ಬಿಡದಿ ಟೌನ್‌ಶಿಪ್ ಸಾವಿರಾರು ಕೋಟಿ ಲೂಟಿಯ ಹುನ್ನಾರ, ಹನೂರು ಎನ್‌ಕೌಂಟರ್ ಸಿಬಿಐ ತನಿಖೆಯಾಗಲಿ: ವಾಟಾಳ್ ನಾಗರಾಜ್

    • ಬಿಡದಿ ಟೌನ್‌ಶಿಪ್ ನಿರ್ಮಾಣ ಸಾವಿರಾರು ಕೋಟಿ ಲೂಟಿಯ ಹುನ್ನಾರ. ಹನೂರು ಎನ್‌ಕೌಂಟರ್ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂದು ಹಾಸನದಲ್ಲಿ ವಾಟಾಳ್ ನಾಗರಾಜ್ ಆಗ್ರಹಿಸಿದ್ದಾರೆ.

ಹಾಸನ(kannadapost.com): ಬಿಡದಿ ಟೌನ್‌ಶಿಪ್ ನಿರ್ಮಾಣದ ಹಿಂದೆ ಸಾವಿರಾರು ಕೋಟಿ ಲೂಟಿ ಮಾಡುವ ಷಡ್ಯಂತ್ರವಿದ್ದು, ಯಾವುದೇ ಕಾರಣಕ್ಕೂ ಈ ಯೋಜನೆ ಜಾರಿಯಾಗಬಾರದು. ಜೊತೆಗೆ, ಹನೂರು ಅರಣ್ಯ ಪ್ರದೇಶದಲ್ಲಿ ನಡೆದ ಎನ್‌ಕೌಂಟರ್ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂದು ಕನ್ನಡ ಚಳವಳಿ ವಾಟಾಳ್ ಪಕ್ಷದ ರಾಜ್ಯಾಧ್ಯಕ್ಷ ವಾಟಾಳ್ ನಾಗರಾಜ್ ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ.

​ಹಾಸನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರದ ಯೋಜನೆಗಳು ಹಾಗೂ ಇತ್ತೀಚಿನ ಎನ್‌ಕೌಂಟರ್ ಘಟನೆಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

ಬಿಡದಿ ಟೌನ್‌ಶಿಪ್ ಹಾಗೂ ನೈಸ್ ರಸ್ತೆ ಭ್ರಷ್ಟಾಚಾರ

  • ರೈತರಿಗೆ ಅನ್ಯಾಯ: ಬಿಡದಿ ರೈತರ ಬೇಡಿಕೆಗಳು ಸತ್ಯವಾಗಿವೆ. ಆದರೆ ಸರ್ಕಾರವು ರೈತರನ್ನು ಇಬ್ಬಾಗ ಮಾಡುವ ತಂತ್ರ ಅನುಸರಿಸಿದೆ. ರೈತರ ಜಮೀನನ್ನು ಕಿತ್ತುಕೊಂಡರೆ ಅವರ ನೋವನ್ನು ಸರಿಪಡಿಸಲು ಯಾರಿಂದಲೂ ಸಾಧ್ಯವಿಲ್ಲ.
  • ಸಾವಿರಾರು ಕೋಟಿ ಲೂಟಿ: ಬಿಡದಿಯಲ್ಲಿ ಟೌನ್‌ಶಿಪ್ ಮಾಡುವುದೇ ಸಾವಿರಾರು ಕೋಟಿ ಲೂಟಿ ಮಾಡಲು. ಬೇರೆಯವರಿಗೆ ಈ ಉಪನಗರವನ್ನು ಮಾರಾಟ ಮಾಡಲು ದೊಡ್ಡ ಮಟ್ಟದ ಚಿಂತನೆ ನಡೆದಿದ್ದು, ಇದರಿಂದ ತೀವ್ರ ಅಪಾಯ ಎದುರಾಗಲಿದೆ.
  • ನೈಸ್ ಅಕ್ರಮ: ನೈಸ್ ರಸ್ತೆ ಯೋಜನೆ ಹೊಸದಲ್ಲ; ಇದು ದೇವೇಗೌಡರು ಮುಖ್ಯಮಂತ್ರಿಯಾಗಿದ್ದ ಕಾಲದಿಂದಲೂ ಇದೆ. ನೈಸ್ ಮಾಲೀಕರು ರೈತರ ಜಮೀನು ಕೊಂಡುಕೊಂಡು ನಿರಂತರವಾಗಿ ಲೂಟಿ ಹೊಡೆಯುತ್ತಿದ್ದಾರೆ. ಇಲ್ಲಿ ಊಹಿಸಲಾಗದಷ್ಟು ಭ್ರಷ್ಟಾಚಾರ ನಡೆದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಹನೂರು ಎನ್‌ಕೌಂಟರ್: ಸಿಬಿಐ ತನಿಖೆಗೆ ಆಗ್ರಹ

  • ಅಮಾಯಕರ ಹತ್ಯೆ: ಹನೂರು ಅರಣ್ಯ ಪ್ರದೇಶದಲ್ಲಿ ಮೂವರು ಅಮಾಯಕರನ್ನು ಹತ್ತಿರದಿಂದಲೇ ಗುಂಡಿಟ್ಟು ಹೊಡೆಯಲಾಗಿದೆ. ಇದು ಈಗಾಗಲೇ ಸಾಬೀತಾಗಿದ್ದು, ಇದೊಂದು ಅತ್ಯಂತ ಗಂಭೀರವಾದ ಘಟನೆಯಾಗಿದೆ.
  • ಅಪಾಯಕಾರಿ ಬೆಳವಣಿಗೆ: ವ್ಯವಸ್ಥೆಯಲ್ಲಿ ಎನ್‌ಕೌಂಟರ್ ಮಾಡುವುದು ಅತ್ಯಂತ ಅಪಾಯಕಾರಿ ಬೆಳವಣಿಗೆ. ಹುಬ್ಬಳ್ಳಿಯಲ್ಲೂ ಎರಡು ವರ್ಷಗಳ ಹಿಂದೆ ಇದೇ ರೀತಿ ಮಹಿಳಾ ಪೊಲೀಸ್ ಅಧಿಕಾರಿಯೊಬ್ಬರು ಎನ್‌ಕೌಂಟರ್ ಮಾಡಿದ್ದರು. ಅದನ್ನು ಬಹಳ ಸುತ್ತಿ ಬಳಸಿ ಮುಚ್ಚಿಹಾಕಲಾಯಿತು.
  • ಪರಿಹಾರಕ್ಕೆ ಒತ್ತಾಯ: ಹನೂರು ಎನ್‌ಕೌಂಟರ್ ಪ್ರಕರಣವನ್ನು ತಕ್ಷಣವೇ ಸಿಬಿಐ ತನಿಖೆಗೆ ವಹಿಸಬೇಕು ಮತ್ತು ಮೃತರ ಕುಟುಂಬಕ್ಕೆ ತಲಾ ಒಂದು ಕೋಟಿ ರೂಪಾಯಿ ಪರಿಹಾರ ನೀಡಬೇಕು ಎಂದು ವಾಟಾಳ್ ನಾಗರಾಜ್ ಒತ್ತಾಯಿಸಿದರು.