​”ಇದೆಲ್ಲಾ ನನ್ನತ್ರ ನಡೆಯಲ್ಲ, 5 ದಿನದಲ್ಲಿ ಕೆರೆಗೆ ನೀರು ಹರಿಯಬೇಕು”: ಅಧಿಕಾರಿಗಳಿಗೆ ಕೆ.ಎಂ. ಶಿವಲಿಂಗೇಗೌಡ ಕ್ಲಾಸ್

  • ಹಾಸನ ತಾಲೂಕಿನ ಹಂದಿನಕೆರೆ ಬಳಿ ನಡೆಯುತ್ತಿರುವ ಏತ ನೀರಾವರಿ ಕಾಮಗಾರಿ ವಿಳಂಬದ ಬಗ್ಗೆ ಗರಂ ಆದ ಸಚಿವ ಕೆ.ಎಂ. ಶಿವಲಿಂಗೇಗೌಡ, ಕೇವಲ 5 ದಿನದೊಳಗೆ ಸತ್ಯಮಂಗಲ ಕೆರೆಗೆ ನೀರು ಹರಿಸುವಂತೆ ಎಂಜಿನಿಯರ್ ಹಾಗೂ ಗುತ್ತಿಗೆದಾರರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಹಾಸನ(www.kannadapost.com):ತಾಲೂಕಿನ ಹಂದಿನಕೆರೆ ಗ್ರಾಮದ ಸಮೀಪ ನಡೆಯುತ್ತಿರುವ ಏತ ನೀರಾವರಿ ಯೋಜನೆಯ ಕಾಮಗಾರಿ ವಿಳಂಬವಾಗಿರುವುದಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಂ. ಶಿವಲಿಂಗೇಗೌಡ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಗುರುವಾರ ದಿಢೀರ್ ಎಂದು ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಅವರು, ವಿಳಂಬ ಧೋರಣೆ ಅನುಸರಿಸುತ್ತಿರುವ ಅಧಿಕಾರಿಗಳು ಹಾಗೂ ಗುತ್ತಿಗೆದಾರರ ವಿರುದ್ಧ ಗರಂ ಆಗಿದ್ದಾರೆ.

ಟೆಸ್ಟು ಗಿಸ್ಟು ಗೊತ್ತಿಲ್ಲ, ನೀರು ಹರಿಸ್ತಿಯಾ ಹೇಳು!

ಕಾಮಗಾರಿ ಸ್ಥಳವನ್ನು ಪರಿಶೀಲಿಸಿದ ಸಚಿವರು, “ಎಷ್ಟು ದಿನದಲ್ಲಿ ಕಾಮಗಾರಿ ಮುಗಿಸ್ತಿಯಪ್ಪಾ?” ಎಂದು ಅಲ್ಲೇ ಇದ್ದ ಎಂಜಿನಿಯರ್ ಅವರನ್ನು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಎಂಜಿನಿಯರ್, “ಉಳಿದ ಕಾಮಗಾರಿ ಹಾಗೂ ಟೆಸ್ಟ್ ಟ್ರಯಲ್ ಎಲ್ಲವನ್ನೂ ಮಾಡಬೇಕಾಗುತ್ತೆ ಸರ್” ಎಂದರು. ಎಂಜಿನಿಯರ್ ಮಾತಿನಿಂದ ಕೆರಳಿದ ಸಚಿವರು, “ನನಗೆ ಅವ್ಯಾವು.. ಟೆಸ್ಟು ಗಿಸ್ಟು.. ಗೊತ್ತಿಲ್ಲ… ಎಷ್ಟು ದಿನದಲ್ಲಿ ಕೆರೆಗೆ ನೀರು ಹರಿಸ್ತಿಯಾ ಹೇಳು. ಅದ್ಯಾರು ಕಂಟ್ರಾಕ್ಟರ್, ಅವರನ್ನ ಕರೀರಿ. ಇವೆಲ್ಲಾ ನನ್ನತ್ರ ನಡೆಯಲ್ಲ. ಕಾಮಗಾರಿಯನ್ನು ಟೈಂ ಬೌಂಡ್ (ನಿಗದಿತ ಸಮಯ) ಒಳಗೆ ಮುಗಿಸಲೇಬೇಕು” ಎಂದು ತರಾಟೆಗೆ ತೆಗೆದುಕೊಂಡರು.

ಜನರ ಎದುರೇ ಭರವಸೆ ಕೊಡಿ

“ಇಲ್ಲಿ ಎಲ್ಲಾ ಹೇಳಿ, ನಾನು ಅತ್ಲಾಗೆ ಹೋಗ್ತಿದ್ದಂಗೆ ನೀವು ಇತ್ಲಾಗೆ ಹೋಗೋದಲ್ಲ. ಕಾಮಗಾರಿ ಯಾವಾಗ ಮುಗಿಸ್ತೀರಾ ಅಂತ ಇಲ್ಲಿ ಸೇರಿರುವ ಜನರ ಎದುರೇ ಹೇಳಿ” ಎಂದು ಸಚಿವರು ಪಟ್ಟು ಹಿಡಿದರು. ಈ ವೇಳೆ ಉತ್ತರಿಸಿದ ಗುತ್ತಿಗೆದಾರ, “ಇನ್ನೂ ಹತ್ತು ದಿನದಲ್ಲಿ ನೀರು ಹರಿಸ್ತೀವಿ ಸರ್” ಎಂದು ಭರವಸೆ ನೀಡಿದರು.

5 ದಿನದ ಡೆಡ್‌ಲೈನ್!

ಗುತ್ತಿಗೆದಾರನ ‘ಹತ್ತು ದಿನದ’ ಮಾತಿಗೆ ಒಪ್ಪದ ಕೆಎಂಶಿ, “ಹತ್ತು ದಿನ… ಯಾಕಪ್ಪಾ? ನಾನು ಕಾಮಗಾರಿಯ ಉದ್ದ, ಅಗಲ ಎಲ್ಲವನ್ನೂ ನೋಡಿದ್ದೇನೆ. ನಿಮಗೆ ಕೇವಲ ಐದು ದಿನ ಟೈಂ ಕೊಡ್ತೇನೆ. ಐದೇ ದಿನದಲ್ಲಿ ಸತ್ಯಮಂಗಲ ಕೆರೆಗೆ ನೀರು ಹರಿಯಲೇಬೇಕು” ಎಂದು ಡೆಡ್‌ಲೈನ್ ನೀಡುವ ಮೂಲಕ ಕಟ್ಟುನಿಟ್ಟಿನ ಸೂಚನೆ ನೀಡಿದರು.