ಬೆಂಗಳೂರು, ಆ. 12(kannadapost.com): ಆಹಾರ ಸಂಗ್ರಹಣೆ ಮತ್ತು ನಿರ್ವಹಣೆಯಲ್ಲಿ ನೈರ್ಮಲ್ಯ ಕೊರತೆ ಸೇರಿದಂತೆ ಹಲವು ಆಹಾರ ಸುರಕ್ಷತಾ ನಿಯಮಗಳ ಉಲ್ಲಂಘನೆಗಳು ಪತ್ತೆಯಾದ ಹಿನ್ನೆಲೆಯಲ್ಲಿ ಕರ್ನಾಟಕ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆ ಅಧಿಕಾರಿಗಳು ಬೆಂಗಳೂರಿನಲ್ಲಿ ಕ್ವಿಕ್-ಕಾಮರ್ಸ್ ಸಂಸ್ಥೆ ಝೆಪ್ಟೋಗೆ ಸೇರಿದ ಗೋದಾಮು ಹಾಗೂ ಇಂದಿರಾ ಕ್ಯಾಂಟೀನ್ ವಿರುದ್ಧ ಕ್ರಮ ಕೈಗೊಂಡಿದ್ದಾರೆ.
ಹೊಸಕೋಟೆ ತಾಲೂಕಿನ ನಿಪ್ಪಾನ್ ಎಕ್ಸ್‌ಪ್ರೆಸ್ ಪ್ರದೇಶದಲ್ಲಿರುವ ಝೆಪ್ಟೋ ಗೋದಾಮಿನಲ್ಲಿ ಅಧಿಕಾರಿಗಳು ತಪಾಸಣೆ ನಡೆಸಿದ್ದು, ಆಹಾರ ಸುರಕ್ಷತೆ ಮತ್ತು ಮಾನದಂಡಗಳ ಕಾಯ್ದೆ, 2006ರ ಅಡಿಯಲ್ಲಿ ಗುಣಮಟ್ಟ, ಸುರಕ್ಷತೆ, ಸಂಗ್ರಹಣೆ, ಲೇಬಲಿಂಗ್ ಹಾಗೂ ಆಹಾರ ನಿರ್ವಹಣಾ ಕ್ರಮಗಳನ್ನು ಪರಿಶೀಲಿಸಿದ್ದಾರೆ.
ಝೆಪ್ಟೋ ಗೋದಾಮಿಗೆ ಬೀಗ
ತಪಾಸಣೆ ವೇಳೆ ಅಶುದ್ಧ ಆಹಾರ, ಅನುಚಿತ ಲೇಬಲಿಂಗ್, ತಪ್ಪಾದ ಬ್ರ್ಯಾಂಡ್ ಬಳಕೆ ಹಾಗೂ ಆಹಾರ ನಿರ್ವಹಣೆ ಮತ್ತು ಸಂಗ್ರಹಣೆಯಲ್ಲಿ ನಿಯಮ ಉಲ್ಲಂಘನೆಗಳು ಪತ್ತೆಯಾಗಿವೆ ಎಂದು ಇಲಾಖೆ ತಿಳಿಸಿದೆ.
ಈ ಹಿನ್ನೆಲೆಯಲ್ಲಿ ಅನ್ವಯವಾಗುವ FSSAI ನಿಯಮಗಳಡಿ ಗೋದಾಮನ್ನು ಸೀಲ್ ಮಾಡಲಾಗಿದ್ದು, ಸಂಬಂಧಪಟ್ಟವರಿಗೆ ನೋಟಿಸ್ ಜಾರಿ ಮಾಡಲಾಗಿದೆ. ಮುಂದಿನ ಕಾನೂನು ಕ್ರಮಕ್ಕಾಗಿ ಪ್ರಕರಣವನ್ನು ಸಂಬಂಧಪಟ್ಟ ನಿರ್ಣಯಾಧಿಕಾರಿಯ ಮುಂದೆ ಹಾಜರುಪಡಿಸಲು ಶಿಫಾರಸು ಮಾಡಲಾಗಿದೆ.
ಮೂರು ಇಂದಿರಾ ಕ್ಯಾಂಟೀನ್‌ಗಳಲ್ಲಿ ತಪಾಸಣೆ
ಇದೇ ವೇಳೆ ಗೊಟ್ಟಿಗೆರೆ, ಸಿಂಗಸಂದ್ರ ಹಾಗೂ ಲಿಂಗರಾಜಪುರದಲ್ಲಿರುವ ಮೂರು ಇಂದಿರಾ ಕ್ಯಾಂಟೀನ್‌ಗಳಲ್ಲಿ ಅಧಿಕಾರಿಗಳು ತಪಾಸಣೆ ನಡೆಸಿದ್ದಾರೆ.
ತಪಾಸಣೆಯಲ್ಲಿ ಲೇಬಲಿಂಗ್ ಸಮಸ್ಯೆ, ತಪ್ಪಾದ ಬ್ರ್ಯಾಂಡ್ ಬಳಕೆ ಹಾಗೂ FSSAI ನಿಯಮಗಳ ಇತರ ಉಲ್ಲಂಘನೆಗಳು ಪತ್ತೆಯಾಗಿವೆ ಎಂದು ಇಲಾಖೆ ತಿಳಿಸಿದೆ.
ಇವುಗಳಲ್ಲಿ ಗೊಟ್ಟಿಗೆರೆ ಇಂದಿರಾ ಕ್ಯಾಂಟೀನ್‌ಗೆ ಸೀಲ್ ಹಾಕಲಾಗಿದ್ದು, ಮೂರು ಕ್ಯಾಂಟೀನ್‌ಗಳಿಗೂ ನೋಟಿಸ್ ಜಾರಿ ಮಾಡಲಾಗಿದೆ. ಮುಂದಿನ ಕಾನೂನು ಕ್ರಮಕ್ಕಾಗಿ ಪ್ರಕರಣಗಳನ್ನು ಶಿಫಾರಸು ಮಾಡಲಾಗಿದೆ.
ಆಹಾರ ಮಾದರಿಗಳು ಪ್ರಯೋಗಾಲಯಕ್ಕೆ
ತಪಾಸಣೆಯ ವೇಳೆ ಬೇಳೆಕಾಳುಗಳು, ಅರಿಶಿನ ಪುಡಿ, ಅಡುಗೆ ಎಣ್ಣೆ, ಬೆಲ್ಲ, ಉಪ್ಪು, ಸಕ್ಕರೆ ಹಾಗೂ ಸಿದ್ಧಪಡಿಸಿದ ಆಹಾರದ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆಗಾಗಿ ಪ್ರಯೋಗಾಲಯಗಳಿಗೆ ಕಳುಹಿಸಲಾಗಿದೆ.
ಆಹಾರ ಸುರಕ್ಷತಾ ನಿಯಮಗಳನ್ನು ಉಲ್ಲಂಘಿಸುವ ಯಾವುದೇ ಆಹಾರ ವ್ಯವಹಾರಗಳ ವಿರುದ್ಧ ಕಠಿಣ ಕ್ರಮ ಮುಂದುವರಿಸಲಾಗುವುದು. ಸಾರ್ವಜನಿಕರಿಗೆ ಸುರಕ್ಷಿತ ಹಾಗೂ ಆರೋಗ್ಯಕರ ಆಹಾರ ದೊರೆಯುವಂತೆ ಇಂತಹ ತಪಾಸಣಾ ಕಾರ್ಯಾಚರಣೆಗಳನ್ನು ಮುಂದುವರಿಸಲಾಗುವುದು ಎಂದು ಇಲಾಖೆ ತಿಳಿಸಿದೆ.












