​”ನಂದು ಒಂದೇ ಲೈನ್, ಟ್ವಿಸ್ಟ್ ಮಾಡಿದ್ರೆ ನಡೆಯಲ್ಲ”: ರೈತರ ಮನವೊಲಿಸಿ, ಅಧಿಕಾರಿಗಳಿಗೆ ಕ್ಲಾಸ್ ತೆಗೆದುಕೊಂಡ ಕೆ.ಎಂ. ಶಿವಲಿಂಗೇಗೌಡ

  • ಹಾಸನದ ಹಂದಿನಕೆರೆ ಏತ ನೀರಾವರಿ ಕಾಮಗಾರಿಗೆ ತಡೆಯೊಡ್ಡಿದ್ದ ರೈತರ ಮನವೊಲಿಸುವಲ್ಲಿ ಸಚಿವ ಕೆ.ಎಂ. ಶಿವಲಿಂಗೇಗೌಡ ಯಶಸ್ವಿಯಾಗಿದ್ದಾರೆ. ಇದೇ ವೇಳೆ ವಿಳಂಬ ಧೋರಣೆ ತೋರಿದ ಭೂಸ್ವಾಧೀನಾಧಿಕಾರಿಗೆ ಬಹಿರಂಗವಾಗಿಯೇ ತರಾಟೆಗೆ ತೆಗೆದುಕೊಂಡಿದ್ದಾರೆ.

ಹಾಸನ (kannadapost.com):ನಗರದ ಸತ್ಯಮಂಗಲ ಹಾಗೂ ಚನ್ನಪಟ್ಟಣ ಕೆರೆಗಳಿಗೆ ನೀರು ಹರಿಸುವ ಮಹತ್ವಾಕಾಂಕ್ಷಿ ‘ಹಂದಿನಕೆರೆ ಏತ ನೀರಾವರಿ’ ಕಾಮಗಾರಿಗೆ ಎದುರಾಗಿದ್ದ ವಿಘ್ನವನ್ನು ನಿವಾರಿಸುವಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಂ. ಶಿವಲಿಂಗೇಗೌಡ ಯಶಸ್ವಿಯಾಗಿದ್ದಾರೆ. ರೈತರೊಂದಿಗೆ ಖುದ್ದು ಮಾತನಾಡಿ ಸಮಸ್ಯೆ ಬಗೆಹರಿಸಿದ ಅವರು, ಇದೇ ವೇಳೆ ಅಧಿಕಾರಿಗಳ ಕಾರ್ಯವೈಖರಿಗೆ ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿದ್ದಾರೆ.

ರೈತರ ಮನವೊಲಿಕೆ, 2 ದಿನದಲ್ಲಿ ಕಾಮಗಾರಿ ಪೂರ್ಣಕ್ಕೆ ಸೂಚನೆ

​ಹಾಸನ ತಾಲೂಕಿನ ಹಂದಿನಕೆರೆ ಗ್ರಾಮದ ಸಮೀಪ ನಡೆಯುತ್ತಿರುವ ಪೈಪ್‌ಲೈನ್ ಕಾಮಗಾರಿಗೆ ಕೇವಲ 42 ಮೀಟರ್ ವ್ಯಾಪ್ತಿಯಲ್ಲಿ ಎರಡು ಕುಟುಂಬದ ರೈತರು ತಡೆಯೊಡ್ಡಿದ್ದರು. ಗುರುವಾರ ಸ್ಥಳಕ್ಕೆ ಶಾಸಕ ಸ್ವರೂಪ್ ಪ್ರಕಾಶ್ ಹಾಗೂ ಜಿಲ್ಲಾಧಿಕಾರಿ ಲತಾಕುಮಾರಿ ಅವರೊಂದಿಗೆ ಭೇಟಿ ನೀಡಿದ ಸಚಿವರು, ರೈತರೊಂದಿಗೆ ಸುದೀರ್ಘ ಮಾತುಕತೆ ನಡೆಸಿದರು. ರೈತರ ಅಹವಾಲುಗಳನ್ನು ಆಲಿಸಿ, ಪರಿಹಾರದ ಭರವಸೆ ನೀಡುವ ಮೂಲಕ ಕಾಮಗಾರಿಗೆ ಇದ್ದ ಅಡ್ಡಿಯನ್ನ ನಿವಾರಿಸಿದರು. ಅಲ್ಲದೆ, ಕೇವಲ 2 ದಿನಗಳಲ್ಲಿ ಕಾಮಗಾರಿಯನ್ನು ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

