ಮಾಡಾಳು: ಶ್ರೀ ಸ್ವರ್ಣ ದೇವಿಯ ನೂತನ ಶಿಲಾ ದೇವಾಲಯ ಲೋಕಾರ್ಪಣೆ

ಮಾಡಾಳು ಗ್ರಾಮದ ಇತಿಹಾಸ ಪ್ರಸಿದ್ಧ ಶ್ರೀ ಸ್ವರ್ಣ ಗೌರಮ್ಮ ದೇವಿಯ ನೂತನ ಶಿಲಾ ದೇವಾಲಯ ಲೋಕಾರ್ಪಣೆ ಧಾರ್ಮಿಕ ವಿಧಿವಿಧಾನಗಳೊಂದಿಗೆ ನೆರವೇರಿತು. ಸಾವಿರಾರು ಭಕ್ತರು ಭಾಗವಹಿಸಿದರು.

ಮಾಡಾಳು: ಇತಿಹಾಸ ಪ್ರಸಿದ್ಧ ಪುಣ್ಯಕ್ಷೇತ್ರ ಮಾಡಾಳು ಗ್ರಾಮದ ಮೂಗುತಿ ಸುಂದರಿ ಮೂಲಸ್ಥಾನ ಶ್ರೀ ಸ್ವರ್ಣ ಗೌರಮ್ಮ ದೇವಿಯ ಅನುಗ್ರಹ ಹಾಗೂ ಹಾರನಹಳ್ಳಿ ಸುಕ್ಷೇತ್ರ ಕೋಡಿಮಠದ ಜಗದ್ಗುರು ಡಾ. ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಮಹಾಸ್ವಾಮೀಜಿಯವರ ದಿವ್ಯ ಆಶೀರ್ವಾದದೊಂದಿಗೆ ಶ್ರೀ ಸ್ವರ್ಣ ದೇವಿಯ ನೂತನ ಶಿಲಾ ದೇವಾಲಯದ ಲೋಕಾರ್ಪಣೆ ಸೋಮವಾರ ಶ್ರದ್ಧಾಭಕ್ತಿಯಿಂದ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ನೆರವೇರಿತು.

ನೂತನ ದೇವಾಲಯದ ಲೋಕಾರ್ಪಣೆ ಅಂಗವಾಗಿ ಭಾನುವಾರ ಸಂಜೆದಿಂದಲೇ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಆರಂಭಗೊಂಡವು. ಕೋಡಿಮಠದ ಉತ್ತರಾಧಿಕಾರಿ ಶ್ರೀ ಚೇತನ ಮುರಿದೇವರ ಸಾನಿಧ್ಯ ಹಾಗೂ ಗ್ರಾಮದ ಆರಾಧ್ಯ ದೈವ ಶ್ರೀ ಗುರು ಚನ್ನಬಸವೇಶ್ವರ ಸ್ವಾಮಿಯ ಸಮ್ಮುಖದಲ್ಲಿ ಕಾರ್ಯಕ್ರಮಗಳಿಗೆ ಚಾಲನೆ ನೀಡಲಾಯಿತು.

ಮೂಲ ಸನ್ನಿಧಿಯಲ್ಲಿ ಮುತ್ತೈದೆಯರು ಗಂಗಾಪೂಜೆ ನೆರವೇರಿಸಿ, ತಲೆಯ ಮೇಲೆ ಪವಿತ್ರ ಕುಂಭಗಳನ್ನು ಹೊತ್ತು ಮಂಗಳ ಕರಡೆವು ವಾದ್ಯಗಳೊಂದಿಗೆ ಉತ್ಸವ ನಡೆಸಿದರು. ಉತ್ಸವವು ಕೆರೆ ಏರಿಯ ಮೇಲಿರುವ ಶ್ರೀ ಚನ್ನಬಸವಣ್ಣ ದೇವಸ್ಥಾನವನ್ನು ತಲುಪಿತು.

ಈ ಸಂದರ್ಭದಲ್ಲಿ ಸುತ್ತಮುತ್ತಲಿನ 12 ಗ್ರಾಮಗಳ ಗ್ರಾಮ ದೇವತೆಗಳು ಸೇರಿದಂತೆ ಒಟ್ಟು 18 ಗ್ರಾಮಗಳ ದೇವರುಗಳು ಉತ್ಸವದಲ್ಲಿ ಭಾಗವಹಿಸಿದರು. ಕರಿಯಮ್ಮ ದೇವಿ, ಚೌಡೇಶ್ವರಿ, ಬೊಮ್ಮಸಂದ್ರ ಚನ್ನಬಸವಣ್ಣ, ಕಡಲಮಗೆ ಬಸವಣ್ಣ, ಹೊಸಳ್ಳಿ ಬಸವಣ್ಣ, ರಂಗನಾಥಸ್ವಾಮಿ ಸೇರಿದಂತೆ ವಿವಿಧ ಗ್ರಾಮಗಳ ಆರಾಧ್ಯ ದೇವತೆಗಳ ಉತ್ಸವವು ಧಾರ್ಮಿಕ ಕಾರ್ಯಕ್ರಮಕ್ಕೆ ವಿಶೇಷ ಮೆರುಗು ನೀಡಿತು.

