23.3 C
Munich
Home News ಪ್ರಜ್ವಲ್ ರೇವಣ್ಣ ಬಳಿ ಮೊಬೈಲ್ ಪತ್ತೆ: ದರ್ಶನ್‌ ಬ್ಯಾರಕ್ ಸೇರಿದಂತೆ ಜೈಲಿನಲ್ಲಿ ದಿಢೀರ್ ಶೋಧ

ಪ್ರಜ್ವಲ್ ರೇವಣ್ಣ ಬಳಿ ಮೊಬೈಲ್ ಪತ್ತೆ: ದರ್ಶನ್‌ ಬ್ಯಾರಕ್ ಸೇರಿದಂತೆ ಜೈಲಿನಲ್ಲಿ ದಿಢೀರ್ ಶೋಧ

ಬೆಂಗಳೂರು, ಆ. 12 ,2026 (kannadapost.com): : ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿರುವ ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರ ಬಳಿ ಮೊಬೈಲ್ ಫೋನ್ ಪತ್ತೆಯಾಗಿರುವುದು ಬೆಳಕಿಗೆ ಬಂದಿದೆ. ಮಂಗಳವಾರ ಸಿಸಿಬಿ ಅಧಿಕಾರಿಗಳು ನಡೆಸಿದ ದಿಢೀರ್ ಪರಿಶೀಲನೆ ವೇಳೆ ಆ್ಯಂಡ್ರಾಯ್ಡ್‌ ಮೊಬೈಲ್ ಪತ್ತೆಯಾಗಿದೆ ಎಂದು ಮೂಲಗಳು ತಿಳಿಸಿವೆ.

ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಪ್ರಜ್ವಲ್ ರೇವಣ್ಣ ಪ್ರತ್ಯೇಕ ಬ್ಯಾರಕ್‌ನಲ್ಲಿ ಸಜಾ ಕೈದಿಯಾಗಿದ್ದು, ಅವರ ಬಳಿ ಮೊಬೈಲ್ ಹೇಗೆ ಬಂತು? ಎಷ್ಟು ದಿನಗಳಿಂದ ಅದನ್ನು ಬಳಸಲಾಗುತ್ತಿತ್ತು? ಜೈಲಿಗೆ ಮೊಬೈಲ್ ತಂದುಕೊಟ್ಟವರು ಯಾರು? ಎಂಬ ಹಲವು ಪ್ರಶ್ನೆಗಳು ಇದೀಗ ಎದುರಾಗಿವೆ.

ಈ ಹಿನ್ನೆಲೆಯಲ್ಲಿ ಮೊಬೈಲ್ ಬಳಕೆ ಕುರಿತು ಪೊಲೀಸರು ಹೆಚ್ಚಿನ ತನಿಖೆ ನಡೆಸಲು ಮುಂದಾಗಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸುವ ಪ್ರಕ್ರಿಯೆ ಆರಂಭವಾಗಿದೆ ಎಂದು ಮೂಲಗಳು ತಿಳಿಸಿವೆ. ಜೈಲು ನಿಯಮ ಉಲ್ಲಂಘನೆ ಸೇರಿದಂತೆ ಸಂಬಂಧಿತ ಕಾನೂನು ಅಂಶಗಳಡಿ ಪ್ರಕರಣ ದಾಖಲಿಸುವ ಸಾಧ್ಯತೆ ಇದೆ.

ದರ್ಶನ್‌ ಬ್ಯಾರಕ್‌ನಲ್ಲೂ ಶೋಧ

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿಯಾಗಿರುವ ನಟ ದರ್ಶನ್ ಸೇರಿದಂತೆ ಜೈಲಿನಲ್ಲಿರುವ ಪ್ರಮುಖ ಕೈದಿಗಳು ಹಾಗೂ ವಿಐಪಿ ಕೈದಿಗಳ ಬ್ಯಾರಕ್‌ಗಳಲ್ಲಿಯೂ ಸಿಸಿಬಿ ಅಧಿಕಾರಿಗಳು ಶೋಧ ನಡೆಸಿದ್ದಾರೆ.

ಶೋಧ ಕಾರ್ಯಾಚರಣೆ ವೇಳೆ ದರ್ಶನ್‌ ಸೇರಿದಂತೆ ಇತರ ಕೈದಿಗಳ ಬ್ಯಾರಕ್‌ಗಳಲ್ಲಿ ಮೊಬೈಲ್ ಅಥವಾ ಇತರೆ ನಿಷೇಧಿತ ವಸ್ತುಗಳು ಪತ್ತೆಯಾಗಿಲ್ಲ ಎಂದು ಮೂಲಗಳು ತಿಳಿಸಿವೆ.

ಜೈಲಿನಲ್ಲಿ ವಿಐಪಿ ಸೌಲಭ್ಯ ಆರೋಪ ಮತ್ತೆ ಚರ್ಚೆಗೆ

ಪ್ರಜ್ವಲ್ ರೇವಣ್ಣ ಅವರ ಬಳಿ ಮೊಬೈಲ್ ಪತ್ತೆಯಾಗಿರುವುದು ಜೈಲಿನಲ್ಲಿ ಕೆಲವು ಕೈದಿಗಳಿಗೆ ವಿಶೇಷ ಅಥವಾ ವಿಐಪಿ ಸೌಲಭ್ಯ ನೀಡಲಾಗುತ್ತಿದೆ ಎಂಬ ಆರೋಪಕ್ಕೆ ಮತ್ತೊಮ್ಮೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಜೈಲು ಆಡಳಿತದ ಭದ್ರತೆ ಮತ್ತು ಕೈದಿಗಳ ಮೇಲ್ವಿಚಾರಣೆ ಕುರಿತು ಪ್ರಶ್ನೆಗಳು ಎದ್ದಿವೆ.

ಮೊಬೈಲ್ ಫೋನ್ ಪತ್ತೆಯಾದ ಹಿನ್ನೆಲೆಯಲ್ಲಿ ಅದರ ಬಳಕೆಯ ಅವಧಿ, ಯಾರೊಂದಿಗೆ ಸಂಪರ್ಕ ಸಾಧಿಸಲಾಗಿತ್ತು ಮತ್ತು ಜೈಲಿನೊಳಗೆ ಅದು ಹೇಗೆ ಪ್ರವೇಶಿಸಿತು ಎಂಬ ಕುರಿತು ತನಿಖೆ ಮುಂದುವರಿಯಲಿದೆ.

error: Content is protected !!