ಹಾಸನ (kannadapost.com): ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಂಯುಕ್ತಾಶ್ರಯದಲ್ಲಿ ವಿಶ್ವಕರ್ಮ ಸಮಾಜದ ಸಹಯೋಗದೊಂದಿಗೆ ಸೆಪ್ಟೆಂಬರ್ 17ರಂದು ಹಾಸನಾಂಬ ಕಲಾಕ್ಷೇತ್ರದಲ್ಲಿ ವಿಶ್ವಕರ್ಮ ಮಹೋತ್ಸವ ಆಯೋಜಿಸಲಾಗಿದೆ.
ಮಹೋತ್ಸವದ ಅಂಗವಾಗಿ ನಗರದ ಶ್ರೀ ಕ್ಷೇತ್ರ ಕಾಳಿಕಾಂಬ ಕಮಠೇಶ್ವರ ದೇವಾಲಯದಲ್ಲಿ ವಿವಿಧ ಅಭಿಷೇಕ, ವಿಶೇಷ ಪುಷ್ಪಾಲಂಕಾರ ಹಾಗೂ ವಿಶ್ವಕರ್ಮ ಹೋಮ ನಡೆಯಲಿದೆ. ಬಳಿಕ ಮಂಗಳವಾದ್ಯ, ಸ್ತಬ್ಧಚಿತ್ರಗಳು ಹಾಗೂ ಆಕರ್ಷಕ ಕಲಾತಂಡಗಳೊಂದಿಗೆ ಮೆರವಣಿಗೆ ನಡೆಯಲಿದ್ದು, ಜಿಲ್ಲಾಧಿಕಾರಿ ಕಚೇರಿ, ವಿಶ್ವಕರ್ಮ ವೃತ್ತ, ಎನ್.ಆರ್. ವೃತ್ತ ಹಾಗೂ ಹೇಮಾವತಿ ಪ್ರತಿಮೆ ಮೂಲಕ ಹಾಸನಾಂಬ ಕಲಾಕ್ಷೇತ್ರ ತಲುಪಲಿದೆ.
ಅಲ್ಲಿ ಪ್ರತಿಭಾ ಪುರಸ್ಕಾರ, ಸಾಂಸ್ಕೃತಿಕ ಕಾರ್ಯಕ್ರಮ ಸೇರಿದಂತೆ ವಿವಿಧ ವೇದಿಕೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಮಹೋತ್ಸವದ ಯಶಸ್ಸಿನ ಹಿನ್ನೆಲೆಯಲ್ಲಿ ಆಗಸ್ಟ್ 26ರಂದು ಸಂಜೆ 4 ಗಂಟೆಗೆ ಹಾಸನ ನಗರದ ಶ್ರೀ ಕ್ಷೇತ್ರ ಕಾಳಿಕಾಂಬ ಕಮಠೇಶ್ವರ ದೇವಾಲಯದ ವಿಶ್ವಕರ್ಮ ಸಭಾಂಗಣದಲ್ಲಿ ಸಮಾಜ ಬಾಂಧವರ ಪೂರ್ವಭಾವಿ ಸಭೆ ನಡೆಯಲಿದೆ. ಸಭೆಯ ಅಧ್ಯಕ್ಷತೆಯನ್ನು ವಿಶ್ವಕರ್ಮ ಸಮಾಜದ ಜಿಲ್ಲಾಧ್ಯಕ್ಷ ಹೆಚ್.ವಿ. ಹರೀಶ್ ವಹಿಸಲಿದ್ದಾರೆ.
ಜಿಲ್ಲೆಯ ಎಲ್ಲ ವಿಶ್ವಕರ್ಮ ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಸದಸ್ಯರು ಹಾಗೂ ಸಮಾಜ ಬಾಂಧವರು ಸಭೆಗೆ ಸಮಯಕ್ಕೆ ಸರಿಯಾಗಿ ಆಗಮಿಸಿ, ವಿಶ್ವಕರ್ಮ ಮಹೋತ್ಸವದ ಯಶಸ್ಸಿಗೆ ಸಹಕರಿಸುವಂತೆ ಹಾಸನ ಜಿಲ್ಲಾ ವಿಶ್ವಕರ್ಮ ಸಮಾಜದ ಪ್ರಧಾನ ಕಾರ್ಯದರ್ಶಿ ಕೆ. ರಾಘವೇಂದ್ರ ಕುಮಾರ್ ಪತ್ರಿಕಾ ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.












