವ ಜವಾಬ್ದಾರಿ ಹೊರಬೇಕು. ಅಡಗೂರಿನ ಜೈನ ಸಮಾಜದಲ್ಲಿ ಹಿರಿಯರು, ಕಿರಿಯರು, ಮಹಿಳೆಯರು, ಪುರುಷರೆನ್ನದೆ ಎಲ್ಲರೂ ಒಗ್ಗಟ್ಟಿನಿಂದ ಧರ್ಮ ಜಾಗೃತಿಯಲ್ಲಿ ಪಾಲ್ಗೊಂಡಿರುವುದು ಅತ್ಯಂತ ಶ್ಲಾಘನೀಯ,” ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಜಿನಬಿಂಬ ಪ್ರತಿಷ್ಠಾಪನೆಯಿಂದ ಪುಣ್ಯ ಪ್ರಾಪ್ತಿ

ಜೈನಮುನಿ ವೀರಸಾಗರ ಮುನಿಮಹಾರಾಜ್ ಮಾತನಾಡಿ, “ಜಿನಮೂರ್ತಿ ಪ್ರತಿಷ್ಠಾಪನೆ ಹಾಗೂ ಅಭಿಷೇಕ ಮಾಡುವುದರಿಂದ ಹೆಚ್ಚಿನ ಪುಣ್ಯಪ್ರಭಾವನೆ ಆಗುತ್ತದೆ. ಜಿನಮೂರ್ತಿ ಪ್ರತಿಷ್ಠಾಪನೆ ಮಾಡಿದವರಿಗೆ ಮಾತ್ರವಲ್ಲದೆ, ಜಿನಮಂದಿರ ಹಾಗೂ ಬಿಂಬಗಳನ್ನು ದಾನ ಮಾಡಿದವರಿಗೂ ಪುಣ್ಯ ಪ್ರಾಪ್ತಿಯಾಗುತ್ತದೆ,” ಎಂದು ಧರ್ಮದರ್ಶನ ನೀಡಿದರು.

ಭಕ್ತಿಭಾವದ 108 ಕಳಸದ ಅಭಿಷೇಕ ಹಾಗೂ ಶಾಂತಿಧಾರೆ

ನೂತನವಾಗಿ ಪ್ರತಿಷ್ಠಾಪಿಸಲಾದ ಚತುರ್ಮುಖ ಜಿನ ಬಿಂಬಗಳಿಗೆ 108 ಕಳಸದ ಜಲ, ಗಂಧ, ಎಳನೀರು, ಕಷಾಯ, ಕಬ್ಬಿನಹಾಲು, ಅರಿಶಿಣ, ಚಂದನ, ಕಲ್ಕಚೂರ್ಣ ಹಾಗೂ ವಿವಿಧ ಬಗೆಯ ಪುಷ್ಪಗಳಿಂದ ವಿಶೇಷ ಅಭಿಷೇಕ ನೆರವೇರಿಸಲಾಯಿತು. ಚತುಷ್ಕೋನ ಹಾಗೂ ಪೂರ್ಣ ಕಳಸದ ಅಭಿಷೇಕ ನೆರವೇರಿಸಿದ ನಂತರ, ಜಗತ್ತಿನ ಸಕಲ ಜೀವಿಗಳಿಗೂ ಶಾಂತಿ, ನೆಮ್ಮದಿ ಹಾಗೂ ಮುಕ್ತಿ ದೊರಕಲಿ ಎಂದು ಪ್ರಾರ್ಥಿಸಿ ಚತುರ್ಮುಖ ಜಿನ ಬಿಂಬಗಳಿಗೆ ಧಾರಾಕಾರವಾಗಿ ಶಾಂತಿಧಾರೆ ಎರೆಯಲಾಯಿತು.

ಗಣ್ಯರ ಉಪಸ್ಥಿತಿ

ಈ ಪುಣ್ಯಪ್ರಭಾವನಾ ಮಹೋತ್ಸವದಲ್ಲಿ ಜೈನ ಸಮಾಜದ ಪ್ರಮುಖರಾದ ಎ.ಎಸ್. ನಾಗೇಂದ್ರ ಕುಮಾರ್, ಶಾಮಲ ಜಿನರಾಜಯ್ಯ, ಡಾ. ನೀರಜಾ ನಾಗೇಂದ್ರ ಕುಮಾರ್, ಶಶಿಕುಮಾರ್, ಧವನ್ ಜೈನ್, ಎ.ಬಿ. ಕಾಂತರಾಜು, ಪುಷ್ಪರತ್ನರಾಜು, ಸುಧಾ ವಿಜಯ್ ಕುಮಾರ್, ಪ್ರಾಧ್ಯಾಪಕ ಎ.ಪಿ. ಪವನ್ ಕುಮಾರ್, ನಿಶ್ಚಲ ಸನತ್ ಕುಮಾರ್ ಸೇರಿದಂತೆ ಗ್ರಾಮದ ಹಾಗೂ ಸುತ್ತಮುತ್ತಲಿನ ನೂರಾರು ಶ್ರಾವಕ-ಶ್ರಾವಕಿಯರು ಭಕ್ತಿಭಾವದಿಂದ ಪಾಲ್ಗೊಂಡಿಹಳೇಬೀಡು