“ನಂದು ಒಂದೇ ಲೈನ್”: ಎಸ್‌ಎಲ್‌ಎಒಗೆ ಸಚಿವರ ಕ್ಲಾಸ್

​ಕಾಮಗಾರಿ ಪರಿಶೀಲನೆ ವೇಳೆ ವಿಶೇಷ ಭೂ ಸ್ವಾಧೀನಾಧಿಕಾರಿ (SLAO) ಮಂಜುನಾಥ್ ವಿರುದ್ಧ ಸಚಿವರು ಗರಂ ಆದರು. “ಎಸ್ಎಲ್ಎಒ ರವರು ಮೊದಲಿಗೆ ನನಗೆ ಬೇಜಾರ್ ಮಾಡಿದ್ರು. ಮೊದಲು ಲೈನ್ ಗೆ ಬಂದಿರಲಿಲ್ಲ, ಆಮೇಲೆ ಬಂದ್ರು” ಎಂದ ಸಚಿವರು ಅಧಿಕಾರಿಗೆ ಬಹಿರಂಗವಾಗಿಯೇ ಎಚ್ಚರಿಕೆ ನೀಡಿದರು.

  • ​”ನನಗೆ ಎರಡು-ಮೂರು ಲೈನ್ ಇಲ್ಲ, ನಂದು ಯಾವತ್ತಿದ್ದರೂ ಒಂದೇ ಲೈನ್.”
  • ​”ಬಹಿರಂಗವಾಗಿ ನಿಮಗೆ ಹೇಳ್ತಿನಿ ಕೇಳಿ, ನೀವೂ ಒಂದೇ ಲೈನಲ್ಲಿ ಇರಬೇಕು.”
  • ​”ಎರಡು ಮೂರು ಲೈನ್ ಇಟ್ಕೊಂಡು ವಿಚಾರಗಳನ್ನ ಟ್ವಿಸ್ಟ್ ಮಾಡಿದ್ರೆ ನನ್ನತ್ರ ನಡೆಯಲ್ಲ, ನನಗೆ ಆ ಕೆಲಸಗಳೆಲ್ಲ ಗೊತ್ತಿಲ್ಲ, ನನಗೆ ಕೆಲಸ ಆಗಬೇಕು.”

“ಸಣ್ಣ ಕೆಲಸ ಮಾಡೋದೇ ದೊಡ್ಡ ಸಾಧನೆ”

​ತಮ್ಮ ರಾಜಕೀಯ ಶೈಲಿಯ ಬಗ್ಗೆಯೂ ಮಾತನಾಡಿದ ಸಚಿವರು, ಜನಸಂಪರ್ಕದ ಪ್ರಾಮುಖ್ಯತೆಯನ್ನು ವಿವರಿಸಿದರು.

​”ನಾನು ರಾಜಕಾರಣಕ್ಕೆ ಬಂದಿರೋದು ಹಾಗೇ, ಹೋಗೋದು ಹಾಗೇ. ದೇವರ ಹಾಗೂ ಜನರ ಆಶೀರ್ವಾದದಿಂದ ಸಚಿವನಾಗಿದ್ದೀನಿ. ಇಷ್ಟು ಸಣ್ಣ ಕೆಲಸಕ್ಕೆ ಫೋನ್‌ನಲ್ಲಿ ಹೇಳಿದ್ರೆ ಆಗಲ್ವಾ ಅನ್ಕೊಬಹುದು. ಆದ್ರೆ, ಈ ಸಣ್ಣ ಕೆಲಸವನ್ನ ಖುದ್ದು ನಿಂತು ಮಾಡೋದಿದ್ಯಲ್ಲ ಅದೇ ದೊಡ್ಡ ಕೆಲಸ. ನಾವು ಜನರ ಕಷ್ಟ-ಸುಖ, ನಾಮಕರಣಗಳಿಗೆ ಹೋದರೆ ಅವರಿಗೆ ದೇವಲೋಕವೇ ಇಳಿದು ಬಂದಷ್ಟು ತೃಪ್ತಿಯಾಗುತ್ತದೆ. ಬೇಡವಾದವರ ಮನೆಗೆ ನಾವು ಹೋಗಲ್ಲ. ನಮ್ಮ ಕೆಲಸ ಯಾವತ್ತಿದ್ದರೂ ನೇರ.”

-ಕೆ.ಎಂ.ಶಿವಲಿಂಗೇಗೌಡ, ಸಚಿವ