ಸಕಲೇಶಪುರ:ವಿಪತ್ತು ನಿರ್ವಹಣೆಗೆ ‘ಶೌರ್ಯ’ ಬಲ: ಸ್ವಯಂಸೇವಕರಿಗೆ NDRF ತರಬೇತಿ

  • ಸಕಲೇಶಪುರದಲ್ಲಿ ಶೌರ್ಯ ಶ್ರೀ ಧರ್ಮಸ್ಥಳ ವಿಪತ್ತು ನಿರ್ವಹಣಾ ಘಟಕದ ಸ್ವಯಂಸೇವಕರಿಗೆ NDRF ವತಿಯಿಂದ ಒಂದು ದಿನದ ವಿಶೇಷ ತರಬೇತಿ ನೀಡಲಾಯಿತು.

ಸಕಲೇಶಪುರ (kannadapost.com): ವಿಪತ್ತು ಹಾಗೂ ತುರ್ತು ಸಂದರ್ಭಗಳಲ್ಲಿ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲು ಸಜ್ಜುಗೊಳಿಸುವ ಉದ್ದೇಶದಿಂದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಜನಜಾಗೃತಿ ಪ್ರಾದೇಶಿಕ ವಿಭಾಗದ ಆಶ್ರಯದಲ್ಲಿ ಶೌರ್ಯ ಶ್ರೀ ಧರ್ಮಸ್ಥಳ ವಿಪತ್ತು ನಿರ್ವಹಣಾ ಘಟಕದ ಸ್ವಯಂಸೇವಕರಿಗೆ NDRF ವತಿಯಿಂದ ಒಂದು ದಿನದ ವಿಶೇಷ ತರಬೇತಿ ನೀಡಲಾಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಉಪವಿಭಾಗಾಧಿಕಾರಿ ಹುಲ್ಲುಮನಿ ತಿಮ್ಮಣ್ಣ, ವಿಪತ್ತು ಹಾಗೂ ತುರ್ತು ಸಂದರ್ಭಗಳಲ್ಲಿ ಜನರ ನೆರವಿಗೆ ಧಾವಿಸುತ್ತಿರುವ ಶೌರ್ಯ ತಂಡಗಳ ಸೇವೆ ಶ್ಲಾಘನೀಯವಾಗಿದೆ. ಮುಂದಿನ ದಿನಗಳಲ್ಲಿ ತಂಡಕ್ಕೆ ಇಲಾಖೆಯಿಂದ ಅಗತ್ಯ ಸಹಕಾರ ನೀಡಲಾಗುವುದು ಎಂದು ಹೇಳಿದರು.

NDRF ಕಮಾಂಡರ್ ಶಾಂತಿಲಾಲ್ ಜಟಿಯಾ ಮಾತನಾಡಿ, ದೇಶದ ವಿವಿಧ ರಾಜ್ಯಗಳಲ್ಲಿ ಸೇವೆ ಸಲ್ಲಿಸಿದ್ದರೂ ಕರ್ನಾಟಕದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಶೌರ್ಯ ತಂಡಗಳು ಗ್ರಾಮಮಟ್ಟದಲ್ಲಿಯೇ NDRF ಜತೆ ಕೈಜೋಡಿಸುತ್ತಿರುವುದು ವಿಶೇಷವಾಗಿದೆ ಎಂದರು.

“ಶೌರ್ಯ ಎಂದರೆ ಸಮಯಪ್ರಜ್ಞೆ, ಶಕ್ತಿ, ಬದ್ಧತೆ, ಪ್ರಾಮಾಣಿಕತೆ ಮತ್ತು ಸಂಯಮ” ಎಂದು ಅವರು ಹೇಳಿದರು.

ವಿಪತ್ತು ಸಂಭವಿಸಿದ ಬಳಿಕ ಪರಿಹಾರ ಕಾರ್ಯ ಕೈಗೊಳ್ಳುವುದಕ್ಕಿಂತ ಮುನ್ನೆಚ್ಚರಿಕೆ ಮತ್ತು ಪೂರ್ವಸಿದ್ಧತೆ ಅತ್ಯಂತ ಮುಖ್ಯ. ಸ್ವಯಂಸೇವಕರು ಮೊದಲು ತಮ್ಮ ಸುರಕ್ಷತೆಗೆ ಆದ್ಯತೆ ನೀಡಬೇಕು. ಸಂಕಷ್ಟದ ಸಂದರ್ಭದಲ್ಲಿನ ‘ಗೋಲ್ಡನ್ ಸಮಯ’ದಲ್ಲಿ ಸೂಕ್ತ ನಿರ್ಧಾರ ಕೈಗೊಂಡು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುವುದು ಅಗತ್ಯ ಎಂದು ಸಲಹೆ ನೀಡಿದರು.

NDRF ಅಧಿಕಾರಿಗಳಾದ ಪಾಟೀಲ್ ನಿವೇಶ್, ಆಲ್ಬಿನ್ ಜಗದೀಶ್ ಹಾಗೂ ಮಹಾಂತೇಶ ತರಬೇತಿ ನೀಡಿದರು. ರಸ್ತೆ ಅಪಘಾತದಲ್ಲಿ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲು ನೆರವಾದ ಶೌರ್ಯ ತಂಡದ ಹರೀಶ್ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಜಿಲ್ಲಾ ಜನಜಾಗೃತಿ ವೇದಿಕೆ ಅಧ್ಯಕ್ಷ ಡಾ. ನವೀನ್ ಚಂದ್ರ ಶೆಟ್ಟಿ, ಜಿಲ್ಲಾ ನಿರ್ದೇಶಕ ಮಹಾಬಲ ಕುಲಾಲ್, ವಿಶ್ವನಾಥ್, ಗಿರೀಶ್ ಮಂಜುನಾಥ್, ಉಮಾನಾಥ ಸುವರ್ಣ, ಮಹೇಶ್ ಹೆತ್ತೂರು, ಈರಪ್ಪ ನಲ್ಲುಳ್ಳಿ ಸೇರಿದಂತೆ ಯೋಜನೆಯ ಪದಾಧಿಕಾರಿಗಳು, ಸಿಬ್ಬಂದಿ ಹಾಗೂ ಶೌರ್ಯ ಸ್ವಯಂಸೇವಕರು ಉಪಸ್ಥಿತರಿದ್ದರು.