ನಂತರ ಜೇನುಕಲ್ ಸಿದ್ದೇಶ್ವರ ಸ್ವಾಮೀಜಿ ನೇತೃತ್ವದಲ್ಲಿ ದೇವಾಲಯದ ಮುಂಭಾಗದಲ್ಲಿ ನಿರ್ಮಿಸಲಾಗಿದ್ದ ಹವನ, ಹೋಮ ಮತ್ತು ಯಜ್ಞಕುಂಡಕ್ಕೆ ಅಗ್ನಿಸ್ಪರ್ಶ ಮಾಡುವ ಮೂಲಕ ಧಾರ್ಮಿಕ ಕಾರ್ಯಕ್ರಮಗಳಿಗೆ ವಿಧಿವತ್ತಾಗಿ ಚಾಲನೆ ನೀಡಲಾಯಿತು.

ಸೋಮವಾರ ಮುಂಜಾನೆಯಿಂದಲೇ ರಾಜಶೇಖರ ಶಾಸ್ತ್ರಿಗಳ ನೇತೃತ್ವದ ಆರು ಮಂದಿ ಪುರೋಹಿತರ ತಂಡದಿಂದ ಯಜ್ಞ-ಯಾಗಾದಿಗಳು ನೆರವೇರಿದವು. ಮಂತ್ರಘೋಷ, ಧಾರ್ಮಿಕ ವಿಧಿವಿಧಾನಗಳು ಹಾಗೂ ಭಕ್ತರ ಭಜನೆಗಳಿಂದ ದೇವಾಲಯದ ಆವರಣ ಭಕ್ತಿಮಯ ವಾತಾವರಣದಿಂದ ಕಂಗೊಳಿಸಿತು.

ಮಧ್ಯಾಹ್ನ 12 ಗಂಟೆಗೆ ಕೆಬಿದರೆ ದೊಡ್ಡಮಠದ ಪ್ರಭು ಕುಮಾರ ಶಿವಾಚಾರ್ಯ ಸ್ವಾಮೀಜಿ ಅವರು ನೂತನ ದೇವಾಲಯದ ವಿಮಾನ ಗೋಪುರದ ಮೇಲೆ ಕಳಸ ಪ್ರತಿಷ್ಠಾಪನೆ ನೆರವೇರಿಸಿದರು. ಈ ಮೂಲಕ ಶ್ರೀ ಸ್ವರ್ಣ ದೇವಿಯ ನೂತನ ಶಿಲಾ ದೇವಾಲಯದ ಲೋಕಾರ್ಪಣೆ ಕಾರ್ಯಕ್ರಮವು ಪೂರ್ಣಗೊಂಡಿತು.

ಈ ಸಂದರ್ಭದಲ್ಲಿ ಶ್ರೀ ಚೇತನ ಮುರಿದೇವರು, ನಿರಂಜನ ಪೀಠದ ಶ್ರೀ ರುದ್ರಮುನಿ ಸ್ವಾಮೀಜಿ, ಸೇವಾ ಸಮಿತಿ ಅಧ್ಯಕ್ಷರು ಹಾಗೂ ಸದಸ್ಯರು, ಕೋಡಿಮಠದ ಏಜೆಂಟ್ ಮಹದೇವಪ್ಪ ಸೇರಿದಂತೆ ಹಲವು ಗಣ್ಯರು ಮತ್ತು ಧಾರ್ಮಿಕ ಮುಖಂಡರು ಉಪಸ್ಥಿತರಿದ್ದರು.

ಎರಡು ದಿನಗಳ ಕಾಲ ನಡೆದ ಶ್ರೀ ಸ್ವರ್ಣ ದೇವಿಯ ನೂತನ ಶಿಲಾ ದೇವಾಲಯ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಸಾವಿರಾರು ಭಕ್ತರು ಭಾಗವಹಿಸಿ ದೇವಿಯ ದರ್ಶನ ಪಡೆದು ಧಾರ್ಮಿಕ ಕಾರ್ಯಕ್ರಮಗಳನ್ನು ಕಣ್ತುಂಬಿಕೊಂಡರು. ವಿವಿಧ ಗ್ರಾಮಗಳಿಂದ ಆಗಮಿಸಿದ್ದ ಭಕ್ತರಿಂದ ದೇವಾಲಯದ ಆವರಣದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು.