ಹನೂರು: ಅರಣ್ಯ ಇಲಾಖೆ ಗುಂಡಿಗೆ ಬಲಿಯಾದವರ ಆತ್ಮಕ್ಕೆ ಶಾಂತಿಕೋರಿ ಮಾರ್ಟಳ್ಳಿಯಲ್ಲಿ ಪ್ರಾರ್ಥನಾ ಪೂಜೆ

  • ಹನೂರು ತಾಲ್ಲೂಕಿನ ಮಾರ್ಟಳ್ಳಿಯ ಲೂರ್ದು ಮಾತಾ ದೇವಾಲಯದಲ್ಲಿ ತೋಮಯ್ಯರಪಾಳ್ಯಂ ಘಟನೆಯಲ್ಲಿ ಮೃತಪಟ್ಟ ಮೂವರಿಗೆ ವಿಶೇಷ ಶ್ರದ್ಧಾಂಜಲಿ ಹಾಗೂ ಸಾಮೂಹಿಕ ಪ್ರಾರ್ಥನೆ ನಡೆಯಿತು.

ಹನೂರು (kannadapost.com): ತೋಮರಂಪಾಳ್ಯ ಪ್ರದೇಶದಲ್ಲಿ ಅರಣ್ಯ ಇಲಾಖೆಯ ಗುಂಡೇಟಿಗೆ ಬಲಿಯಾದ ಆಂಥೋನಿ ಸಾಮಿ, ಡೇವಿಡ್ ಕುಮಾರ್ ಹಾಗೂ ಪೀಟರ್ ಅವರ ಆತ್ಮಶಾಂತಿಗಾಗಿ ಪ್ರಾರ್ಥಿಸಿ ತಾಲ್ಲೂಕಿನ ಮಾರ್ಟಳ್ಳಿ ಗ್ರಾಮದ ಲೂರ್ದು ಮಾತಾ ದೇವಾಲಯದಲ್ಲಿ ವಿಶೇಷ ಶ್ರದ್ಧಾಂಜಲಿ ಹಾಗೂ ಪ್ರಾರ್ಥನಾ ಪೂಜೆ ಭಕ್ತಿಭಾವದಿಂದ ನಡೆಯಿತು.

ಮೈಸೂರು ಧರ್ಮಪ್ರಾಂತ್ಯದ  ಡಾ. ಫಾ. ವಿನ್ಸೆಂಟ್ ಅವರ ನೇತೃತ್ವದಲ್ಲಿ ನಡೆದ ವಿಶೇಷ ಪವಿತ್ರ ಬಲಿಪೂಜೆಯಲ್ಲಿ ಧರ್ಮಪ್ರಾಂತ್ಯದ ಹಲವು ಧರ್ಮಗುರುಗಳು ಪಾಲ್ಗೊಂಡು ಮೃತರ ಆತ್ಮಗಳಿಗೆ ಶಾಶ್ವತ ಶಾಂತಿ ದೊರೆಯಲೆಂದು ಪ್ರಾರ್ಥಿಸಿದರು.

ದುರ್ಘಟನೆಯಿಂದ ದುಃಖಿತವಾಗಿರುವ ಮೃತರ ಕುಟುಂಬಗಳಿಗೆ ಧೈರ್ಯ ಮತ್ತು ಸಾಂತ್ವನ ದೊರೆಯಲಿ ಎಂದು ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.

ಮಾರ್ಟಳ್ಳಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಿಂದ ಸಾವಿರಾರು ಭಕ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಮೋಂಬತ್ತಿ ಹಿಡಿದು ಆಗಮಿಸಿದ ಮಹಿಳೆಯರು, ಯುವಕರು ಹಾಗೂ ಹಿರಿಯ ನಾಗರಿಕರು ಮೃತರಿಗೆ ಭಾವಪೂರ್ಣ ನಮನ ಸಲ್ಲಿಸಿದರು.

ದೇವಾಲಯದ ಆವರಣದಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿತ್ತು. ಪ್ರಾರ್ಥನಾ ಕಾರ್ಯಕ್ರಮದ ವೇಳೆ ಧರ್ಮಗುರುಗಳು ಹಾಗೂ ಸಾರ್ವಜನಿಕರು ಮೃತರ ಕುಟುಂಬಗಳಿಗೆ ನ್ಯಾಯ ದೊರೆಯಬೇಕು ಮತ್ತು ಇಂತಹ ದುರ್ಘಟನೆಗಳು ಮರುಕಳಿಸದಂತೆ ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದರು.

ಮಾನವೀಯತೆ, ನ್ಯಾಯ ಮತ್ತು ಶಾಂತಿಯ ಮೌಲ್ಯಗಳನ್ನು ಕಾಪಾಡುವ ಅಗತ್ಯವಿದೆ ಎಂದು ಅವರು ಅಭಿಪ್ರಾಯಪಟ್ಟರು.
ಪವಿತ್ರ ಬಲಿಪೂಜೆಯ ಬಳಿಕ ಮೃತರ ಸ್ಮರಣಾರ್ಥ ಮೌನಾಚರಣೆ ನಡೆಸಲಾಯಿತು.

ನಂತರ ಭಕ್ತರು ಮೋಂಬತ್ತಿಗಳನ್ನು ಬೆಳಗಿಸಿ ಸಾಮೂಹಿಕವಾಗಿ ಪ್ರಾರ್ಥನೆ ಸಲ್ಲಿಸುವ ಮೂಲಕ ತಮ್ಮ ಶ್ರದ್ಧಾಂಜಲಿ ಅರ್ಪಿಸಿದರು.
ಈ ವಿಶೇಷ ಶೋಕ ಪ್ರಾರ್ಥನಾ ಸಭೆಯು ಗ್ರಾಮಸ್ಥರ ಐಕ್ಯತೆ, ಮಾನವೀಯತೆ ಹಾಗೂ ಮೃತರ ಮೇಲಿನ ಗೌರವವನ್ನು ಪ್ರತಿಬಿಂಬಿಸಿತು ಎಂದು ವಡ್ಡರದೊಡ್ಡಿ ನಿವಾಸಿ ಹಾಗೂ ಶಿಕ್ಷಕ  ಅಂತೋಣಿ ಮುತ್ತು ವಿ. ಅವರು ಕನ್ನಡ ಪೋಸ್ಟ್ ಗೆ ತಿಳಿಸಿದರು.