ಹಾಸನ: ಬಿಡದಿ ಟೌನ್‌ಶಿಪ್ ವಿಚಾರದಲ್ಲಿ ಅತ್ಯಂತ ಹೇಯ ಕೃತ್ಯ ಮಾಡಲುರಾಜ್ಯ ಸರ್ಕಾರ ಮುಂದಾಗಿದೆ ಎಂದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಕಿಡಿಕಾರಿದರು.
ಹೊಳೆನರಸೀಪುರ ತಾಲ್ಲೂಕಿನ ಹರದನಹಳ್ಳಿಯಲ್ಲಿ ಸೋಮವಾರ ಸಂಜೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಪೊಲೀಸ್ ಅಧಿಕಾರಿಗಳ ಬಗ್ಗೆ ಮಾತನಾಡಲ್ಲ. ಭಾನುವಾರ ಸಿಎಂ ಯಾರಿಗೂ ಬಲವಂತ ಇಲ್ಲ ಎಂದಿದ್ದಾರೆ. ಹಾಗಿದ್ದರೆ ಇಂದು ಪಾದಯಾತ್ರೆ ಯಾಕೆ ತಡೆದರು ಎಂದು ಖಾರವಾಗಿ ಪ್ರಶ್ನಿಸಿದದರು.
ಇದು ನಿಗೂಢ ಪ್ರಶ್ನೆ, ಇಂದು ಸುಮಾರು ೩೫-೪೦ ಸಾವಿರ ಖಾಲಿ ನಿವೇಶನ ಬಿಡಿಎ ವ್ಯಾಪ್ತಿಯಲ್ಲಿವೆ. ಹೀಗಿರುವಾಗ ಯಾರು ಕೃಷಿಯನ್ನೇ ನಂಬಿ ಜೀವನ ನಡೆಸುತ್ತಿದ್ದಾರೆಯೋ ಅವರಿಗೆ ತೊಂದರೆ ಕೊಡುವುದು, ಅವರನ್ನು ಬೀದಿ ಪಾಲು ಮಾಡುವುದು ಎಷ್ಟು ಸರಿ, ಯಾರಿಗಾಗಿ ಈ ಬಡಾವಣೆ ಎಂದು ಆಕ್ರೋಶ
ಹೊರ ಹಾಕಿದರು.
ಹೋರಾಟ ಕೇವಲ ಒಕ್ಕಲಿಗರಿಗಾಗಿ ಅಲ್ಲ, ಸಾಕಷ್ಟು ಹಿಂದುಳಿದ ಸಣ್ಣ ಸಮುದಾಯಗಳಿವೆ. ಅವರ ಹೊಟ್ಟೆ ಮೇಲೆ ಹೊಡೆಯುವ ಕೆಲಸ ಆಗಬಾರದು ಎಂದರು. ಸರ್ಕಾರದ ಕಡೆಯಿಂದ ಪೊಲೀಸರ ಮೇಲೆ ಒತ್ತಡ ಹಾಕಿದ್ದಾರೆ, ನಾಳೆ ಬೆಂಗಳೂರಿಗೆ ಹೊಗ್ತೇನೆ, ನಿಖಿಲ್ ಹಾಗೂ ನಾಯಕರಿಂದ ಮಾಹಿತಿ ಪಡೆಯುತ್ತೇನೆ. ಬೆಂಗಳೂರಿನ ಫ್ರೀಡಂಪಾರ್ಕ್‌ನಲ್ಲಿ ಅಗಸ್ಟ್ ೧೮ ರಂದು ಸಭೆ ನಡೆಸಲು ತೀರ್ಮಾನ ಮಾಡಲಾಗಿದೆ ಎಂದ ಗೌಡರು, ಈ ಹೋರಾಟದಿಂದ ಹಿಂದಿರುವ ಪ್ರಶ್ನೆ ಇಲ್ಲ ಎಂದು ಸರ್ಕಾರಕ್ಕೆ ನೇರ ಸವಾಲು ಹಾಕಿದರು.
ಫ್ರೀಡಂ ಪಾರ್ಕ್‌ನಲ್ಲಿ ಸಹಸ್ರಾರು ಕಾರ್ಯಕ್ರಮ ಮಾಡಿದ್ದಾರೆ, ನಾನೇ ಮಾಡಿದ್ದೇನೆ. ಈ ಸರ್ಕಾರದವರು ಏನು ನಿರ್ಧಾರ ಮಾಡುತ್ತಾರೋ, ಅದನ್ನು ನೋಡಿಕೊಂಡು ಆನಂತರ ನಾವು ತೀರ್ಮಾನ ಮಾಡ್ತೇವೆ ಎಂದು ಸ್ಪಷ್ಟಪಡಿಸಿದರು.
ಮೂರು ವರ್ಷ ನೀವೇ ಡಿಸಿಎಂ ಆಗಿರಲಿಲ್ಲವೇ, ಬೆಂಗಳೂರನ್ನ ಐದು ಕಾರ್ಪೊರೇಷನ್ ಮಾಡಿದ್ದು ನೀವೇ ಅಲ್ಲವೇ, ಸಿಎಂ ಆಗಿದ್ದ ಸಿದ್ದರಾಮಯ್ಯ ಅವರನ್ನು ಇಳಿಸಿ ಒಂದೇ ತಿಂಗಳಿಗೆ ಈ ಪ್ರಾಜೆಕ್ಟ್ ಯಾಕೆ ಎಂದು ಗೌಡರು ಸಿಎಂ ಡಿ.ಕೆ.ಶಿವಕುಮಾರ್ ಅವರನ್ನು ಪ್ರಶ್ನಿಸಿದರು.
ದೆಹಲಿ ನಾಯಕರಿಗೆ ಕೊಟ್ಟ ಮಾತಿನಂತೆ ತರಾತುರಿಯಲ್ಲಿ ಈ ಯೋಜನೆ ಮಾಡಲು ಹೊರಟಿದ್ದೀರಾ ಎಂದ ಮಾಜಿ ಪ್ರಧಾನಿ, ಏನೇ ಆಗಲಿ ಬಡವರ ಪರವಾಗಿ ನಾವು ಈ ಹೋರಾಟ ಮುಂದುವರೆಸುತ್ತೇವೆ ಎಂದು ಹೇಳಿದರು.











