ಹಾಸನ: ಮಗನನ್ನು ಕಾಪಾಡುವ ಯತ್ನದಲ್ಲಿ ಪ್ರಾಣ ಕಳೆದುಕೊಂಡ ತಂದೆ-ಹೊಳೆನರಸೀಪುರದಲ್ಲೊಂದು ಮನಕಲಕುವ ಘಟನೆ!

ಹಾಸನ (kannadapost.com): ಜಿಲ್ಲೆಯ ಹೊಳೆನರಸೀಪುರ ಪಟ್ಟಣದಲ್ಲಿ ಅತೀವ ಮನಕಲಕುವ ಘಟನೆಯೊಂದು ನಡೆದಿದೆ. ಆಟವಾಡಿಸುವಾಗ ನಿಂತಿದ್ದ  ಟ್ರ್ಯಾಕ್ಟರ್ ಸ್ಟಾರ್ಟ್ ಮಾಡಿದ ಮಗು, ಚಲಿಸುವ ಟ್ರ್ಯಾಕ್ಟರ್ ನಿಂದ ಬೀಳುವುದನ್ನು ತಪ್ಪಿಸಲು ಹೋದ ತಂದೆಯೇ ಆಕಸ್ಮಿಕವಾಗಿ ಅದೇ ವಾಹನದ ಚಕ್ರಕ್ಕೆ ಸಿಲುಕಿ ಸಾವನ್ನಪ್ಪಿದ್ದಾರೆ.

​ಅರಕಲಗೂಡು ಸಾರಿಗೆ ಸಂಸ್ಥೆ ಘಟಕದ ನೌಕರ, ಹೊಳೆನರಸೀಪುರ ಪಟ್ಟಣದ ಕೋಟೆ ಒಕ್ಕಲಿಗರ ಬೀದಿಯ ಯಶ್ವಂತ್ (37) ಮೃತ ತಂದೆ.

ಘಟನೆಯ ಹಿನ್ನೆಲೆ

​ಯಶ್ವಂತ್ ಅವರು ಹೊಸ ಮನೆಯನ್ನು ಕಟ್ಟಿಸುತ್ತಿದ್ದರು. ವರಮಹಾಲಕ್ಷ್ಮಿ ಹಬ್ಬದ ದಿನದಂದು ಮನೆಯ ಆರ್‌ಸಿಸಿ (RCC) ಕಾಮಗಾರಿಗಾಗಿ ಟ್ರ್ಯಾಕ್ಟರ್‌ನಲ್ಲಿ ಸೆಂಟ್ರಿಂಗ್ ಸಾಮಗ್ರಿಗಳನ್ನು ತರಿಸಲಾಗಿತ್ತು. ಸಾಮಗ್ರಿಗಳನ್ನು ತಂದಿದ್ದ ಚಾಲಕ, ನಿರ್ಲಕ್ಷ್ಯದಿಂದ ಕೀಯನ್ನು ಟ್ರ್ಯಾಕ್ಟರ್‌ನಲ್ಲೇ ಬಿಟ್ಟು ಹೋಗಿದ್ದನು.

​ಈ ವೇಳೆ ಯಶ್ವಂತ್ ಅವರು ತಮ್ಮ ಮೂರು ವರ್ಷದ ಮಗನನ್ನು ನಿಂತಿದ್ದ ಟ್ರ್ಯಾಕ್ಟರ್ ಮೇಲೆ ಕೂರಿಸಿಕೊಂಡು ಆಟವಾಡಿಸುತ್ತಿದ್ದರು. ಆಟದ ಭರದಲ್ಲಿ ಮಗು ದಿಢೀರನೆ ಟ್ರ್ಯಾಕ್ಟರ್ ಕೀ ಆನ್ ಮಾಡಿದೆ. ತಕ್ಷಣವೇ ಟ್ರ್ಯಾಕ್ಟರ್ ಮುಂದಕ್ಕೆ ಚಲಿಸಲು ಪ್ರಾರಂಭಿಸಿದೆ.

ಮಗನ ರಕ್ಷಣೆಗೆ ಧಾವಿಸಿ ಪ್ರಾಣಬಿಟ್ಟ ತಂದೆ

​ಟ್ರ್ಯಾಕ್ಟರ್ ಮುಂದಕ್ಕೆ ಚಲಿಸುತ್ತಿದ್ದಂತೆ ಮಗು ಮೇಲಿನಿಂದ ಕೆಳಗೆ ಬೀಳುವ ಹಂತದಲ್ಲಿತ್ತು. ಇದನ್ನು ಕಂಡು ಆತಂಕಗೊಂಡ ತಂದೆ ಯಶ್ವಂತ್, ತಮ್ಮ ಪ್ರಾಣದ ಹಂಗು ತೊರೆದು ಮಗನನ್ನು ರಕ್ಷಿಸಲು ಮುಂದಾಗಿದ್ದಾರೆ. ಈ ವೇಳೆ ಆಯತಪ್ಪಿ ಕೆಳಗೆ ಬಿದ್ದ ಯಶ್ವಂತ್ ಅವರ ಮೇಲೆಯೇ ಟ್ರ್ಯಾಕ್ಟರ್ ಹರಿದಿದೆ.

​ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡ ಅವರನ್ನು ತಕ್ಷಣವೇ ಹಾಸನ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತಾದರೂ, ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದಿದ್ದಾರೆ.

​ಘಟನಾ ಸ್ಥಳಕ್ಕೆ ಹೊಳೆನರಸೀಪುರ ನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಕಣ್ಣೆದುರೇ ನಡೆದ ಈ ದುರಂತದಿಂದ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ.