ಚನ್ನರಾಯಪಟ್ಟಣ: ‘ಮಾದಕ ವಸ್ತುಗಳ ಬಳಕೆಯಿಂದ ಜೀವ ಹಾಗೂ ಜೀವನ ನಾಶ’

ಚನ್ನರಾಯಪಟ್ಟಣ: ಮಾದಕ ವಸ್ತುಗಳ ಬಳಕೆ ಪರಿಣಾಮ ಯುವ ಸಮುದಾಯವು ದಾರಿ ತಪ್ಪುತ್ತಿದ್ದು ಸಮಾಜದ ಸ್ವಾಸ್ತ್ಯ ಹಾಳಾಗುತ್ತಿದೆ ಎಂದು ಹಿರೀಸಾವೆ ಪಿಎಸ್ಐ ರೂಪದೇವಿ ಬಿರಾದರ್ ಹೇಳಿದರು.

ತಾಲ್ಲೂಕಿನ ಹಿರೀಸಾವೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಚನ್ನರಾಯಪಟ್ಟಣ ರೋಟರಿ ಕ್ಲಬ್ ಸಹಯೋಗದಲ್ಲಿ ಶನಿವಾರ ಆಯೋಜಿಸಿದ್ದ ರಸ್ತೆ ಸುರಕ್ಷತೆ ಮತ್ತು ಮಾದಕ ವಸ್ತುಗಳ ದುಷ್ಪರಿಣಾಮಗಳ ಕುರಿತ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿ, ಮಾದಕ ವಸ್ತುಗಳ ಬಳಕೆ ಯುವ ಸಮುದಾಯಗಳ ಬದುಕಿಗೆ ಮಾರಕ ಎಂದರು.

ಮೊದಲೆಲ್ಲ ನಗರ ಪ್ರದೇಶಗಳಲ್ಲಿ ಮಾತ್ರ ದೊರೆಯುತ್ತಿದ್ದ ಮಾದಕ ವಸ್ತುಗಳು ಇತ್ತೀಚಿನ ದಿನಗಳಲ್ಲಿ ಗ್ರಾಮೀಣ ಭಾಗದಲ್ಲಿಯೂ ಅಕ್ರಮವಾಗಿ ಸಂಚರಿಸುತ್ತಿವೆ. ಇದು ಅಪಾಯದ ಮುನ್ಸೂಚನೆಯಾಗಿದ್ದು ಶೈಕ್ಷಣಿಕ ವ್ಯವಸ್ಥೆಯ ಮೇಲೆ ಅತಿ ಹೆಚ್ಚು ಪರಿಣಾಮ ಬೀರಲಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಹಿರೀಸಾವೆ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಶಿವಸ್ವಾಮಿ ಮಾತನಾಡಿ, ಮಾದಕ ದ್ರವ್ಯಗಳ ಅಥವಾ ವಸ್ತುಗಳ ಬಳಕೆಯು ಆರೋಗ್ಯಕ್ಕೆ ಹಾನಿಕಾರಕವಾಗಲಿದೆ. ಶೋಕಿ ಸಲುವಾಗಿ ಒಂದು ಸಿಗರೇಟ್ ಸೇವನೆ ಮಾಡಿದರೆ ಅದರಿಂದ ಆತನ 20 ಸೆಕೆಂಡ್ ಆಯಸ್ಸು ಕಡಿಮೆಯಾಗುವ ಬಗ್ಗೆ ಸಂಶೋಧನೆಯಲ್ಲಿ ತಿಳಿದುಬಂದಿದೆ. ದಯವಿಟ್ಟು ಮಾದಕ ವಸ್ತುಗಳಿಂದ ದೂರ ಇರುವುದು ಆರೋಗ್ಯಕರ ಸಂಗತಿ ಎಂದರು.

ಧೂಮಪಾನ, ಮದ್ಯಪಾನ ಹಾಗೂ ಮಾದಕ ವಸ್ತುಗಳ ಬಳಕೆಯ ಬದಲಾಗಿ ಹಣ್ಣು, ತರಕಾರಿ ಹಾಗೂ ಪೌಷ್ಟಿಕ ಆಹಾರಗಳ ಸೇವನೆ ಮಾಡುವ ಮೂಲಕ ತಮ್ಮ ಆರೋಗ್ಯವನ್ನು ವೃದ್ಧಿಪಡಿಸಿಕೊಳ್ಳಬೇಕು. ಇದರಿಂದ ಸಮಾಜವೂ ಸಹ ಆರೋಗ್ಯದಿಂದ ಇರುತ್ತದೆ ಎಂದು ಸಲಹೆ ನೀಡಿದರು.

ವೃತ್ತ ನಿರೀಕ್ಷಕ ಮಂಜೇಗೌಡ ಮಾತನಾಡಿ, 18 ವರ್ಷ ತುಂಬದ ಮಕ್ಕಳಿಗೆ ದ್ವಿಚಕ್ರ ಹಾಗು ಇತರೆ ವಾಹನಗಳನ್ನು ಚಾಲನೆ ಮಾಡಲು ನೀಡುವುದು ಕಾನೂನು ಬಾಹಿರ ಅಪರಾಧವಾಗಲಿದೆ. ಹೆಲ್ಮೆಟ್ ಧರಿಸದೆ ಹಾಗೂ ಪರವಾನಗಿ ಜೊತೆಗೆ ವಿಮೆ ಹೊಂದಿಲ್ಲದಿದ್ದರೆ ಅಪಘಾತ ನಡೆದ ಸಂದರ್ಭದಲ್ಲಿ ಕಾನೂನು ತೊಡಕು ಉಂಟಾಗಲಿದೆ. ದಯವಿಟ್ಟು ಸಂಚಾರ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವುದು ಸೂಕ್ತ ಎಂದರು.

ರೋಟರಿ ಸಂಸ್ಥೆಯ ಅಧ್ಯಕ್ಷ ಹೆಚ್.ಎನ್. ಶಿವನಂಜೇಗೌಡ ಮಾತನಾಡಿ, ಶೈಕ್ಷಣಿಕ, ಸಾಮಾಜಿಕ ಹಾಗೂ ಆರ್ಥಿಕವಾಗಿ ಸೇವೆ ಮಾಡುವುದು ರೋಟರಿ ಸಂಸ್ಥೆಯ ಮುಖ್ಯ ಉದ್ದೇಶವಾಗಿದೆ. ಈ ನಿಟ್ಟಿನಲ್ಲಿ ತಾಲ್ಲೂಕಿನಾದ್ಯಂತ ಶಾಲಾ ಕಾಲೇಜುಗಳಿಗೆ ಭೇಟಿ ನೀಡಿ ಅಗತ್ಯ ಪರಿಕರಗಳನ್ನು ನೀಡುವುದರ ಜೊತೆಗೆ ಇಂತಹ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದರು.

ರೋಟರಿ ಸಂಸ್ಥೆ ವತಿಯಿಂದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ 5 ಸಿಮೆಂಟ್ ಬೆಂಚ್ ಗಳನ್ನು ನೀಡಲಾಯಿತು. ಕಾಲೇಜು ವತಿಯಿಂದ ರೋಟರಿ ಸಂಸ್ಥೆಯ ಅಧ್ಯಕ್ಷ ಎಚ್.ಎನ್.ಶಿವನಂಜೇಗೌಡ ಹಾಗೂ ಪಿಎಸ್ಐ ರೂಪಾದೇವಿ ಬೀರಾದರ್ ಅವರನ್ನು ಅಭಿನಂದಿಸಲಾಯಿತು. ಸಾಮಾಜಿಕ ಚಿಂತಕ ನಿಂಬೆಹಳ್ಳಿ ಮಂಜುನಾಥ ಅವರು ಕಾಲೇಜಿನ ಆವರಣಕ್ಕೆ ತಂತಿಬೇಲಿ ನಿರ್ಮಿಸಿ ಕೊಡುವುದಾಗಿ ತಿಳಿಸಿದರು.

ರೋಟರಿ ಕ್ಲಬ್ ನ ಕಾರ್ಯದರ್ಶಿ ಹರೀಶ್,r ಸದಸ್ಯರಾದ ಸಿ.ಎನ್‌.ನವೀನ್, ಬಿ.ಬಿ.ವಿಜಯ್, ಪದ್ಮನಾಭ, ಎನ್.ಮಂಜುನಾಥ್, ರಾಜು, ಕಿಶೋರ್, ಕಾಲೇಜಿನ ಪ್ರಾಧ್ಯಾಪಕರಾದ ಎಚ್.ಜೆ.ಹರೀಶ್, ಮಂಜುನಾಥ್, ಕುಮಾರ್, ಆಶಾರಾಣಿ ಹಾಗೂ ವಿದ್ಯಾರ್ಥಿಗಳು ಇದ್ದರು.